ಗುರುವಾರ , ಜೂಲೈ 2, 2020
23 °C

ಕಾಳು ಮೆಣಸಿಗೆ ಸೊರಗು ರೋಗವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳು ಮೆಣಸಿಗೆ ಸೊರಗು ರೋಗವೇ?

ಮಲೆನಾಡಿನ ಕಾಫಿ, ಅಡಿಕೆ ತೋಟಗಳಲ್ಲಿ ಬೆಳೆದ ಕಾಳುಮೆಣಸಿನ ಬಳ್ಳಿಗಳು ಇತ್ತೀಚಿನ ವರ್ಷಗಳಲ್ಲಿ ಸೊರಗು ರೋಗಕ್ಕೆ ತುತ್ತಾಗುತ್ತಿವೆ. ಒಂದೆರಡು ದಿನಗಳಲ್ಲಿ ರೋಗ ಹರಡಿ ಬಳ್ಳಿಗಳು ನಾಶವಾಗಿ ಬಿಡುತ್ತವೆ.ಇದಕ್ಕೆ ಕಾರಣ ವೈಜ್ಞಾನಿಕ ಬೇಸಾಯ ಕ್ರಮವನ್ನು ಅಳವಡಿಸಿಕೊಳ್ಳದೇ ಇರುವುದು. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ  ಬಹುತೇಕ ಕಾಳು ಮೆಣಸಿನ ಬಳ್ಳಿಗಳು ನಾಶವಾಗಿವೆ. ಅಳಿದುಳಿದ ಬಳ್ಳಿಗಳನ್ನು ಉಳಿಸಿಕೊಳ್ಳುವುದಕ್ಕೆ ರೈತರು ಹೆಚ್ಚಿನ ಗಮನ ಕೊಡಬೇಕು.* ಇಡೀ ತೋಟಕ್ಕೆ ರೋಗ ಬಂದ ನಂತರ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ರೋಗ ಪೀಡಿತ ಬಳ್ಳಿಗಳನ್ನು ಕಂಡ ತಕ್ಷಣ ಕಿತ್ತು ಸುಟ್ಟು ಹಾಕಬೇಕು. ಈ ಕೆಲಸ ಮಾಡುತ್ತಲೇ ಇರಬೇಕು. ಸೊರಗು ರೋಗ ಕಾಣಿಸಿಕೊಂಡ ಕೂಡಲೇ ಬಳ್ಳಿ ಕಿತ್ತು ಹಾಕಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ.* ಆರೋಗ್ಯವಂತ ಬಳ್ಳಿಗಳಿಗೆ ಜೂನ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಸಾವಯುವ ಗೊಬ್ಬರ, ಬೇವಿನ ಪುಡಿ ಹಾಗೂ 50 ಗ್ರಾಂ ಟ್ರೈಕೋಡರ್ಮ ಹಾರ್ಜೆನಿಯಂ ಅನ್ನು ಪ್ರತಿ ಬಳ್ಳಿಗೆ ಕೊಡಬೇಕು. ನಂತರ ಬುಡಕ್ಕೆ ಒಂದು ತಿಂಗಳು ಯಾವುದೇ ರಾಸಾಯನಿಕ ಗೊಬ್ಬರ ಹಾಕಬಾರದು.* ರೋಗ ರಹಿತ ಬಳ್ಳಿಗಳನ್ನು ನೆಡಬೇಕು, ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿಕೊಳ್ಳಬೇಕು. ಸಸಿಗಳನ್ನು ನಾಟಿ ಮಡುವಾಗ 10 ಗ್ರಾಂ ಟ್ರೈಕೋಡರ್ಮ ಬಳಸಬೇಕು. ಇದರಿಂದ ಬಳ್ಳಿಗಳಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ.* ಏಪ್ರಿಲ್, ಮೇ ತಿಂಗಳಲ್ಲಿ ಬಳ್ಳಿಗಳ ಬುಡಕ್ಕೆ ನೀರು ಹಾಯಿಸಬೇಕು ಹಾಗೂ ನೆರಳನ್ನು ತೆರವು ಮಾಡಬೇಕು.* ಮಳೆಗಾಲದಲ್ಲಿ ಎರಡು ಸಲ ಬೋಡೋ ದ್ರಾವಣ ಅಥವಾ ಪಂಚಗವ್ಯ ಜೀವಾಮೃತವನ್ನು ಬುಡದಿಂದ ಸಿಂಪಡಣೆ ಮಾಡಬೇಕು.