ಗುರುವಾರ , ಮೇ 26, 2022
30 °C

ಕಾಳಿ ಕಣಿವೆ ಪುನರುಜ್ಜೀವನಕ್ಕೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನ ಕೆರವಡಿಯಲ್ಲಿ ಭಾನುವಾರ ನಡೆದ `ಕಾಳಿ ಕಣಿವೆ ಪರಿಸರ ಜಾಗೃತಿ ಸಮಾವೇಶ~ ಕಾಳಿ ನದಿ ಸಂರಕ್ಷಣೆ ಹಾಗೂ ಜನರಿಗೆ ಮೂಲ ಸೌಕರ್ಯ ಒದಗಿಸುವ ಕುರಿತ ಮಹತ್ವದ ನಿರ್ಣಯ ಕೈಗೊಂಡಿತು.ಕಾಳಿನದಿ ಕಣಿವೆ ಆಣೆಕಟ್ಟು, ಕಾರ್ಖಾನೆ, ಪರಮಾಣು ಸ್ಥಾವರದಂತಹ ದೊಡ್ಡ ಯೋಜನೆಗಳಿಂದ ಮಲಿನಗೊಳ್ಳುತ್ತಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಳಿನದಿ ಕಣಿವೆಯ ಜೀವ ವೈವಿಧ್ಯ ಸಂರಕ್ಷಣೆಗೆ ವಿಶೇಷವಾದ `ಸಮಗ್ರ ಕಾಳಿ ಕಣಿವೆ ಪುನರುಜ್ಜೀವನ~ ಯೋಜನೆ ರೂಪಿಸಬೇಕು. ಅಣಶಿ, ದಾಂಡೇಲಿ ಅಭಯಾರಣ್ಯಗಳಲ್ಲಿರುವ ವನವಾಸಿಗಳು ಸೇರಿದಂತೆ ಕಾರವಾರ, ಜೋಯಿಡಾ, ಯಲ್ಲಾಪುರ ಕಾಳಿಕಣಿವೆ ವನವಾಸಿಗಳಿಗೆ ಹಾಗೂ ರೈತರಿಗೆ ಸೌರವಿದ್ಯುತ್ ಸೌಲಭ್ಯ ನೀಡಲು ಸರ್ಕಾರ ಯೋಜನೆ ರೂಪಿಸಬೇಕು ಎನ್ನುವ ನಿರ್ಣಯವನ್ನು ಸಭೆ ಕೈಗೊಂಡಿದೆ.ಕಾಳಿ ಕಣಿವೆಯ ಜಲಾನಯನ, ಅರಣ್ಯ ರಕ್ಷಣೆ ಯೋಜನೆಗಳ ಪ್ರಾಯೋಜಕತ್ವವನ್ನು ಕರ್ನಾಟಕ ವಿದ್ಯುತ್ ನಿಗಮ ಮತ್ತು ಕೈಗಾ ಪರಮಾಣು ವಿದ್ಯುತ್ ಸ್ಥಾವರ ವಹಿಸಿಕೊಳ್ಳಬೇಕು. ಕಣಿವೆಯ ರೈತರು, ವನವಾಸಿಗಳ ಸಮಾಜ ಕಲ್ಯಾಣ, ಶಿಕ್ಷಣ ಕಾರ್ಯಗಳಿಗೆ ಕೆಪಿಸಿ ಅನುದಾನ ನೀಡಬೇಕು ಮತ್ತು ವೆಸ್ಟ್‌ಕೋಸ್ಟ್ ಪೇಪರ್ ಮಿಲ್‌ನ ಮಲೀನ ನೀರು ಕಾಳಿ ನದಿ ಸೇರಲು ಬಿಡಬಾರದು ಎನ್ನುವುದು ನಿರ್ಣಯದಲ್ಲಿ ಸೇರಿದೆ.ಕೈಗಾ ಪರಮಾಣು ವಿದ್ಯುತ್ ಸ್ಥಾವರದಿಂದ ಕಾಳಿ ಪ್ರದೇಶದಲ್ಲಿ ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ವ್ಯಾಪಕವಾಗಿದೆ. ಮುಂಬೈನ ಟಾಟಾ ಸಂಶೋಧನಾ ಕೇಂದ್ರ ಸಮೀಕ್ಷೆ ನಡೆಸುತ್ತಿದೆ. ಈ ಸಮೀಕ್ಷೆ ಕಾರ್ಯದಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯವರನ್ನು ಕೈಗಾ ಆಡಳಿತ ಮಂಡಳಿ ಆಹ್ವಾನಿಸಬೇಕು ಎನ್ನುವ ಅಂಶ ನಿರ್ಣಯದಲ್ಲಿದೆ.

 

ಕದ್ರಾದಿಂದ ಕಾರವಾರದವರೆಗೆ ಕಾಳಿನದಿ ತೀರದ ರೈತರ ಭೂಮಿಗೆ ನೀರೊದಗಿಸಲು ಏತ ನಿರಾವರಿ ಯೋಜನೆಯನ್ನು ಸರ್ಕಾರ ಪ್ರಾರಂಭಿಸಬೇಕು. ಈ ಎಲ್ಲ ನಿರ್ಣಯಗಳ ಜಾರಿಗೆ ಮುಖ್ಯಮಂತ್ರಿ, ಜಿಲ್ಲೆಯ ಜನಪ್ರತಿನಿಧಿಗಳು, ಕರ್ನಾಟಕ ವಿದ್ಯುತ್ ನಿಗಮ, ಪೇಪರ್‌ಮಿಲ್ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಬೇಕು ಎಂದು ಸಭೆ ನಿರ್ಣಯ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.