ಸೋಮವಾರ, ಡಿಸೆಂಬರ್ 9, 2019
22 °C

ಕಾವೇರಿಗೆ ಬಂದಿಹನು ಬಳೆಗಾರ

Published:
Updated:
ಕಾವೇರಿಗೆ ಬಂದಿಹನು ಬಳೆಗಾರ

ಮೊದಲೇ ಹೊಸ ಡ್ರೆಸ್ಸು; ಹೊಸ ಸೀರೆಯ ತೀರದ ವ್ಯಾಮೋಹ. ಜೊತೆಗೆ ಈ ಮ್ಯಾಚಿಂಗ್ ಹುಚ್ಚೂ ಹಿಡಿಯಿತೆಂದರೆ ಮುಗೀತು ಪರ್ಸಿನ ಕತೆ! ಡ್ರೆಸ್ಸು, ಸೀರೆಗೆ ಹೊಂದುವಂಥ ಬಳೆ ಹೆಣ್ಣುಮಕ್ಕಳ ದೌರ್ಬಲ್ಯವೂ ಹೌದು. ಮ್ಯಾಚಿಂಗ್ ಬಣ್ಣವಷ್ಟೇ ಏಕೆ, ಧರಿಸುವ ದಿರಿಸಿನಂಥದೇ ವಿನ್ಯಾಸ ಬಳೆಗಳಲ್ಲಿ ಸಿಕ್ಕಿದರೆ?  ಇತ್ತ ದಕ್ಷಿಣದ ಮಂಗಲಗಿರಿ ಕಾಟನ್ ಸೀರೆ, ಡ್ರೆಸ್ಸಿನ ತರಹದ್ದೇ ನೋಟದ; ಅತ್ತ ಉತ್ತರದ ನಾಡಿನ ಲೆಹರಿಯಾ ವಿನ್ಯಾಸದ ಬಾಂದನಿ ವಿನ್ಯಾಸದಂತಹದೇ ಬಳೆಗಳೂ ಇವೆ ಎಂದರೆ ಆಶ್ಚರ್ಯವಾದೀತು.ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಏರ್ಪಡಿಸಿರುವ ಕಾವೇರಿ ಕರಕುಶಲ ಪ್ರದರ್ಶನದಲ್ಲಿ ಜೈಪುರದ ಬಳೆ ಮಳಿಗೆಯಲ್ಲಿ ಕಾಣುವ ಬಳೆಗಳಲ್ಲಿ ಬಣ್ಣಗಳಷ್ಟೇ ಅಲ್ಲ;  ವಿನ್ಯಾಸದಲ್ಲೂ ಹೆಸರಿನಲ್ಲೂ ವೈವಿಧ್ಯ ಇದೆ. ಬೆಲೆ ಸೆಟ್‌ಗೆ ರೂ 60 ರಿಂದ 120. ಹ್ಯಾಂಡ್‌ಮೇಡ್ ಬಳೆಗಳಲ್ಲಿ ಅತ್ಯಂತ ಸೂಕ್ಷ್ಮ ಕುಂದನ್, ಮೀನಾಕಾರಿ, ಉಗುರಿನಿಂದ ಕೆತ್ತನೆ ಮಾಡಿದ ಕುಸುರಿ ಇದೆ. ಅತ್ಯಂತ ಸೂಕ್ಷ್ಮ ಕೆಲಸ ಬೇಡುವ ಮೊಘಲ್‌ನ ಆ್ಯಂಟಿಕ್ ವಿನ್ಯಾಸದಲ್ಲಿ ಹಿತ್ತಾಳೆಯ ತೆಳು ತಂತಿಯಿಂದ ಬ್ರಾಸ್ ನೆಟ್‌ನ ಚಿತ್ತಾರ ಮೂಡಿಸಲು ಸಮಯವೂ ಹೆಚ್ಚೇ ಬೇಕಾಗುತ್ತದೆ. ಇಂಥ ಒಂದು ಬಳೆ ತಯಾರಿಗೆ ನಾಲ್ಕು ದಿನ ಹಿಡಿಯುತ್ತದೆ. ಬೆಲೆ 450 ರೂ.ಇಂದಿನ ಆಧುನಿಕ ಜೀನ್ಸ್, ರ್ಯಾಂಪ್ ಅರೌಂಡ್‌ಗಳಂತಹ ಫಂಕಿ ಡ್ರೆಸ್ಸಿಂಗ್‌ಗೂ ಹೊಂದುವಂತೆ ಫಂಕಿ ವರ್ಣವಿನ್ಯಾಸಗಳು ಇವೆ. ಅರೆಮೂಲ್ಯ ಮಣಿ ಬಳಸಿದ ಆ್ಯಂಟಿಕ್ ಕಡ, ಬಿಳಿ ಲೋಹದ ವರ್ಣದಲ್ಲಿ, ಹಿತ್ತಾಳೆಯ ಬಣ್ಣದಲ್ಲಿ ಆ್ಯಂಟಿಕ್ ಎಲೆ ವಿನ್ಯಾಸಗಳು ಅಪರೂಪದವು. ವಾಟರ್‌ಪ್ರೂಫ್‌ನಲ್ಲಿ ಕಲಂಕಾರಿ ಸೆಟ್, ಲೆಹರಿಯಾ, ಬಾಂದಣಿ, ಕಾಂತಾ ವರ್ಕ್, ನೈಸರ್ಗಿಕ ಬಣ್ಣಗಳಲ್ಲಿ ಅರಳಿದ ಮಧುಬನಿ ಕಲೆಯ, ಚಂದೇರಿ ವರ್ಕ್‌ನ, ಜೂಟ್ ತರಹದ ಖಾದಿ ವಿನ್ಯಾಸ, ದಾಂಡಿಯಾ ರಾಸ್‌ನ ಡ್ರೆಸ್‌ಗೆ ಹೊಂದುವ ಅದ್ಭುತ ಕಲೆಯೆಲ್ಲ ತೆಳು ನಾಲ್ಕೈದು ಬಳೆಗಳಲ್ಲೇ ಒಡಮೂಡಿರುವುದು ಅದ್ಭುತ.ಸೆವೆನ್ ಇನ್ ಒನ್

ಆಗ್ರಾದ ಡೋರಿ ಲಾಲ್ ಎಂಬ ಕಲಾವಿದರ ಮಳಿಗೆಯಲ್ಲಿ ಅಮೃತಶಿಲೆಯಲ್ಲಿ ನಿರ್ಮಾಣಗೊಂಡ ಕಲಾ ವೈಭವ ಅನನ್ಯ. ಒಂದೇ ಕಲ್ಲಿನಲ್ಲಿ ಆನೆಯಾಕೃತಿ, ಅದರ ಮೇಲೆ ಚಿತ್ತಾರ ಮೂಡಿಸಿ ನಾಜೂಕಾಗಿ ಕೆತ್ತಿ ಒಳಗೊಂದು ಆನೆ ಮರಿ ಸೃಷ್ಟಿಸುವ ಪರಿ ಅಂಡರ್‌ವರ್ಕ್‌ನ ಅದ್ಭುತವೇ ಸೈ. ಹೀಗೆಯೇ ಆನೆಯೊಳಗೊಂದು ಆನೆ ಅದರ ಮೇಲೇರಿ ಹೋದ ಸಿಂಹ.. ವಾವ್ ಒಂದರಲ್ಲಿ ಮೂರು. ಜೇಡ್ ಮಾರ್ಬಲ್‌ನಲ್ಲಿ ಆನೆಯೊಳಗೊಂದು ಆನೆ, ಅದರೊಳಗೊಂದು ಆನೆ- ಥ್ರೀ ಇನ್ ಒನ್‌ಗೆ 2500 ರೂ. ತಿಳಿನೇರಳೆ ವರ್ಣಛಾಯೆಯ ಜೇಡ್ ಮಾರ್ಬಲ್‌ನಲ್ಲಿ ಇದೇ ತರಹ ಆನೆಯೊಳಗೊಂದು ಆನೆ; ಅದರ ಹಿಂದೆ ಮುಂದೆ ಏಕಕಾಲಕ್ಕೆ ದಾಳಿ ಮಾಡಿದ ಸಿಂಹಗಳು, ಜತೆಗೊಂದು ಪುಟ್ಟ ಮರಿಯಾನೆ ಬೆಲೆ 5500 ರೂ.ಇಂಥ ಸೆವೆನ್ ಇನ್ ಒನ್ ಆನೆಯ ಕೃತಿ ತಯಾರಾಗಲು ಸರಿಯಾಗಿ 25 ದಿನಗಳು ಬೇಕಂತೆ..

ಇವಿಷ್ಟೇ ಅಲ್ಲದೆ ವೈವಿಧ್ಯಮಯ ಕುಶಲಕಲಾ ವಸ್ತುಗಳಿರುವ ಈ ಮೇಳ ಜ. 16ರ ವರೆಗೆ ನಡೆಯಲಿದೆ.

ಸ್ಥಳ: ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ.

ಪ್ರತಿಕ್ರಿಯಿಸಿ (+)