ಬುಧವಾರ, ಏಪ್ರಿಲ್ 21, 2021
30 °C

ಕಾಳುಮೆಣಸು ಬಿಡಿಸುವ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಕಾಳು ಮೆಣಸಿನ ಹಂಗಾಮು ಪ್ರಾರಂಭ ವಾಗಿದೆ. ಕಾಳು ಮೆಣಸಿನ ಕೊಯ್ಲು ಮಾಡಿದ ರೈತರಿಗೆ ಕಾಳನ್ನು ಪ್ರತ್ಯೇಕಿಸುವುದು ಒಂದು ಕಿರಿಕಿರಿ ಕೆಲಸವೇ ಸರಿ. ಕೊಡಗು ಜಿಲ್ಲೆಯಲ್ಲಿ ಕೃಷಿಕರು ಕಾಳು ಮೆಣಸನ್ನು ಪ್ರಮುಖ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ.

ಇಂದಿನ ದಿನಗಳಲ್ಲಿ ಕಾರ್ಮಿಕರ ಅಭಾವದಿಂದಾಗಿ ಕಾಳು ಮೆಣಸನ್ನು ಕೀಳಲು ಹರಸಾಹಸ ಪಡಬೇಕಾಗಿದೆ. ಕಾಳು ಮೆಣಸನ್ನು ಕಿತ್ತ ಬಳಿಕ ಬೇರ್ಪಡಿಸುವುದು ಮಹಾ ರಗಳೆ ಕೆಲಸವಾಗಿ ಕಾಣಿಸುತ್ತದೆ.

ಕಾರ್ಮಿಕರ ಕೊರತೆಯಿಂದ ಬೇಸಾಯ, ತೋಟಗಾರಿಕಾ ಕ್ಷೇತ್ರಗಳು ನಲುಗುತ್ತಿರುವ ಈ ದಿನಗಳಲ್ಲಿ ಕೆಲ ಯಂತ್ರಗಳು ರೈತರಿಗೆ ವರದಾನ ವಾಗುತ್ತಿವೆ. ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರೈತರೇ ಕೆಲವು ಯಂತ್ರಗಳನ್ನು ಆವಿಷ್ಕರಿಸಿ ಬಳಸುವ ಪ್ರಯತ್ನ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಮಧ್ಯಮ ವರ್ಗದ ಬೆಳೆಗಾರರಿಗೆ ನೆರವಾಗುವ ಯಂತ್ರಗಳು ಈಗ ಲಭ್ಯವಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೋಡಪದವಿನ ಮಹಾಬಲೇಶ್ವರ ಭಟ್ ಎಂಬುವರು ಅವಿಷ್ಕರಿಸಿರುವ ಈ ಯಂತ್ರದಲ್ಲಿ ಕಾಳು ಮೆಣಸನ್ನು ಸುಲಭವಾಗಿ ಬಿಡಿಸಬಹುದು. ಇದು ವಿದ್ಯುತ್‌ಚಾಲಿತ ಯಂತ್ರ. ಇದರಲ್ಲಿ ಅರ್ಧ ಎಚ್.ಪಿ.ಯಿಂದ ಮೂರು ಎಚ್.ಪಿ.ವರೆಗೂ ಮೋಟಾರ್ ಅಳವಡಿಸಿದ ಯಂತ್ರಗಳು ಲಭ್ಯ. ಯಂತ್ರದ ಒಳಗಡೆ ರೋಟರಿ ಇದ್ದು, ಇದಕ್ಕೆ ಮೋಟರಿನಿಂದ ಬೆಲ್ಟ್ ಅಳವಡಿಸಲಾಗಿದೆ. ರೋಟರಿ ತಿರುಗಿದಾಗ ಕಾಳು ಒಂದು ಕಡೆ, ಅದರ ಕಸ ಮತ್ತೊಂದು ಕಡೆ ಬೀಳುತ್ತದೆ.

ವಿವಿಧ ಮಾದರಿಯಲ್ಲಿ ಈ ಯಂತ್ರಗಳು ಸಿದ್ದವಾಗಿವೆ. ಗಂಟೆಗೆ ಒಂದು ಕ್ವಿಂಟಾಲ್ ಕಾಳು ಬಿಡಿಸುವುದರಿಂದ ಹಿಡಿದು 6-7 ಕ್ವಿಂಟಾಲ್ ಕಾಳು ವಿಂಗಡಿಸುವ ಯಂತ್ರಗಳಿವೆ. ಮಾದರಿಗೆ ತಕ್ಕಂತೆ ಬೆಲೆಗಳು ನಿರ್ಧಾರವಾಗಿದೆ. ಅರ್ಧ ಎಚ್.ಪಿ. ಯಂತ್ರ ಅಳವಡಿಸಿರುವ ಸಾಧನಕ್ಕೆ ಒಂಬತ್ತೂವರೆ ಸಾವಿರ ರೂಪಾಯಿ. ಒಂದು ಎಚ್.ಪಿ ಯಂತ್ರ ಅಳವಡಿಸಿರುವ ಸಾಧನಕ್ಕೆ ಹನ್ನೊಂದು ಸಾವಿರ ರೂಪಾಯಿ. ರೈತರು ಮುಂಗಡವಾಗಿ ಮಾಹಿತಿ ನೀಡಿ ಯಂತ್ರ ಖರೀದಿಸಬಹುದು.

ಕೊಡಗು ಜಿಲ್ಲೆಯ ಹಲವು ರೈತರು ಈ ಯಂತ್ರಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ನಾಪೋಕ್ಲುವಿನ ರೈತ ರವೀಂದ್ರ ಇಂತಹದೊಂದು ಯಂತ್ರ ಖರೀದಿಸಿದ್ದಾರೆ. ಅವರ ಪ್ರಕಾರ, ಕಾಳು ಮೆಣಸು ಬಿಡಿಸಲು ಇದು ಬಹು ಉಪಯೋಗಿ. ಕಡಿಮೆ ಶ್ರಮದಿಂದ ಹೆಚ್ಚು ಕೆಲಸ ನಿರ್ವಹಿಸಬಹುದು.

ಕಾಳು ಮೆಣಸು ಕಿತ್ತ ಬಳಿಕ ಒಂದು ದಿನ ಬಾಡಿದರೆ ಉತ್ತಮ. ಹೆಚ್ಚಿನ ಮಾಹಿತಿಗೆ ಮಹಾಬಲೇಶ್ವರ ಭಟ್ ಅವರನ್ನು ದೂರವಾಣಿ ಸಂಖ್ಯೆ 08255-267475 ಅಥವಾ ಮೊಬೈಲ್: 9448330404 ಮೂಲಕ ಸಂಪರ್ಕಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.