ಬುಧವಾರ, ಅಕ್ಟೋಬರ್ 16, 2019
26 °C

ಕಾವಾಗೆ 1.5 ಕೋಟಿ ಬಿಡುಗಡೆ: ಭರವಸೆ

Published:
Updated:

ಮೈಸೂರು: ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ (ಕಾವಾ) ನೂತನ ಕಟ್ಟಡ ನಿರ್ಮಾಣಕ್ಕೆ ರೂ.1.5 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತ ಮನುಬಳಿಗಾರ್ ಭರವಸೆ ನೀಡಿದರು.4ನೇ ರಾಷ್ಟ್ರೀಯ ಕಾರ್ಯಾಗಾರದಲ್ಲಿ ರಚಿಸಿದ ಕಲಾಕೃತಿಗಳ ಪ್ರದರ್ಶನಕ್ಕೆ ಕಾವಾ ಆವರಣದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು.ಕಾವಾಗೆ ಸ್ವಂತ ಕಟ್ಟಡ ನೀಡುವ ಉದ್ದೇಶದಿಂದ ಸರ್ಕಾರ ಹಣ ನೀಡಲು ಮುಂದಾಗಿದೆ. ಕಟ್ಟಡದ ನೀಲ ನಕ್ಷೆಯನ್ನು ನೀಡಿದರೆ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಜಗತ್ತಿನ ಶ್ರೇಷ್ಠ ಕಲಾವಿದರಿಗೆ ಪೈಪೋಟಿ ನೀಡಬಲ್ಲ ಉತ್ತಮ ಕಲಾವಿದರು ರಾಜ್ಯದಲ್ಲಿದ್ದಾರೆ. ಆದರೆ ಅವರಿಗೆ ಸೂಕ್ತ ಸ್ಥಾನಮಾನಗಳು ದೊರಕುತ್ತಿಲ್ಲ. ಅಲ್ಲದೇ ಅನೇಕ ಪೋಷಕರಿಗೆ ತಮ್ಮ ಮಕ್ಕಳು ಕಲಾವಿದರಾಗುವುದು ಇಷ್ಟವಿಲ್ಲ. ಎಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಉದ್ದೇಶದಿಂದ ಸರಿಯಾದ ಪ್ರೋತ್ಸಾಹ ನೀಡುತ್ತಿಲ್ಲ. ಹೀಗಾಗಿ ಉತ್ತಮ ಕಲಾವಿದರು ರೂಪುಗೊಳ್ಳುವುದನ್ನು ನಾವೇ ತಪ್ಪಿಸುತ್ತಿದ್ದೇವೆ ಎಂದು ಹೇಳಿದರು.ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಪ್ರತಿಯೊಬ್ಬರು ಸಂಸ್ಥೆಗೆ ಹಣ ಪಾವತಿಸುತ್ತಾರೆ. ಆದರೆ ಕಾವಾದಲ್ಲಿ ಸ್ಟೈಫಂಡ್ ಕೊಟ್ಟು ಶಿಕ್ಷಣ ನೀಡಲಾಗುತ್ತಿದೆ. ಕಲೆಯನ್ನು ಅಭ್ಯಸಿಸಿದವರು ನಿರುದ್ಯೋಗಿಗಳಾಗಿ ಉಳಿದಿಲ್ಲ ಎಂದರು. ಕಾವಾ ಡೀನ್ ವಿ.ಎ.ದೇಶಪಾಂಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post Comments (+)