ಕಾವೇರಿ ಎದುರು `ಜಗಳ'ಕ್ಕೆ ನಿಂತ ಕೃಷ್ಣೆ

6

ಕಾವೇರಿ ಎದುರು `ಜಗಳ'ಕ್ಕೆ ನಿಂತ ಕೃಷ್ಣೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಕೃಷ್ಣಾ ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಕುರಿತಂತೆ ವಿಧಾನ ಪರಿಷತ್‌ನಲ್ಲಿ ಸೋಮವಾರ ವಾದ- ಪ್ರತಿವಾದಗಳು ಉಕ್ಕಿ ಹರಿದವು. ಮಧ್ಯಾಹ್ನದವರೆಗಿನ ಕಲಾಪ ಆ ಪ್ರವಾಹದಲ್ಲೇ ಕೊಚ್ಚಿಹೋಯಿತು. ವಿರೋಧ ಪಕ್ಷದ ಧುರೀಣರು ಕಾವೇರಿ ಜಪ ಮಾಡಿದರೆ, ಆಡಳಿತ ಪಕ್ಷದ ಸದಸ್ಯರು ಕೃಷ್ಣೆ  ಪರ ದನಿ ಎತ್ತಿದರು.ಸಭಾಪತಿ ಡಿ.ಎಚ್. ಶಂಕರಮೂರ್ತಿ ಬೆಳಿಗ್ಗೆ ಕಲಾಪ ಆರಂಭಿಸಿದ ಕೂಡಲೇ ವಿರೋಧ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಸಭಾನಾಯಕ ವಿ.ಸೋಮಣ್ಣ  ಹಲವು ಬಾರಿ ಮನವಿ ಮಾಡಿದರೂ ಧರಣಿ ಹಿಂಪಡೆಯಲು ಅವರು ಮನಸ್ಸು ಮಾಡಲಿಲ್ಲ. ವಿರೋಧ ಪಕ್ಷದ ಸದಸ್ಯರ ಈ ವರ್ತನೆ ಸಚಿವ ಎಸ್.ಕೆ. ಬೆಳ್ಳುಬ್ಬಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಸದಸ್ಯರನ್ನು ಕೆರಳಿಸಿತು.`ಕೃಷ್ಣೆಯ ವಿಷಯದಲ್ಲೂ ಹತ್ತಾರು ಸಮಸ್ಯೆಗಳು ತಳುಕು ಹಾಕಿಕೊಂಡಿದ್ದು ಈ ಭಾಗದ ರೈತರನ್ನು ಕಾಡುತ್ತಿವೆ. ಬೆಳಗಾವಿಯಲ್ಲಿ ಅಧಿವೇಶನ ನಡೆದಿರುವಾಗ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚಿಸಲು ಆಸ್ಪದ ನೀಡದಿದ್ದರೆ ಹೇಗೆ' ಎಂದು ಬೆಳ್ಳುಬ್ಬಿ ಪ್ರಶ್ನಿಸಿದರು. `ಕಾವೇರಿ ಪ್ರಶ್ನೆ ಬಗೆಹರಿಯದ ಹೊರತು ಬೇರೆ ವಿಷಯದ ಚರ್ಚೆ ಬೇಡ' ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಪಟ್ಟು ಹಿಡಿದರು.`ಕೃಷ್ಣೆಯ ಮಕ್ಕಳು ಕಾವೇರಿ ಚರ್ಚೆಯಲ್ಲಿ ಮುಳುಗಿದ್ದಾರೆ' ಎಂಬ ಆಕ್ರೋಶ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ. ದಯವಿಟ್ಟು ನಮ್ಮ ಭಾಗದ ಸಮಸ್ಯೆ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕು' ಎಂದು ಬೆಳ್ಳುಬ್ಬಿ ಮನವಿ ಮಾಡಿದರು.ಸಚಿವರನ್ನು ಬೆಂಬಲಿಸಿದ ಬಿಜೆಪಿಯ ಕೆ.ಬಿ. ಶಾಣಪ್ಪ, `ನಮ್ಮವೂ ಸಮಸ್ಯಾ ಅದಾವಪ. ನೀವ್‌ಗಳು ಧರಣಿ ಮಾಡ್ಕೊಂತ ನಿಂತಿದ್ದಕ್ಕ ನಮ್ ಕಾಲು ನೋಯಾಕ್ ಹತ್ಯಾವ. ನಿಮ್ ಸೀಟಿಗೆ ಹೋಗಿ ಕುಂತ್ಕೊಳ್ರಿ. ನಮ್ ಕೃಷ್ಣಾ ಸಮಸ್ಯೆ ಹೇಳಿಕೊಳ್ಳಾಕ ಅವಕಾಶ ಮಾಡಿಕೊಡ್ರಿ' ಎಂದು ವಿರೋಧ ಪಕ್ಷದ ಸದಸ್ಯರನ್ನು ಕೇಳಿದರು.`ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಆದೇಶ ಇದ್ದರೂ ಇನ್ನುಮುಂದೆ ತಮಿಳುನಾಡಿಗೆ ನೀರು ಹರಿಸುವುದಿಲ್ಲ' ಎಂದು ಸೋಮಣ್ಣ ಭರವಸೆ ನೀಡಿದರು. ಆದರೆ, ಅವರ ಭರವಸೆ ಧರಣಿನಿರತರಿಗೆ ತೃಪ್ತಿ ತರಲಿಲ್ಲ. `ಕಾವೇರಿ ವಿವಾದದಲ್ಲಿ ರಾಜ್ಯದ ಹಿತ ರಕ್ಷಿಸದ ಸರ್ಕಾರಕ್ಕೆ ಧಿಕ್ಕಾರ' ಎಂದು ಅವರು ಘೋಷಣೆ ಹಾಕಿದರು. ಪ್ರತಿಯಾಗಿ `ಉತ್ತರ ಕರ್ನಾಟಕ ಅಭಿವೃದ್ಧಿ ಬಯಸದ ವಿರೋಧ ಪಕ್ಷದ ಸದಸ್ಯರಿಗೆ ಧಿಕ್ಕಾರ' ಎಂದು ಬಿಜೆಪಿಯ ಅರುಣ್ ಶಹಾಪುರ ಮತ್ತಿತರರು ಕೂಗಿದರು.