* ಮಳೆಗಾಲದಲ್ಲಿ ಬಳ್ಳಿಗಳ ಬುಡದ ಮಣ್ಣು ಕೊಚ್ಚಿ ಹೋಗುವುದರಿಂದ ಜೊತೆಗೆ ಆಧಾರ ಮರಗಳ ಬೇರುಗಳು ಬೆಳೆಯುವುದರಿಂದ ಮೆಣಸಿನ ಬಳ್ಳಿಗೆ ಮಣ್ಣಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಪ್ರತಿ ವರ್ಷವು ಮೆಣಸಿನ ಬಳ್ಳಿಗಳ ಬುಡಕ್ಕೆ ಮಣ್ಣು ಮತ್ತು ದರಗುಗಳನ್ನು ಹಾಕಿ ಬುಡವನ್ನು ಏರು ಮಾಡಬೇಕು.* ಮೆಣಸಿನ ಬಳ್ಳಿಗೆ ತಲೆ ಕೂದಲಿನಂತಹ ಬೇರುಗಳಿರುತ್ತದೆ. ಇವು ಬಲು ಸೂಕ್ಷ್ಮ, ಇವುಗಳಿಗೆ ಯಾವುದೇ ತೊಂದರೆ ಆಗಬಾರದು.ಈ ಕಾರಣದಿಂದ ಬುಡದ ಬಳಿ ಅಗೆತ (ಗೊಬ್ಬರ ಹಾಕುವ ಸಮಯದಲ್ಲೂ) ಮಾಡಬಾರದು.* ರಾಸಾಯನಿಕ ಗೊಬ್ಬರವನ್ನು ಅದಷ್ಟೂ ಕಡಿಮೆ ಮಾಡಿ. ವರ್ಷಕ್ಕೆ ಪ್ರತಿ ಬಳ್ಳಿಗೆ 6 ಕೆ.ಜಿ. ಸಾವಯವ ಗೊಬ್ಬರ, 2 ಕೆ.ಜಿ. ಬೇವಿನ ಪುಡಿಯನ್ನು ಕಡ್ಡಾಯವಾಗಿ ಹಾಕಬೇಕು.ಮೆಣಸಿನ ಬಳ್ಳಿ ಆರೋಗ್ಯವಾಗಿ ಬೆಳೆದು ನಿರಂತರ ಇಳುವರಿ ನೀಡಲು ಮಣ್ಣಿನ ಫಲವತ್ತತೆ ಬಹಳ ಮುಖ್ಯ. ಮೆಣಸು ಬೆಳೆಯುವ ದೇಶಗಳಾದ ಶ್ರೀಲಂಕಾ, ವಿಯೆಟ್ನಾಂ, ಇಂಡೋನೆಷಿಯಾ ಮೊದಲಾದ ದೇಶಗಳಲ್ಲಿ ಜ್ವಾಲಾಮುಖಿಗಳು ಹೊರ ಚೆಲ್ಲುವ ವಸ್ತುಗಳಿಂದ ಮಣ್ಣು ಫಲವತ್ತಾಗಿದೆ.ನಮ್ಮಲ್ಲಿ ರಸಾಯನಿಕ ಗೊಬ್ಬರ, ಕಳೆನಾಶಕಗಳನ್ನು ಅಗತ್ಯಕ್ಕಿಂತ ಜಾಸ್ತಿ ಬಳಸಿ ಮಣ್ಣಿನ ಫಲವತ್ತತೆಯನ್ನು ಹಾಳುಮಾಡಿದ್ದೇವೆ. ಮಣ್ಣಿನಿಂದಲೇ ಎಲ್ಲಾ ರೋಗಗಳು ಬರುವುದರಿಂದ ಮುಂದಿನ ದಿನಗಳಲ್ಲಿ ಮಣ್ಣಿನ ಫಲವತ್ತತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಬಳ್ಳಿಗಳ ಹಾಳಾದ ಜಾಗದಲ್ಲಿ ಹೊಸದಾಗಿ ನಾಟಿ ಮಾಡಿ ಫಸಲು ಪಡೆಯಲು ಕನಿಷ್ಟ 4-5 ವರ್ಷಗಳಾದರೂ ಬೇಕು.ನನ್ನ ತೋಟದಲ್ಲಿ ಕಾಳು ಮೆಣಸಿನ ಬಳ್ಳಿಗಳಿವೆ. ಮೇಲಿನ ಕ್ರಮಗಳನ್ನು ಅನುಸರಿಸಿ  ಸೊರಗು ರೋಗವನ್ನು ನಿಯಂತ್ರಣ ಮಾಡಿದ್ದೇನೆ. ರೈತರು ಈ ಕ್ರಮ ಅನುಸರಿಸಿ ಮೆಣಸಿನ ಬಳ್ಳಿಗಳನ್ನು ಸಂರಕ್ಷಣೆ ಮಾಡಬಹುದು.ಮೆಣಸಿಗೆ ವಿಶ್ವದಾದ್ಯಂತ ಉತ್ತಮ ಬೆಲೆ ಹಾಗೂ ಬೇಡಿಕೆ ಇದೆ. ವಿಯೆಟ್ನಾಂ ದೇಶದಲ್ಲಿ ಈಗ ಇಳುವರಿ ಕಡಿಮೆಯಾಗಿದೆ. ನಮ್ಮ ದೇಶದಲ್ಲೂ ಇಳುವರಿ ಕಡಿಮೆಯಾಗಿ ಸ್ಥಳೀಯ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾಳು ಮೆಣಸಿನ ಬೆಲೆ ಏರಿಕೆಯಾಗುತ್ತಲೇ ಇದೆ.ಗುಣಮಟ್ಟದ ಮೆಣಸು ಬೆಳೆದು ಲಾಭಗಳಿಸಲು ಸಾಧ್ಯವಿದೆ.ಸೊರಗು ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬೇಕಿದ್ದವರು ಸಂಪರ್ಕಿಸಬೇಕಾದ ಮೊಬೈಲ್ ನಂಬರ್: 94483 20473.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.