ಬುಧವಾರ, ಡಿಸೆಂಬರ್ 11, 2019
20 °C

ಕಾಳ್ಗಿಚ್ಚು: ಜಾಗೃತಿ ಅಭಿಯಾನ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ಕಾಳ್ಗಿಚ್ಚು: ಜಾಗೃತಿ ಅಭಿಯಾನ

ಆನೇಕಲ್: ಕಾಡು ಮಾನವನಿಗೆ ಪರೋಪಕಾರಿಯಾಗಿದ್ದು ಅದನ್ನು ರಕ್ಷಿಸುವ ಜವಾಬ್ದಾರಿ ಸಮಾಜದ್ದಾಗಿದೆ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ನುಡಿದರು.ತಾಲ್ಲೂಕಿನ ರಾಗಿಹಳ್ಳಿಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ಮಂಗಳವಾರ ಆಯೋಜಿಸಿದ್ದ ಕಾಳ್ಗಿಚ್ಚಿನ ಬಗ್ಗೆ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.ಕಾಡು, ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣ. ಕಾಡನ್ನು ಬೆಂಕಿ ಇನ್ನಿತರ ಅವಘಡಗಡಗಳಿಂದ ರಕ್ಷಿಸುವ ಹೊಣೆಗಾರಿಕೆ ಕಾಡಿನ ಸುತ್ತಮುತ್ತಲಿನಲ್ಲಿ ವಾಸಿಸುವ ಜನರದ್ದಾಗಿದ್ದು, ಇಲಾಖೆಯೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.ಬೇಸಿಗೆಯ ದಿನಗಳಲ್ಲಿ ಕಾಡಿನಲ್ಲಿ ಕಾಣಿಸಿ ಕೊಳ್ಳುವ ಬೆಂಕಿ ತಡೆಯುವ ಸಲುವಾಗಿ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಸ್ವಯಂಸೇವಕರು ಹಳ್ಳಿಗಳಲ್ಲಿ ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಸುತ್ತಿರುವುದನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.ಬನ್ನೇರುಘಟ್ಟದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್  ಮಾತನಾಡಿ, ಅರಣ್ಯ ಪರಿಸರವನ್ನು ಹಸಿರಾಗಿಸಿ ಉತ್ತಮ ಆಮ್ಲಜನಕವನ್ನು ನಮಗೆ ನೀಡುವುದರಿಂದ ಅರಣ್ಯವನ್ನು ರಕ್ಷಿಸಿ ಬೆಳಸಬೇಕು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಡು ಮನುಷ್ಯನಿಗೆ ಉಪಯುಕ್ತವಾಗಿರುವುದರಿಂದ ಅರಣ್ಯ ಮತ್ತು ವನ್ಯ ಜೀವಿಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು  ಹೇಳಿದರು.ಪರಿಸರ ಮತ್ತು ವನ್ಯ ಜೀವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್.ಮಂಜುನಾಥ್, ಸತತ ನಾಲ್ಕು ದಿನಗಳ ಕಾಲ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಆನೇಕಲ್, ಬನ್ನೇರುಘಟ್ಟ, ಹಾರೋಹಳ್ಳಿ ವಲಯದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ 38 ಹಳ್ಳಿಗಳಲ್ಲಿ ಬೀದಿ ನಾಟಕಗಳನ್ನು ಮಾಡಲಾಗಿದೆ. ಸಂಸ್ಥೆ ಕಾಳ್ಗಿಚ್ಚಿನ ಕುರಿತು ಅರಿವು ಮೂಡಿಸುವ ಕಾರ್ಯವನ್ನು  ಅರಣ್ಯ ಇಲಾಖೆ ಸಹಾಯದೊಂದಿಗೆ ಕೈಗೊಂಡಿದೆ ಎಂದರು. 

 

ಸಹಾಯಕ ಅರಣ ಸಂರಕ್ಷಣಾಧಿಕಾರಿ ನಾಯಕ್, ನಿವೃತ್ತ ವಲಯ ಅರಣ್ಯಾಧಿಕಾರಿ ವೇಣುಗೋಪಾಲ್, ವಲಯ ಅರಣ್ಯಾಧಿಕಾರಿ ನಾಗಭೂಷಣ್, ನಾಗರಾಜು, ರಾಗಿಹಳ್ಳಿ ಗ್ರಾ.ಪಂ ಅಧ್ಯಕ್ಷ ಮಾದಮ್ಮ, ಮಾಜಿ ಅಧ್ಯಕ್ಷ ಆರ್.ಡಿ. ರಾಜಣ್ಣ, ಗ್ರಾ.ಪಂ ಸದಸ್ಯರಾದ ಹನುಮಂತಪ್ಪ, ನಂಜಪ್ಪ, ಮುಖಂಡರಾದ ಆರ್.ಡಿ. ಮಂಜುನಾಥ್, ಅಶೋಕ್, ಕಂಠೀರವ ನೃತ್ಯ ಕಲಾ ಸಂಘದ ಅಧ್ಯಕ್ಷ ಪಿ. ಧನಂಜಯ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)