ಕಾಂಗ್ರೆಸ್-ಜೆಡಿಎಸ್ ಜಟಾಪಟಿ:ಕಾವೇರಿ ವಿಷಯ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ವಾಗ್ವಾದಕ್ಕೆ `ಇಂಧನ'ವಾಗಿ ಪರಿಣಮಿಸಿತು. ಜೆಡಿಎಸ್‌ನ ಎಂ.ಸಿ. ನಾಣಯ್ಯ ಅವರ ಮಾತು `ಕಿಡಿ' ಹೊತ್ತಿಕೊಳ್ಳಲು ಸಾಕಾಯಿತು.`ಕಾಂಗ್ರೆಸ್ ಇಲ್ಲಿ ಧರಣಿ ಮಾಡುತ್ತಿದೆ. ಅಲ್ಲಿ ಅವರದೇ ಪಕ್ಷದ ಕೇಂದ್ರ ಸರ್ಕಾರ, ಸಿಎಂಸಿ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಸಿಎಂಸಿ ನಿರ್ಧಾರದ ಹಿಂದೆ ರಾಜಕೀಯ ಸಂಚು ಅಡಗಿದೆ' ಎಂದು ಆರೋಪಿಸಿದರು. ನಾಣಯ್ಯನವರ ಈ ಹೇಳಿಕೆಯನ್ನು ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.`ಕೇಂದ್ರ ಸರ್ಕಾರವೇ ರಚಿಸಿದ ನೀರಾವರಿ ತಜ್ಞರ ಸಮಿತಿಯು, ತಮಿಳುನಾಡಿಗೆ ಆರು ಟಿಎಂಸಿ ಅಡಿ ನೀರನ್ನು ಬಿಡಲು ಮಾತ್ರ ಕರ್ನಾಟಕದಿಂದ ಸಾಧ್ಯ ಎಂಬ ವರದಿ ನೀಡಿದೆ. ಆ ವರದಿಯನ್ನು ತಿರಸ್ಕರಿಸಿ, ಪ್ರತಿಕೂಲ ಆದೇಶ ಹೊರಡಿಸುವಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಒಲವು ಗಳಿಸುವ ಹುನ್ನಾರ ಅಡಗಿದೆ' ಎಂದು ದೂರಿದರು.ನಾಣಯ್ಯ ಅವರ ಹೇಳಿಕೆ ಎಸ್.ಆರ್‌ಪಾಟೀಲ ಅವರನ್ನು ಕೆರಳಿಸಿತು. `ನಿಮ್ಮದೇ ಪಕ್ಷದ ನಾಯಕರು ಪ್ರಧಾನಿ ಆಗಿದ್ದಾಗ ಈ ಸಮಸ್ಯೆಗೆ ಏಕೆ ಶಾಶ್ವತ ಪರಿಹಾರ ಕಂಡು ಹಿಡಿಯಲಿಲ್ಲ. ನಿಮ್ಮ ಕೈಲಾಗದ ಕೆಲಸಕ್ಕೆ ನಮ್ಮ ಮೇಲೆ ಗೂಬೆ ಕೂಡಿಸಲು ಹೋಗುತ್ತೀರಾ' ಎಂದು ಆಕ್ರೋಶ ವ್ಯಕ್ತಪಸಿದರು.ಕಾಂಗ್ರೆಸ್ ಸದಸ್ಯರು ಕೃಷ್ಣಾ ಸಮಸ್ಯೆ ಕುರಿತು ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅವಕಾಶ ಗಿಟ್ಟಿಸಿದ್ದರು. ಆದರೆ, ಕಾವೇರಿ ವಿಷಯವಾಗಿ ತಾವೇ ಹಟ ಹಿಡಿದು ನಿಂತಿದ್ದರಿಂದ ಸಂಜೆವರೆಗೆ ಅವರಿಗೆ ಆ ಅವಕಾಶ ಲಭ್ಯವಾಗಲಿಲ್ಲ.ಪರಿಷತ್ ಕಲಾಪವನ್ನು ವೀಕ್ಷಿಸಲು ಸೋಮವಾರ ಬೆಳಗಾವಿಯ ವಿವಿಧ ಶಾಲೆಗಳ ಮಕ್ಕಳು ಆಗಮಿಸಿದ್ದರು. ಆದರೆ, ಸದಸ್ಯರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದರಿಂದ ಐದೇ ನಿಮಿಷಗಳಲ್ಲಿ ಅವರು ಎದ್ದುಹೋದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry