ಕಾವೇರಿ ಕಾವು ಕುಗ್ಗಿದರೂ ಕದಲದ ಖಾಕಿ

7

ಕಾವೇರಿ ಕಾವು ಕುಗ್ಗಿದರೂ ಕದಲದ ಖಾಕಿ

Published:
Updated:

ಮಂಡ್ಯ: ನೆತ್ತಿ ಸುಡುವ ಬಿಸಿಲು... ವಾಹನಗಳು ಉಗುಳುವ ಹೊಗೆ... ಪ್ರತಿಭಟನಾಕಾರರ ಆಕ್ರೋಶ... ಹತ್ತಾರು ಗಂಟೆಗಳ ಕಾಲ ನಿಂತುಕೊಂಡೇ ಕಾರ್ಯ ನಿರ್ವಹಣೆ...ಕಳೆದ ಒಂದು ತಿಂಗಳಿನಿಂದ ಇಂಥದೇ ಸ್ಥಿತಿಯಲ್ಲಿ ಹಗಲಿರುಳು ಎನ್ನದೇ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಕೆಲಸಲ್ಲಿ ತೊಡಗಿಸಿಕೊಂಡಿದ್ದಾರೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿ.

ಹೊರ ಜಿಲ್ಲೆಗಳಿಂದ ಬಂದಿರುವ ಸಿಬ್ಬಂದಿಯಂತೂ ಕುಟುಂಬದ ಸದಸ್ಯರ ಮುಖ ನೋಡದೇ, ನಿದ್ದೆ ಹಾಗೂ ಹಸಿವನ್ನೂ ಸಾವಧಾನದಿಂದ ತಣಿಸಿಕೊಳ್ಳಲು ಆಗದ ಸ್ಥಿತಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೆಆರ್‌ಎಸ್‌ನಿಂದ ನೀರು ಹೊರ ಹರಿಯುವುದು ಸ್ಥಗಿತಗೊಂಡಿದೆ. ಪ್ರತಿಭಟನೆಯ ಕಾವೂ ಕಡಿಮೆಯಾಗಿದೆ. ಕಾವೇರಿ ನದಿ ಪ್ರಾಧಿಕಾರದ ಸಭೆ ಹಾಗೂ ಸುಪ್ರೀಂಕೋರ್ಟ್‌ನ ವಿಚಾರಣೆ ಬಾಕಿ ಇರುವುದರಿಂದ ಪೊಲೀಸ್ ಸಿಬ್ಬಂದಿಗೆ ಮಾತ್ರ ಇನ್ನೂ ಬಿಡುವು ಸಿಕ್ಕಿಲ್ಲ.ಬೆಂಗಳೂರು-ಮೈಸೂರು ಹೆದ್ದಾರಿ, ಸರ್ಕಾರಿ ಕಚೇರಿ, ಜನನಿಬಿಡ ಪ್ರದೇಶ ಸೇರಿದಂತೆ ವಿವಿಧೆಡೆ ಸುಡು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.ತಮಿಳುನಾಡಿಗೆ ನೀರು ಬಿಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದ್ದಂತೆಯೇ ದೂರದ ಹಾವೇರಿ, ಧಾರವಾಡ, ಹಾಸನ, ವಿಜಾಪುರ, ಮಡಿಕೇರಿ ಮತ್ತಿತರ ಕಡೆಯ ಪೊಲೀಸ್ ಸಿಬ್ಬಂದಿಯನ್ನು ಇಲ್ಲಿಗೆ ಕರೆಸಲಾಗಿತ್ತು.

ಇವರೆಲ್ಲ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ಇಲ್ಲಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ರಾಜಣ್ಣ. ಸ್ನಾನ ಹಾಗೂ ನಿದ್ದೆಗೆ ಪೊಲೀಸ್ ತರಬೇತಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ದಿನಪೂರ್ತಿ ರಸ್ತೆ ಬದಿ, ಪೊಲೀಸ್ ವಾಹನಗಳಲ್ಲಿಯೇ ಸಮಯ ಕಳೆಯಬೇಕು. ಮಧ್ಯಾಹ್ನದ ಊಟ ಕರ್ತವ್ಯದಲ್ಲಿದ್ದಲ್ಲಿಗೇ ಪಾರ್ಸಲ್‌ನಲ್ಲಿ ಬರುತ್ತದೆ.ತಮಿಳುನಾಡಿಗೆ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಬೈಕ್ ರ‌್ಯಾಲಿ, ಎತ್ತಿನಗಾಡಿ ಮೆರವಣಿಗೆ, ರಸ್ತೆ, ರೈಲು ತಡೆ, ಪಾದಯಾತ್ರೆ ಸೇರಿದಂತೆ ವಿವಿಧ ಪ್ರತಿಭಟನೆಗಳು ಜಿಲ್ಲೆಯುದ್ದಕ್ಕೂ ಸಾಲು, ಸಾಲಾಗಿ ನಡೆಯುತ್ತಿವೆ.ಜನ ಸಾವಿರ, ಸಾವಿರ ಸಂಖ್ಯೆಯಲ್ಲಿ ಸೇರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕ್ಷಣಾರ್ಧದಲ್ಲಿ ರಸ್ತೆ ತಡೆಯನ್ನೂ ಆರಂಭಿಸಿ ಬಿಡುತ್ತಾರೆ. ಅವರ ಮನವೊಲಿಸಿ, ಸಂಚಾರ ಸುಗಮಗೊಳಿಸುವ ಕೆಲಸವನ್ನು ಪೊಲೀಸರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆಯನ್ನೂ ಹಾಕಲಾಗುತ್ತಿದೆ. ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಬೆರಳೆಣಿಕೆಯಷ್ಟಿದ್ದರೂ, ನಯವಾಗಿ ಮಾತನಾಡುವ ಮೂಲಕ ಪ್ರತಿಭಟನಾಕಾರರನ್ನು ಶಾಂತಗೊಳಿಸುವ ಕೆಲಸ ನಡೆದೇ ಇದೆ.

ಪ್ರತಿಭಟನೆಗಳು ಆರಂಭವಾಗಿ ತಿಂಗಳಾಗುತ್ತಾ ಬಂದರೂ, ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗಿಲ್ಲ. ಬಿಡಿಬಿಡಿಯಾದ ಒಂದೆರಡು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ, ಉಳಿದಂತೆ ಪ್ರತಿಭಟನೆಯೂ ಶಾಂತ ರೀತಿಯಲ್ಲಿಯೇ ಸಾಗಿದೆ. ತಾಳ್ಮೆಯಿಂದ ಕಾರ್ಯ ನಿರ್ವಹಿಸುತ್ತಿರುವುದೇ ಇದಕ್ಕೆ ಬಹುಮುಖ್ಯ ಕಾರಣ.

ಆಸ್ತಿ ನಷ್ಟವಿಲ್ಲ : ಕೆಆರ್‌ಎಸ್ ಮುತ್ತಿಗೆ ಹಾಕಿದ ದಿನವಂತೂ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಪೊಲೀಸರ ರಕ್ಷಣಾ ಕೋಟೆಯನ್ನು ಮುರಿದು ಒಳನುಗ್ಗಲು ಪ್ರಯತ್ನಿಸುತ್ತಲೇ ಇದ್ದರು. ಕೆಲವೊಮ್ಮೆ ಕಲ್ಲು ತೂರಿದರು. ಆದರೂ, ಪೊಲೀಸರು ಸಂಯಮ ವಹಿಸಿಕೊಂಡೇ ಬಂದಿದ್ದಾರೆ. ಗಡಿ ಭದ್ರತಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ಕರ್ನಾಟಕ ಮೀಸಲು ಪಡೆ ಸೇರಿದಂತೆ ಜಿಲ್ಲೆಯ ಪೊಲೀಸ್ ಹಾಗೂ ಹಿರಿಯ ಅಧಿಕಾರಿಗಳು ಬಿಡುವಿಲ್ಲ.`ಹಾವೇರಿ ಜಿಲ್ಲೆಯಿಂದ ಬಂದಿದ್ದೇವೆ. ಗಣೇಶ ಹಬ್ಬ, ಗಲಭೆಗಳಾದಾಗ ಹೀಗೆ ಹೊರಗಡೆ ಕರ್ತವ್ಯಕ್ಕೆ ಹೋದದ್ದಿದೆ. ಆದರೆ ತಿಂಗಳುಗಟ್ಟಲೇ ಹೊರಗೆ ಬಂದಿರುವುದು ಕಡಿಮೆ. ಪತ್ನಿ ಮತ್ತು ಮಕ್ಕಳೊಂದಿಗೆ ದೂರವಾಣಿಯಲ್ಲೇ ಮಾತನಾಡುತ್ತೇವೆ. ಕರ್ತವ್ಯ ಮಾಡಲೇಬೇಕಲ್ಲವೇ~ ಎನ್ನುತ್ತಾರೆ ಸಿಬ್ಬಂದಿಯೊಬ್ಬರು.`ಗಲಭೆ ನಡೆದಲ್ಲಿ ಕರ್ತವ್ಯ ಮಾಡುವಾಗ ಲಾಠಿಯನ್ನು ಎಗ್ಗಿಲ್ಲದೇ ಬೀಸುತ್ತೇವೆ. ಆದರೆ, ಇಲ್ಲಿ ಜನ ತಮ್ಮ ಬದುಕಿಗಾಗಿ ಹೋರಾಡುತ್ತಿದ್ದಾರೆ. ನಿಜವಾಗಿ ಆ ಹೋರಾಟದಲ್ಲಿ ನಾವೂ ಪಾಲ್ಗೊಳ್ಳಬೇಕಿತ್ತು. ಕರ್ತವ್ಯದ ಕಾರಣ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ, ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ~ ಎನ್ನುವುದು ಬಹುತೇಕ ಸಿಬ್ಬಂದಿ ಮಾತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry