ಶನಿವಾರ, ಜನವರಿ 25, 2020
29 °C

ಕಾಳು ಮೆಣಸು ಬಲು ಸೊಗಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿಗೆ ಮಾಡುವಷ್ಟು ಆರೈಕೆ ಕಾಳು ಮೆಣಸಿಗೆ ಮಾಡದೇ ನಷ್ಟ ಅನುಭವಿಸುತ್ತಿರುವ ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಈಗ ಎಚ್ಚೆತ್ತುಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಗೊಬ್ಬರ, ಔಷಧಿ ಸಿಂಪಡಣೆಯನ್ನು ಕಾಫಿಗೆ ಮಾತ್ರ ಮಾಡಿ, ಮೆಣಸನ್ನು ಕಡೆಗಣಿಸಲಾಗಿತ್ತು. ಆದರೆ ಕಾಳು ಮೆಣಸಿಗೆ ತಗುಲಿರುವ ‘ಸೊರಗು ರೋಗ’ದ ಪರಿಣಾಮ ಇದರ ಬೆಲೆ ಗಗನಕ್ಕೇರಿದೆ. ಇದರಿಂದ ಕಾಫಿ ಬೆಳೆಗಾರರು ಈಗ ಕರಿಮೆಣಸಿನತ್ತ ವಾಲಿದ್ದಾರೆ.ಕಾಳು ಮೆಣಸಿಗೆ ತೋರಿರುವ ಪ್ರೀತಿಯಿಂದಾಗಿ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಡಿ.ಎಂ.ರಮೇಶ್‌ ಅವರು ಸಾಕಷ್ಟು ಫಲ ಕಂಡಿದ್ದಾರೆ. ಒಂದು ಕಾಲದಲ್ಲಿ ರಮೇಶ್‌ ಮೂಡಿಗೆರೆಯಲ್ಲಿ ಬಳೆಗಳ ಮಳಿಗೆ ನಡೆಸುತ್ತಿದ್ದರು. ಅದರಿಂದ ಹಣ ಸಂಪಾದಿಸಿ ೧೫ ಎಕರೆ ಭೂಮಿ ಕೊಂಡು ಕಾಫಿ, ಕರಿಮೆಣಸು, ಅಡಿಕೆ, ಬಾಳೆ ಎಲ್ಲಾ ಹಾಕಿದರು.ಐದು ವರ್ಷಗಳಲ್ಲಿ ಕಾಫಿ ಬಂಪರ್ ಬೆಳೆ ಬಂತಾದರೂ ಆ ವರ್ಷದಲ್ಲಿ ಕಾಫಿಯ ಬೆಲೆ ಮೂಟೆಗೆ ಮೂರು ಸಾವಿರ ರೂಪಾಯಿಯಿಂದ ರೂ. ೭೦೦ಕ್ಕೆ ಇಳಿಯಿತು. ಇದರಿಂದ  ರಮೇಶ್‌ ಅಪಾರ ನಷ್ಟ ಅನುಭವಿಸಿದರು. ಸಾಲ ಮಾಡಿ ಧೈರ್ಯದಿಂದ ತೋಟದಲ್ಲಿ ಕರಿ ಮೆಣಸು ಬೆಳೆದರು. ಅದರ ಆರೈಕೆ ಮಾಡಿದರು.೨೦೦೮ ರಿಂದ ಮೆಣಸಿನ ಗಿಡ ಬೆಳೆಯುತ್ತಿದ್ದಂತೆ, ಬೆಲೆಯಲ್ಲಿ ಚೇತರಿಕೆ ಕಂಡು ಕಷ್ಟ ಸ್ವಲ್ಪ ಪರಿಹಾರ ಆಗುತ್ತಾ ಬಂದಿತು. ಈಗ ಅವರ ತೋಟದಲ್ಲಿ ೨,೮೦೦ ಕಾಳು ಮೆಣಸಿನ ಬಳ್ಳಿ ನಳನಳಿಸುತ್ತಿದೆ. ಇದರಿಂದ ಸುಮಾರು ೮ ಟನ್ ಮೆಣಸು ಕೊಯ್ಲು ಮಾಡಿದ್ದಾರೆ, ೩೨ ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. ಬ್ಯಾಂಕ್ ಸಾಲ ತೀರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತೋಟಕ್ಕೆ ಬೇಕಾದ ಗೋದಾಮು, ಸಿಮೆಂಟ್ ಕಣ, ಪಲ್ಪರ್, ಸ್ಪ್ರಿಂಕ್ಲರ್ ವ್ಯವಸ್ಥೆ, ಮೆಣಸು ಬಿಡಿಸುವ ಯಂತ್ರ ಎಲ್ಲಾ ಸೌಲಭ್ಯ ಮಾಡಿಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ಹೋಸ್ ಪೈಪ್ ಮುಖಾಂತರ ಪ್ರತಿ ಗಿಡಕ್ಕೆ ನೀರು ಹಾಕುತ್ತಾರೆ. ಏಪ್ರಿಲ್- -ಮೇ ತಿಂಗಳಲ್ಲಿ ಪ್ರತಿ ಗಿಡಕ್ಕೆ ಒಂದೂವರೆ ಬುಟ್ಟಿ ಸಾವಯವ ಗೊಬ್ಬರ ಹಾಕುತ್ತಾರೆ. ಇದರ ಜೊತೆ ಸ್ವಲ್ಪ ಪ್ರಮಾಣದ ರಾಸಾಯನಿಕ ಗೊಬ್ಬರವನ್ನೂ ನೀಡುತ್ತಾರೆ. ಬೇವಿನಪುಡಿ, ಟೈಕೋಡರ್ಮ ಕೊಡುತ್ತಾರೆ. ಸರಳ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ತೋಟವನ್ನು ನಳನಳಿಸುವಂತೆ ಮಾಡಿದ್ದಾರೆ. ಸಂಪರ್ಕಕ್ಕೆ ೯೨೪೨೧೪೪೦೧೯.

ಬಿ.ಸಿ.ಅರವಿಂದ್

ಪ್ರತಿಕ್ರಿಯಿಸಿ (+)