ಕಾವೇರಿಗಾಗಿ ತುಮಕೂರು ಸಂಪೂರ್ಣ ಸ್ತಬ್ಧ

7

ಕಾವೇರಿಗಾಗಿ ತುಮಕೂರು ಸಂಪೂರ್ಣ ಸ್ತಬ್ಧ

Published:
Updated:

ತುಮಕೂರು: ತುಮಕೂರು ಬಂದ್‌ಗೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಶನಿವಾರ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ವ್ಯಾಪಾರ- ವಹಿವಾಟು ಪೂರ್ಣವಾಗಿ ಸ್ಥಗಿತಗೊಂಡಿತ್ತು.ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಬಂದ್ ಆಚರಿಸಲಾಯಿತು. ಪ್ರತಿಭಟನಾಕಾರರನ್ನು ಹೊರತು ಪಡಿಸಿದರೆ ಸಾರ್ವಜನಿಕರು ಬೀದಿಗಿಳಿಯಲಿಲ್ಲ. ನಗರದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಂಗಡಿ, ಹೋಟೆಲ್, ಚಿತ್ರಮಂದಿರ ಸೇರಿದಂತೆ ಎಲ್ಲವೂ ಬಂದ್ ಆಗಿದ್ದವು. ಜನಸಂಚಾರವೇ ಇರಲಿಲ್ಲ.ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ನಗರದ ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾವೇರಿ ನೀರು ಬಿಡುಗಡೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಹಲವು ಕನ್ನಡಪರ ಸಂಘಟನೆಗಳು ಬೈಕ್ ರ‌್ಯಾಲಿ ನಡೆಸಿದವು. ನಗರದ ಎಲ್ಲ ಪ್ರಮುಖ ಸ್ಥಳಿಗಳಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.ಬಸ್, ಆಟೊ ಸಂಚಾರ ಸ್ಥಗಿತ: ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಮುಂಜಾನೆಯಿಂದಲೇ ರಸ್ತೆಗಿಳಿಯಲಿಲ್ಲ. ನಗರ ಸಾರಿಗೆ ಬಸ್‌ಗಳು ಸಹ ಇರಲಿಲ್ಲ. ಇತರೆ ನಗರಗಳಿಂದ ಸಹ ಬಸ್ ವ್ಯವಸ್ಥೆ ಇಲ್ಲದೆ ರಸ್ತೆಗಳು ಬಿಕೊ ಎನ್ನುತ್ತಿದ್ದವು. ಬಸ್ ಇರುವುದಿಲ್ಲ ಎಂಬುದು ಮೊದಲೇ ತಿಳಿದಿದ್ದರಿಂದ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಸಹ ಬರಲಿಲ್ಲ. ನಗರದಲ್ಲಿ ಆಟೊ ಸಹ ಇರಲಿಲ್ಲ. ಹೀಗಾಗಿ ಅತ್ಯಂತ ಅಗತ್ಯವಿದ್ದ ಪ್ರಯಾಣಿಕರು ಪರದಾಡುವಂತಾಗಿತ್ತು. ಖಾಸಗಿ, ನಗರ ಬಸ್ ನಿಲ್ದಾಣ, ಡಿಪೋಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು.ರೈಲು ತಡೆ: ಬೆಂಗಳೂರಿಗೆ ಹೋಗುವ ರಾಣಿ ಚೆನ್ನಮ್ಮ ರೈಲನ್ನು ನಿತ್ಯ ರೈಲು ಪ್ರಯಾಣಿಕರ ವೇದಿಕೆ ಕಾರ್ಯಕರ್ತರು ಕೆಲಕಾಲ ತಡೆದು ಪ್ರತಿಭಟನೆ ನಡೆಸಿದರು. ಬೆಂಗಳೂರು- ತುಮಕೂರು ಪ್ಯಾಸೆಂಜರ್ ರೈಲನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೆಲ ಕಾಲ ತಡೆದರು. ರೈಲ್ವೆ ನಿಲ್ದಾಣ ರಸ್ತೆ ಮತ್ತು ಬಿ.