ಕಾಳ್ಗಿಚ್ಚು: ಉಪಗ್ರಹ ಕಣ್ಗಾವಲು

7

ಕಾಳ್ಗಿಚ್ಚು: ಉಪಗ್ರಹ ಕಣ್ಗಾವಲು

Published:
Updated:

ಬೆಂಗಳೂರು: ಕಾಳ್ಗಿಚ್ಚಿನಿಂದ ಅರಣ್ಯ ಪ್ರದೇಶಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಅರಣ್ಯ ಪ್ರದೇಶದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ, ಅದರ ಮಾಹಿತಿ ಉಪಗ್ರಹದ ಸಹಾಯದಿಂದ ಸಂಬಂಧಪಟ್ಟ ಅರಣ್ಯ ವಿಭಾಗದ ಮುಖ್ಯಸ್ಥರಿಗೆ ರವಾನೆಯಾಗುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.ಈ ವ್ಯವಸ್ಥೆಯ ಅಡಿ, ಭೂಸ್ಥಿರ ಉಪಗ್ರಹದ ಮೂಲಕ ರಾಜ್ಯದ ಅರಣ್ಯ ಪ್ರದೇಶಗಳ ಮೇಲೆ ನಿರಂತರ ಕಣ್ಗಾವಲು ಇಡಲಾಗಿದೆ. ಯಾವುದೇ ಅರಣ್ಯದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡರೆ ಉಪಗ್ರಹ ಅದನ್ನು ಗುರುತಿಸುತ್ತದೆ. ಉಪಗ್ರಹ ರವಾನಿಸುವ ಸಂದೇಶವನ್ನು ಇಲಾಖೆಯ ಕಚೇರಿಯಲ್ಲಿರುವ ಕಂಪ್ಯೂಟರ್ ಮೂಲಕ ವೀಕ್ಷಿಸಬಹುದು. ಅಲ್ಲದೆ, ಬೆಂಕಿ ಬಿದ್ದಿರುವ ಕುರಿತು ಸಂಬಂಧಪಟ್ಟ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸ್ವಯಂಚಾಲಿತವಾಗಿ ಎಸ್‌ಎಂಎಸ್ ಮೂಲಕ ಸಂದೇಶ ರವಾನೆಯಾಗುತ್ತದೆ.ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, `ಈ ತಂತ್ರಜ್ಞಾನದಿಂದ ಕಾಳ್ಗಿಚ್ಚಿನ ಮೇಲೆ ಕಣ್ಗಾವಲು ಇಡುವುದು ಮಾತ್ರವಲ್ಲ, ಕಾಡಿನಲ್ಲಿ ಬೆಂಕಿ ಬಿದ್ದಿದೆ ಎಂದು ಇಲಾಖೆಗೆ ಸುಳ್ಳು ಮಾಹಿತಿ ನೀಡುವವರ ಕುರಿತೂ ನಿಗಾ ಇಡಲು ಸಾಧ್ಯ~ ಎಂದರು. ಉಪಗ್ರಹ ಕಣ್ಗಾವಲು ವ್ಯವಸ್ಥೆಗೆ ಮಂಗಳವಾರವೇ ಚಾಲನೆ ನೀಡಲಾಗಿದೆ.ಈ ತಂತ್ರಜ್ಞಾನವನ್ನು ಇಲಾಖೆಯ ಸಿಬ್ಬಂದಿಯೇ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಯಾವುದೇ ಹಣ ಖರ್ಚು ಮಾಡಿಲ್ಲ. ವೆಬ್‌ಸೈಟ್ ಮೂಲಕ ಈ ಸೌಲಭ್ಯವನ್ನು ಸಾರ್ವಜನಿಕರೂ ಉಚಿತವಾಗಿ ಪಡೆದುಕೊಳ್ಳಲು ಇನ್ನೊಂದು ತಿಂಗಳು ಕಾಯಬೇಕು ಎಂದರು. ಕಾಳ್ಗಿಚ್ಚಿನಿಂದ ನೈಸರ್ಗಿಕ ಅರಣ್ಯಕ್ಕೆ ಯಾವುದೇ ಧಕ್ಕೆ ಇಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry