ಶುಕ್ರವಾರ, ನವೆಂಬರ್ 15, 2019
27 °C

`ಕಾಳಿ ನದಿ ಉಳಿಸಲು ಹೊಸ ಯೋಜನೆ'

Published:
Updated:

ಶಿರಸಿ: ಕಾಳಿ ಬಚಾವೋ ಆಂದೋಲನದ ದಶಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಾಳಿ ನದಿ ಉಳಿಸಲು ಹೊಸ ಯೋಜನೆ ಕೈಗೆತ್ತಿಕೊಳ್ಳಲಿದ್ದು, ಕಾಳಿಕೊಳ್ಳದಲ್ಲಿ ವಾಸಿಸುವ ಎರಡು ಲಕ್ಷ ಜನರ ಸಹಭಾಗಿತ್ವ ಮಹತ್ವದ್ದಾಗಿದೆ ಎಂದು ಆಂದೋಲನದ ಸಂಯೋಜಕ ಪಾಂಡುರಂಗ ಹೆಗಡೆ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, `ಏ. 4ರಂದು ಆಂದೋಲನ ದಶವರ್ಷ ಪೂರೈಸಿದ ಸಂದರ್ಭದಲ್ಲಿ ಚಾಂದೇವಾಡಿ, ಗಣೇಶಗುಡಿ ಹಾಗೂ ದಾಂಡೇಲಿಗೆ ಭೇಟಿ ನೀಡಿ ಕಾಳಿ ನದಿಯ ಆರೋಗ್ಯವನ್ನು ಪರಿಶೀಲಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ' ಎಂದು ತಿಳಿಸಿದ್ದಾರೆ.`ದಾಂಡೇಲಿಗೆ ಭೇಟಿ ನೀಡಿದಾಗ ಅಲ್ಲಿನ ಕಾಗದ ಕಾರ್ಖಾನೆಯ ಕಲ್ಮಶ ನೇರವಾಗಿ ಕಾಳಿ ನದಿಗೆ ಸೇರಿ ನದಿಯ ನೀರು ಮಲೀನವಾಗುತ್ತಿರುವುದನ್ನು ದಾಂಡೇಲಿಯಪ್ಪಾ ದೇವಸ್ಥಾನದ ಹತ್ತಿರ ಪ್ರತ್ಯಕ್ಷವಾಗಿ ವೀಕ್ಷಿಸಲಾಯಿತು. ರಾಸಾಯನಿಕ ಹೊತ್ತ ಈ ಮಲೀನ ನೀರು ಶ್ವಾಸಕೋಶ ಹಾಗೂ ಜಠರದ ಮೇಲೆ ಪರಿಣಾಮ ಬೀರಿ ಕ್ಯಾನ್ಸರ್ ಕಾಯಿಲೆಗೆ ಅನುವು ಮಾಡಿಕೊಡುತ್ತಿದೆ' ಎಂದು ನಾಟಿ ವೈದ್ಯ ಶ್ರೀಧರ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.ಕಾಗದ ಕಾರ್ಖಾನೆಯಿಂದ ಉಂಟಾಗುವ ಜಲ ಮತ್ತು ವಾಯು ಮಾಲಿನ್ಯದ ವಿರುದ್ಧ ಕಾನೂನು ಸಮರ, ಜಾಥಾ, ಜನಜಾಗೃತಿ ಕಾರ್ಯಕ್ರಮ ರೂಪಿಸಲು ಆಂದೋಲನದ ಅವಲೋಕನಾ ತಂಡ ನಿರ್ಧರಿಸಿದೆ.ಕಾಳಿ ನದಿಯ ಪ್ರಮುಖ ಉಪನದಿ ಪಾಂಡರಿ ಚಾಂದೇವಾಡಿಯಲ್ಲಿ ಹರಿಯುತ್ತಿದ್ದು, ಈ ಹಿಂದೆ ಇಲ್ಲಿ ನೂರಾರು ಯಂತ್ರಗಳನ್ನು ಬಳಸಿ ಮರಳು ತೆಗೆಯುವ ಕೆಲಸ ನಡೆಯುತ್ತಿತ್ತು. ಆಂದೋಲನದ ಸತತ ಹೋರಾಟದ ಪರಿಣಾಮದಿಂದ ಎಂಟು ವರ್ಷಗಳಿಂದ ಮರಳು ಗಣಿಗಾರಿಕೆ ನಿಂತಿದೆ. ನದಿಯ ದಡದ ಪ್ರಕೃತಿ ಪುನಃ ಚಿಗುರಿ, ನೀರು ಸ್ವಚ್ಛವಾಗಿ ಹರಿಯತೊಡಗಿರುವುದನ್ನು ತಂಡ ವೀಕ್ಷಿಸಿ ಸಮಾಧಾನ ವ್ಯಕ್ತಪಡಿಸಿತು.ತಂಡವು ಜಗಲಬೇಟದಲ್ಲಿರುವ ಲೇಖಕ ಮನೋಹರ ಮಡಗಾಂವಕರ ಮನೆ ಬರ್ಬೂಸಾಕ್ಕೆ ಭೇಟಿ ನೀಡಿ ಅವರು ಕಾಳಿ ಬಚಾವೋಕ್ಕೆ ನೀಡಿದ ಬೆಂಬಲವನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಿತು. ಕಾಳಿ ಪಾದಯಾತ್ರೆಗೆ, ಕುಂಡೀಲ ಕಂಪೆನಿ ವಿರುದ್ಧ ಹೋರಾಟಕ್ಕೆ ಹಾಗೂ ಕಾಳಿ ಬಚಾವೋ ಆಂದೋಲನಕ್ಕೆ ನಿರಂತರ ಬೆಂಬಲ ನೀಡುತ್ತಿದ್ದ ಮಡಗಾಂವಕರ ಆಂದೋಲನಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ವಾಸಿಸುತ್ತಿದ್ದ ಬರ್ಬೂಸಾ ಬಂಗಲೆಯನ್ನು ಕುಪ್ಪಳ್ಳಿಯ ಕುವೆಂಪು ಸ್ಮಾರಕದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ತಂಡ ಚರ್ಚಿಸಿತು. ಸಾಮಾಜಿಕ ಕಾರ್ಯಕರ್ತ ವಿ.ಪಿ. ಹೆಗಡೆ ವೈಶಾಲಿ ಇತರರು ಇದ್ದರು.

ಪ್ರತಿಕ್ರಿಯಿಸಿ (+)