ಎಚ್.ರಸ್ತೆಯಲ್ಲಿ ಕೆಲವರು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರು.ವಹಿವಾಟು ಸ್ಥಗಿತ: ನಗರದ ಎಲ್ಲ ಹೋಟೆಲ್, ಅಂಗಡಿ  ಮುಚ್ಚಿದ್ದವು. ನಗರದ ಸದಾ ಜನರಿಂದ ತುಂಬಿರುತ್ತಿದ್ದ ಎಂ.ಜಿ.ರಸ್ತೆ, ಸಂತೆಪೇಟೆ, ಮಂಡಿಪೇಟೆ, ವಿನಾಯಕ ಮಾರುಕಟ್ಟೆ ಸೇರಿದಂತೆ ಎಲ್ಲ ಪ್ರಮುಖ ವ್ಯಾಪಾರಿ ಸ್ಥಳಗಳನ್ನು ಬಂದ್ ಮಾಡಲಾಗಿತ್ತು.ಸರ್ಕಾರಿ ಕಚೇರಿಗಳಿಗೆ ಬೀಗ: ಸರ್ಕಾರಿ ಕಚೇರಿಗಳಿಗೆ ಅಧಿಕೃತ ರಜೆ ಘೋಷಣೆ ಮಾಡದೆ ಎಂದಿನಂತೆ ಬಾಗಿಲು ತೆಗೆಯಲಾಗಿತ್ತು. ಆದರೆ ಪ್ರತಿಭಟನಾಕಾರರು ಸರ್ಕಾರಿ ಕಚೇರಿ ಮುಚ್ಚಿಸಿದರು. ನಗರಸಭೆ, ಜಿಲ್ಲಾ ಪಂಚಾಯಿತಿ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವು ಕಚೇರಿಗಳನ್ನು ಬಂದ್ ಮಾಡಲಾಯಿತು. ಕೆಲವು ಕಚೇರಿಗಳು ತೆರೆದಿದ್ದರೂ ಸಿಬ್ಬಂದಿ ಇಲ್ಲದೆ ಬಿಕೊ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಆಗಮನ ಸಹ ಇರಲಿಲ್ಲ.ನಗರದಲ್ಲಿ ಬ್ಯಾಂಕ್‌ಗಳ ವಹಿವಾಟು ಸ್ಥಗಿತಗೊಂಡಿತ್ತು. ಕೆಲವು ಬ್ಯಾಂಕ್‌ಗಳು ತೆರೆದಿದ್ದು, ನಂತರ ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದು ಬಾಗಿಲು ಮುಚ್ಚಿದರು. ಆಸ್ಪತ್ರೆ, ಔಷಧಿ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿತ್ತು.ಶಾಲಾ ಕಾಲೇಜು ಬಂದ್: ಜಿಲ್ಲಾಡಳಿತ ಶಾಲಾ- ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿದ್ದರಿಂದ ಯಾವುದೇ ಶಾಲೆ- ಕಾಲೇಜುಗಳು ತೆರೆಯಲಿಲ್ಲ. ಹೀಗಾಗಿ ಪೋಷಕರು ನಿಟ್ಟುಸಿರು ಬಿಡುವಂತಾಗಿತ್ತು.ಸಿನಿಮಾ ಪ್ರದರ್ಶನ ಸ್ಥಗಿತ: ನಗರದ ಎಲ್ಲ ಸಿನಿಮಾ ಮಂದಿರಗಳು ಪ್ರದರ್ಶನ ರದ್ದು ಮಾಡಿದ್ದವು. ಚಿತ್ರಮಂದಿರಗಳ ಮುಂದೆ `ಇಂದಿನ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ~ ಎಂದು ಬೋರ್ಡ್ ಹಾಕಲಾಗಿತ್ತು. ಪೆಟ್ರೋಲ್ ಬಂಕ್‌ಗಳು ಮುಚ್ಚಿ ಬೆಂಬಲ ವ್ಯಕ್ತಪಡಿಸಿದವು.ಪೊಲೀಸ್ ಬಂದೋಬಸ್ತ್: ನಗರಕ್ಕೆ ಹೆಚ್ಚವರಿ 8 ವ್ಯಾನ್ ಕೆಎಸ್‌ಆರ್‌ಪಿ ಪೊಲೀಸ್‌ರನ್ನು ನಿಯೋಜಿಸಲಾಗಿತ್ತು. ಎಸ್ಪಿ ಟಿ.ಆರ್.ಸುರೇಶ್, ತಹಶೀಲ್ದಾರ್ ಅಹೋಬಲಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಿಜೆಪಿ ಉಪವಾಸ: ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಟೌನ್‌ಹಾಲ್ ವೃತ್ತದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸ ನಡೆಸಿ ಕಾವೇರಿ ನೀರು ತಡೆಯುವಂತೆ ಒತ್ತಾಯಿಸಿದರು. ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್, ಮುಖಂಡರಾದ ನಂದೀಶ್, ರುದ್ರೇಶ್ ಮುಂತಾದವರು ಭಾಗವಹಿಸಿದ್ದರು.ಸ್ವಾಮೀಜಿಗಳ ಬೆಂಬಲ: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಬೆಟ್ಟದಹಳ್ಳಿ ಚಂದ್ರಶೇಖರ್ ಸ್ವಾಮೀಜಿ ಟೌನ್‌ಹಾಲ್ ವೃತ್ತಕ್ಕೆ ಆಗಮಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ನಂತರ ಕೆಲ ಕಾಲ ಧರಣಿಯಲ್ಲಿ ಭಾಗವಹಿಸಿದ್ದರು.ಕಾಂಗ್ರೆಸ್- ಜೆಡಿಎಸ್ ಬೈಕ್ ರ‌್ಯಾಲಿ: ಟೌನ್‌ಹಾಲ್ ವೃತ್ತದಿಂದ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು. ಮುಖಂಡರಾದ ರಫಿಕ್‌ಅಹ್ಮದ್, ನಯಾಜ್‌ಅಹ್ಮದ್, ರಾಜೇಂದ್ರ ಮುಂತಾದವರು ಭಾಗವಹಿಸಿದ್ದರು.ಜೆಡಿಎಸ್ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ನೇತೃತ್ವದಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಮಾಜಿ ಶಾಸಕ ಸತ್ಯನಾರಾಯಣ, ಮುಖಂಡರಾದ ನರಸೇಗೌಡ, ಮಲ್ಲಿಕಾರ್ಜುನ ಮುಂತಾದವರು ಭಾಗವಹಿಸಿದ್ದರು. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ವಕೀಲರ ಬೆಂಬಲ: ಜಿಲ್ಲಾ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ಹೊರಗುಳಿದು ನ್ಯಾಯಾಲಯದಿಂದ ಟೌನ್‌ಹಾಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಧ್ಯಕ್ಷ ದೊಡ್ಮನೆ ಗೋಪಾಲಗೌಡ, ಬಸವರಾಜು ಇತರರು ಭಾಗವಹಿಸಿದ್ದರು.ಚಿನ್ನಬೆಳ್ಳಿ ಕೆಲಸಗಾರರ ಮೆರವಣಿಗೆ: ಚಿನ್ನ-ಬೆಳ್ಳಿ ಕೆಲಸಗಾರರು ಮತ್ತು ಅಂಗಡಿ ಮಾಲೀಕರು ವಹಿವಾಟು ಸ್ಥಗಿತಗೊಳಿಸಿ, ಚಿಕ್ಕಪೇಟೆಯಿಂದ ಟೌನ್‌ಹಾಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಚೇಳೂರು ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಕನ್ನಡ ಪರ ಸಂಘಟನೆಗಳ ಪ್ರತಿಭಟನೆ: ಕರವೇ (ಎರಡೂ ಬಣಗಳು), ಜಯ ಕರ್ನಾಟಕ, ಭಗತ್ ಸೇನೆ, ಉಪೇಂದ್ರ ಅಭಿಮಾನಿಗಳ ಬಳಗ, ತುಮಕೂರು ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಸೇರಿದಂತೆ ಹಲ ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry