ಕಾವೇರಿಗೆ ಮಾರ್ದನಿಸಿದ ಕೂಗು

7

ಕಾವೇರಿಗೆ ಮಾರ್ದನಿಸಿದ ಕೂಗು

Published:
Updated:
ಕಾವೇರಿಗೆ ಮಾರ್ದನಿಸಿದ ಕೂಗು

ಬೆಂಗಳೂರು: ಕಾವೇರಿ ನದಿ ಪ್ರಾಧಿಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಸದಸ್ಯರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. 

 

ಸಚಿವೆ ಶೋಭಾ ಕರಂದ್ಲಾಜೆ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ಜನಪರ ವೇದಿಕೆಯ ಮಹಿಳಾ ಘಟಕದ ಸದಸ್ಯರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಲ್ಲೇಶ್ವರದಲ್ಲಿರುವ ಶೋಭಾ ಕರಂದ್ಲಾಜೆ ಅವರ ಮನೆ ಬಳಿ ಸೇರಿದ ಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ರಾಜ್ಯದ ಜನತೆಗೇ ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಎಲ್ಲಾ ಸಚಿವರೂ ತಮಿಳುನಾಡಿನ ಪರವಾಗಿ ವರ್ತಿಸುತ್ತಾ, ತಾಯ್ನಾಡಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ಮನೆಯಿಂದ ಹೊರ ಬರಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.ಈ ವೇಳೆ ಅವರನ್ನು ಅಡ್ಡಗಟ್ಟಿದ ಪೊಲೀಸರು, ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಕೆ.ಸಿ.ಲಕ್ಷ್ಮಮ್ಮ, ಜಯಲಕ್ಷ್ಮಿ, ಶೋಭಾ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.  ಕುಂಬಾರ ಕ್ಷೇಮಾಭಿವೃದ್ಧಿ ಸಂಘ: `ರಾಜ್ಯ ಸರ್ಕಾರ ಈಗಾಗಲೇ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುತ್ತಿದೆ.

ಹೀಗೆ ಮುಂದುವರಿದರೆ ಕೆಲವೇ ದಿನಗಳಲ್ಲಿ ರಾಜ್ಯದ ಜಲಾಶಯಗಳು ಸಂಪೂರ್ಣವಾಗಿ ಬರಿದಾಗುತ್ತವೆ~

ಎಂದು ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.  ಪುರಭವನದ ಮುಂದೆ ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು ಪ್ರಧಾನಮಂತ್ರಿ ಮನಮೋಹನ ಸಿಂಗ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  `ತಮಿಳುನಾಡಿನ ರೈತರು ಈ ವರ್ಷ ಉತ್ತಮ ಫಸಲು ಪಡೆದಿದ್ದಾರೆ. ಮುಂದಿನ ಬೆಳೆಗೆ ಅಗತ್ಯವಾದ ನೀರನ್ನು ನಮ್ಮ ರಾಜ್ಯದಿಂದ ಪಡೆಯಲು ಸಂಚು ರೂಪಿಸಿದ್ದಾರೆ. ಮಡಿಕೆ ತಯಾರಿಸಲೂ ನೀರು ಸಿಗದ ಇಂತಹ ಪರಿಸ್ಥಿತಿಯಲ್ಲಿ, ತಮಿಳುನಾಡಿಗೆ ನೀರು ಬಿಡುವಂತೆ ಪ್ರಧಾನಿ ಆದೇಶಿಸಿರುವುದು ಖಂಡನೀಯ~ ಎಂದರು.`ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ರಾಜ್ಯದಿಂದ ಚುನಾಯಿತರಾಗಿರುವ ಕೇಂದ್ರ ಸಚಿವರೇ ಕಾರಣ. ಅವರು, ರಾಜ್ಯದ ವಾಸ್ತವ ಸ್ಥಿತಿಯನ್ನು ಪ್ರಧಾನಮಂತ್ರಿ ಅವರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಬರಬೇಕು~ ಎಂದು ಸಂಘಟನೆಯ ಅಧ್ಯಕ್ಷ ಎನ್.ನಾಗೇಶ್ ಆಗ್ರಹಿಸಿದರು.ಬೀಡಿ ಕಾರ್ಮಿಕರ ಸಂಘ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬಾರದೆಂದು ಒತ್ತಾಯಿಸಿ ರಾಜ್ಯ ಬೀಡಿ ಕಾರ್ಮಿಕರ ಸಂಘದ ಸದಸ್ಯರು ಕೆಂಗೇರಿಯ ಬಿಬಿಎಂಪಿ ಕಚೇರಿ ಎದರು ಪ್ರತಿಭಟನೆ ನಡೆಸಿದರು.

 ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಫ್ರೋಜ್ ಪಾಷಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳೂ ಭಾಗವಹಿಸಿದ್ದರು. 

 

ಕೆಂಗೇರಿ ಮುಖ್ಯ ರಸ್ತೆಯಿಂದ ಜಾಥಾ ಹೊರಟ ಕಾರ್ಯಕರ್ತರು, ಪ್ರಧಾನಮಂತ್ರಿ ಮನಮೋಹನ ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಕೂಗಿದರು.

 ತಮಿಳುನಾಡಿಗೆ ನೀರು ನಿಲ್ಲಿಸಿ: ಚಂದ್ರೇಗೌಡ ಎಚ್ಚರಿಕೆ : ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಸೋಮವಾರ ಸಂಜೆ ವೇಳೆಗೆ ನಿಲ್ಲಿಸದೇ ಇದ್ದರೆ ಅದರ ವಿರುದ್ಧ ಹೋರಾಟಕ್ಕೆ ಇಳಿಯುವುದಾಗಿ ಬಿಜೆಪಿ ಸಂಸದ ಡಿ.ಬಿ. ಚಂದ್ರೇಗೌಡ ಭಾನುವಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದರು.

`ಸೋಮವಾರ ಸಂಜೆ ಆರು ಗಂಟೆಯವರೆಗೂ ಸರ್ಕಾರವನ್ನು ನಂಬುತ್ತೇನೆ. ಸರ್ಕಾರದ ಜತೆಗೂ ಇರುತ್ತೇನೆ. ಮುಖ್ಯಮಂತ್ರಿಯವರು ನೀರು ನಿಲ್ಲಿಸುವುದರ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳದೇ ಹೋದರೆ ಜನರ ಜತೆ ಬೀದಿಗೆ ಇಳಿಯುತ್ತೇನೆ~ ಎಂದು ಅವರು ಹೇಳಿದರು.`ನನಗೆ ಹುದ್ದೆ ಮುಖ್ಯವಲ್ಲ, ಜನ ಮುಖ್ಯ. ಪದವಿ ಹೋದರೂ ಸರಿ ಕಾವೇರಿ ನೀರು ಉಳಿಸಿಕೊಳ್ಳಲು ಹೋರಾಡುತ್ತೇನೆ. ನಾಳೆ ಸಂಜೆಯವರೆಗೆ ಈ ವಿಷಯ ತೀರ್ಮಾನವಾಗದೇ ಇದ್ದರೆ ಮುಂದಿನ ನಿರ್ಧಾರ ಕೈಗೊಳ್ಳಲು ನಾನು ಸ್ವತಂತ್ರ~ ಎಂದರು.ತಪ್ಪು ಯಾರದು ಎನ್ನುವುದು ಮುಖ್ಯವಲ್ಲ. ಆಗಿರುವ ತಪ್ಪನ್ನು ತಿದ್ದಿಕೊಳ್ಳುವುದು ಮುಖ್ಯ. ಕಾನೂನು ಮತ್ತು ಜಲಸಂಪನ್ಮೂಲ ಸಚಿವರು ಮುಖ್ಯಮಂತ್ರಿಗಳಿಗೆ ಸೂಕ್ತ ಸಮಯದಲ್ಲಿ ಸರಿಯಾದ ಸಲಹೆ ಸೂಚನೆ ನೀಡಬೇಕಿತ್ತು. ಮುಖ್ಯಮಂತ್ರಿಗಳೂ ಅಷ್ಟೇ, ಆರಂಭದಲ್ಲಿಯೇ ಪ್ರಕರಣದ ತೀವ್ರತೆ ಅರಿತು ಕಾರ್ಯಪ್ರವೃತ್ತರಾಗಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.ಈ ವಿಷಯದಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾದರೂ ಸರಿ ನಾವು ಅದನ್ನು ಎದುರಿಸುತ್ತೇವೆ. ಇದಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ಬದ್ಧರೆಂದು ಹೇಳಿದ್ದಾರೆ. ಯಾವುದಕ್ಕೂ 24 ಗಂಟೆ ಕಾಯುತ್ತೇವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry