ಕಾವೇರಿ ಕೂಗು: ಹಾಸನ ಜಿಲ್ಲೆ ಸ್ತಬ್ಧ

7

ಕಾವೇರಿ ಕೂಗು: ಹಾಸನ ಜಿಲ್ಲೆ ಸ್ತಬ್ಧ

Published:
Updated:

ಹಾಸನ: ತಮಿಳುನಾಡಿಗೆ ಕಾವೇರಿ  ನೀರು ಬಿಡುವುದನ್ನು ವಿರೋಧಿಸಿ ಶನಿವಾರ ಕರೆ ನೀಡಲಾದ ಬಂದ್‌ಗೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.

ಹಾಸನ ವರದಿ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಶನಿವಾರ  ಕರೆ ನೀಡಿದ್ದ `ಕರ್ನಾಟಕ ಬಂದ್~ಗೆ ಹಾಸನ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರ ಹಾಗೂ ಹೋಬಳಿಗಳಲ್ಲೂ ಬಂದ್ ಯಶಸ್ವಿಯಾಗಿದ್ದು ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.ಮುಂಜಾನೆಯೇ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಸಂಚಾರಕ್ಕೆ ಅಡ್ಡಿ ಉಂಟುಮಾಡಿದರು.ಎನ್.ಆರ್.ವೃತ್ತ, ಸಾಲಗಾಮೆ ರಸ್ತೆ, ರಿಂಗ್ ರಸ್ತೆ, ಬೈಪಾಸ್ ರಸ್ತೆ, ಹಳೆಯ ಬಸ್ ನಿಲ್ದಾಣದ ಮುಂದೆ, ಹೇಮಾವತಿ ಪ್ರತಿಮೆ ಮುಂಭಾಗ, ತಣ್ಣೀರುಹಳ್ಳ... ಹೀಗೆ ಪ್ರಮುಖ ಸ್ಥಳಗಳಲ್ಲಿ ಮುಂಜಾನೆಯಿಂದಲೇ ಟೈರ್ ಸುಟ್ಟಿದ್ದರಿಂದ ನಗರದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿತು. ಅಗ್ನಿಶಾಮಕದಳದವರು ನಗರದೆಲ್ಲೆಡೆ ಓಡಾಡಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದರು.ನಗರದಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರ ವಿರಳವಾಗಿತ್ತು. ಔಷಧ ಅಂಗಡಿ, ಆಸ್ಪತ್ರೆಗಳನ್ನು ಬಿಟ್ಟರೆ ಎಲ್ಲ ಅಂಗಡಿ ಮುಂಗಟ್ಟುಗಳೂ ಮುಚ್ಚಿದ್ದವು. ಬಸ್ಸುಗಳು ರಸ್ತೆಗಿಳಿದಿರಲಿಲ್ಲ. ಆಟೋಗಳ ಸಂಚಾರವೂ ವಿರಳವಾಗಿತ್ತು. ವಿವಿಧೆಡೆ ನಡೆಯಬೇಕಾಗಿದ್ದ ಶನಿವಾರದ ಸಂತೆಗಳೂ ರದ್ದಾಗಿದ್ದವು.ನಗರದ ಶಾಲಾ ಕಾಲೇಜುಗಳಿಗೆ ಮೊದಲೇ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಸಹ ಶನಿವಾರ ಬಾಗಿಲು ಮುಚ್ಚಿದ್ದವು. ನಗರದಲ್ಲೂ ಸುದ್ದಿ ವಾಹಿನಿಗಳನ್ನು ಬಿಟ್ಟರೆ ಇತರ ಟಿ.ವಿ ವಾಹಿನಿಗಳೂ ಬಂದ್ ಆಗಿದ್ದವು.ವಿವಿಧ ಸಂಘಟನೆಗಳವರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ,  ಮೆರವಣಿಗೆ, ಬೈಕ್ ರ‌್ಯಾಲಿಗಳನ್ನು ನಡೆಸಿದವು. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಆಲೂರು ವರದಿ: ಬಿಜೆಪಿ, ಜೆಡಿಎಸ್,ಕಾಂಗ್ರೆಸ್, ಜಯ ಕರ್ನಾಟಕ, ರಕ್ಷಣಾ ವೇದಿಕೆ, ಸಮರಸೇನೆ, ಆಜಾದ್ ಟಿಪ್ಪು ಸಂಘರ್ಷ ಸಮಿತಿ, ಬಜರಂಗದಳ ಮತ್ತು ಕಸ್ತೂರಿ ಕನ್ನಡ ಸೇನೆ ಮತ್ತು ಇತರ ಸಂಘ- ಸಂಸ್ಥೆಗಳು ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಶನಿವಾರ ಬೆಳಗ್ಗೆ ಎಲ್ಲ ಅಂಗಡಿ-ಮುಗ್ಗಟ್ಟು ಮುಚ್ಚಿದ್ದರಿಂದ ವಹಿವಾಟು ಸ್ಥಗಿತಗೊಂಡಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬ್ಯಾಂಕ್, ಸರ್ಕಾರಿ ಕಚೇರಿಗಳು, ಸಾರಿಗೆ ಬಸ್ಸು, ಖಾಸಗಿ ವಾಹನಗಳ ಸಂಚಾರ ಸ್ಥಗಿತದಿಂದ ಪಟ್ಟಣ ನಿಶ್ಯಬ್ಧವಾಗಿತ್ತು. ಆದರೆ, ಖಾಸಗಿ ಆಸ್ಪತ್ರೆ, ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.ಬಿಜೆಪಿ ಮುಖಂಡ ಎ.ಎಚ್.ರಮೇಶ್, ರಕ್ಷಣಾ ವೇದಿಕೆ ಸುರೇಶ್, ಜೆಡಿಎಸ್‌ನ ಎಚ್.ಬಿ. ಧರ್ಮರಾಜ್, ಮಲ್ಲಿಕಾರ್ಜುನ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಹನುಮಂತೇಗೌಡ, ಶಂಶುದ್ದೀನ್, ಎಚ್.ವಿ. ಶಿವರಾಮೇಗೌಡ, ಸಂದೇಶ್, ಕೆ.ಆರ್. ಲೋಕೇಶ್, ರತೀಶ್‌ಗೌಡ, ಪ.ಪಂ. ಅಧ್ಯಕ್ಷ ಎಚ್.ಬಿ. ಧರ್ಮರಾಜ್ ಇದ್ದರು.

ಅರಸೀಕೆರೆ ವರದಿ: ಪ್ರಗತಿಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ ಶನಿವಾರ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕ, ದಲಿತ ಸಂಘರ್ಷ ಸಮಿತಿ ಹಾಗೂ ರಾಜ್ಯ ರೈತ ಸಂಘಗಳು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆ ಯಲ್ಲಿ ಅಂಗಡಿ ಮುಂಗಟ್ಟುಗಳ ಮುಚ್ಚಿದ್ದವು. ಹೋಟೆಲ್‌ಗಳು, ಚಲನಚಿತ್ರ ಮಂದಿರ, ಶಾಲಾ ಕಾಲೇಜುಗಳು ಬ್ಯಾಂಕಿಂಗ್ ಸೇವೆ ಸಾರಿಗೆ ಸೌಲಭ್ಯಗಳು ಸ್ಥಗಿತಗೊಂಡಿದ್ದವು. ಬ್ಯಾಂಕಿಂಗ್ ಸೌಲಭ್ಯ ಇಲ್ಲದೆ ಗ್ರಾಹಕರು ಪರದಾಡಿದರು. ಬಿ.ಎಚ್. ರಸ್ತೆ ಅಂಗಡಿ ಮುಂಗಟ್ಟು ಮುಚ್ಚಿದ್ದರಿಂದ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.ತಾಲ್ಲೂಕು ಕರವೇ, ದಲಿತ ಸಂಘರ್ಷ ಸಮಿತಿ ಹಾಗೂ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ಪಟ್ಟಣದ ಪಿಪಿ ವೃತ್ತದಲ್ಲಿ ಜಮಾಯಿಸಿ ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.ತಾಲ್ಲೂಕು ಕರವೇ ಅಧ್ಯಕ್ಷ ಹೇಮಂತ್‌ಕುಮಾರ್, ಉಪಾಧ್ಯಕ್ಷ ಬಾಣಾವರ ಲಕ್ಷ್ಮಿಶ್, ರವಿಶಂಕರ್, ತುಳಸಿದಾಸಗೌಡ, ನಗರ ಘಟಕದ ಅಧ್ಯಕ್ಷ ಕಿರಣ್‌ಗೌಡ, ದಲಿತ ಸಂಘರ್ಷ ಸಮಿತಿ ಮುಖಂಡ ಜಿ. ರಾಮು, ಕೆ. ಆನಂದ್, ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು, ರೈತ ಸಂಘದ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಪಾಲ್ಗೊಂಡಿದ್ದರು.

ಬಾಣಾವರ ವರದಿ: ಕರ್ನಾಟಕ ಬಂದ್‌ಗೆ ಪಟ್ಟದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಲವು ಅಂಗಡಿಗಳು ಮುಚ್ಚಿದ್ದರೆ, ಮತ್ತೆ ಕೆಲವು ಎಂದಿನಂತೆ ವ್ಯಾಪರದಲ್ಲಿ ತೊಡಗಿದ್ದವು. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು ಮತ್ತು ಬ್ಯಾಂಕ್‌ಗಳಿಗೆ ರಜೆ ನೀಡಲಾಗಿತ್ತು. ವಾಹನ ಸಂಚಾರ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಚನ್ನರಾಯಪಟ್ಟಣ ವರದಿ: ವಿವಿಧ ಸಂಘಟನೆಗಳು ಶನಿವಾರ ಕರೆ  ನೀಡಿದ್ದ ಬಂದ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟು ಮುಚ್ಚಿದ್ದವು. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದರು ಜನರು ಅತ್ತ ಸುಳಿಯಲಿಲ್ಲ. ಬಸ್‌ಗಳು ರಸ್ತೆಗಿಳಿಯಲಿಲ್ಲ. ಮುಖ್ಯ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತು. ಬಂದ್‌ನಿಂದಾಗಿ ಸಂತೆ ನಡೆಯಲಿಲ್ಲ. ಜನ ಸಂಚಾರ ವಿರಳವಾಗಿತ್ತು. ಕೆ.ಆರ್. ವೃತ್ತದಲ್ಲಿ ವಿವಿಧ ಸಂಘಟನೆ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರದ ಧೋರಣೆ ಖಂಡಿಸಿದರು. ನಂತರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.ತಾಲ್ಲೂಕು ಮುಸ್ಲಿಂ ಯುವಕ ಸಂಘದ ಸದಸ್ಯರು ಉರುಳು ಸೇವೆ ಮಾಡಿದರು. ಕದಂಬ ಯುವಕ ಸಂಘ ಬೈಕ್ ರ‌್ಯಾಲಿ ನಡೆಸಿತು. ಕೆಲವರರು ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ತಹಶೀಲ್ದಾರ್ ಎಚ್.ಎಸ್. ಸತೀಶ್‌ಬಾಬು ಅವರಿಗೆ ಮನವಿ ಸಲ್ಲಿಸಿದರು.ಶಾಸಕ ಸಿ.ಎಸ್. ಪುಟ್ಟೇಗೌಡ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಪಟೇಲ್ ಮಂಜುನಾಥ್, ಎ.ಈ. ಚಂದ್ರಶೇಖರ್, ಸಿ.ಎನ್. ಬಾಲಕೃಷ್ಣ, ಎಂ.ಎ. ಗೋಪಾಲಸ್ವಾಮಿ,ಎಚ್. ಎಸ್. ಶ್ರೀಕಂಠಯ್ಯ, ಎಚ್.ಎಸ್. ವಿಜಯಕುಮಾರ್, ವಿ.ಜಿ. ಲಲಿತಮ್ಮ, ಪರಮದೇವ ರಾಜೇಗೌಡ, ಎನ್.ಡಿ. ಕಿಶೋರ್, ಎಂ. ಶಂಕರ್, ರೈತ ಮುಖಂಡರಾದ ಸತ್ತಿಗೌಡ, ಅರಳಾಪುರ ಮಂಜೇಗೌಡ, ಸಿ.ಜಿ. ರವಿ, ಎಂ.ಎಲ್. ಹರೀಶ್, ವಿವಿಧ ಸಂಘಟನೆಗಳ ಮುಖ್ಯಸ್ಥರಾದ ಸಿ.ಎನ್. ಅಶೋಕ್, ಎಚ್.ಎನ್. ಲೋಕೇಶ್,ಭರತಗೌಡ, ನಂಜಂಡ ಮೈಮ್ ಇತರರು ಇದ್ದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಸೇರಿದಂತೆ ವರ್ತಕರ ಸಂಘ, ಚಿನ್ನಬೆಳ್ಳಿ ವರ್ತಕರ ಸಂಘ.ರೈತಸಂಘ, ಮುಸ್ಲಿಂ ಯುವಕ ಸಂಘ. ಕರ್ನಾಟಕ ಸಮರಸೇನೆ, ಕನ್ನಡ ಸಾಹಿತ್ಯ ಪರಿಷತ್ತು, ಗಣಪತಿ ಸೇವಾ ಸಮಿತಿ, ಕಾರು ಚಾಲಕರ ಸಂಘ. ಸಂತೆ ವ್ಯಾಪಾರಸ್ಥರ ಯುವಕರ ಸಂಘ. ಜವಳಿ ವರ್ತಕರ ಸಂಘ, ಭುವನೇಶ್ವರಿ ತರಕಾರಿ ಮಾರುಕಟ್ಟೆ ಸಂಘ. ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಸಂಘ. ಒಕ್ಕಲಿಗರ ಹಿತರಕ್ಷಣಾ ಸೇನೆ.ಒಕ್ಕಲಿಗರ ಸಂಘ, ಆಟೋಚಾಲಕರ ಸಂಘ,  ಕನ್ನಡ ಯುವ ವೇದಿಕೆ, ವಿಶ್ವಕರ್ಮ ಯುವ ಪಡೆ, ವಿದ್ಯುತ್ ಗುತ್ತಿಗೆದಾರರ ಸಂಘ, ಸ್ನೇಹಜೀವಿ ಸಂಘ. ನಾಡಪ್ರಭು ಕೆಂಪೇಗೌಡ, ಟೈಲರ್ಸ್‌ ಸಂಘ, ಬ್ಯಾಟರಿ ವರ್ಕ್ ಶಾಪ್, ಎಂಜಿನಿಯರಿಂಗ್ ವರ್ಕ್ ಶಾಪ್ ಸಂಘ ಬಂದ್ ಬೆಂಬಲಿಸಿದ್ದವು.

ಹಳೇಬೀಡು ವರದಿ: ಯಗಚಿ ಅಣೆಕಟ್ಟೆಯಿಂದ ನೀರು ಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಹಳೇಬಿಡಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ತಿಥಿ ಆಚರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು ಜಯಲಲಿತಾ ಪ್ರತಿಕೃತಿ ದಹಿಸಿದರು. ವರ್ತಕರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು. ಬಸ್ಸುಗಳು ಹಾಗೂ ಪ್ರಯಾಣಿಕರಿಲ್ಲದೆ ಬಿಕೋ ಎನುತ್ತಿದ್ದ ಹಳೇಬೀಡು ಬಸ್ ನಿಲ್ದಾಣ ದಲ್ಲಿ ಯುವಕರು  ಕ್ರಿಕೆಟ್ ಆಡುತ್ತಿದ್ದ ದೃಶ್ಯ ಕಂಡು ಬಂದಿತು. ಪ್ರತಿನಿತ್ಯ ಪ್ರವಾಸಿಗರಿಂದ ಗಿಜುಗುಡು ತ್ತಿದ್ದ ಹೊಯ್ಸಳೇಶ್ವರ ದೇವಾಲಯದಲ್ಲಿ ಜನರಿಲ್ಲದೆ ಭಣಗುಡುತ್ತಿತ್ತು.ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಉಪಾಧ್ಯಕ್ಷ ಸೀತಾರಾಮು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಂ. ವೀರಣ್ಣ, ಕರವೇ ಹೋಬಳಿ ಘಟಕದ ಹರೀಶ್, ಈಶ್ವರ್, ವಿದ್ಯಾರ್ಥಿ ನಾಯಕ ಯಶೋಧರ್, ಮುಖಂಡ ರಾದ ಸೊಪ್ಪಿನಹಳ್ಳಿ ಕೃಷ್ಣಮೂರ್ತಿ, ಎಲ್. ಲೋಕೇಶ್ ಇತರರು ಇದ್ದರು.ಅಡಗೂರು(ಹಳೇಬೀಡು): ಕಾವೇರಿ ಕಾವು ಹಳ್ಳಿಗಳಿಗೂ ಮುಟ್ಟಿದ್ದು, ಅಡಗೂರು ಗ್ರಾಮದಲ್ಲಿ ಗುರುವಾರ ಬಂದ್ ಆಚರಿಸಲಾಯಿತು. ಗ್ರಾಮದ ಯುವಕರು ಒಗ್ಗೂಡಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಮಿಳುನಾಡಿಗೆ ನೀರು ಕೊಡುವ ಉದ್ದೇಶದಿಂದ ಬೇಲೂರು ತಾಲ್ಲೂಕಿನ ಹಳೇಬೀಡು ಮಾದಿಹಳ್ಳಿ ಹೋಬಳಿಗಳಿಗೆ ಮರಿಚಿಕೆಯಾಗಿರುವ ಬೇಲೂರು ಯಗಚಿ ಅಣೆಕಟ್ಟೆ ನೀರಿಗೂ ಕರ್ನಾಟಕ ಸರ್ಕಾರ ಕಣ್ಣುಹಾಕಿರುವುದು ವಿಷಾದನೀಯ ಎಂದು ಪ್ರತಿಭಟನಾಕಾರರು ಖಂಡಿಸಿದರು.ವಿಜಯ್ ಕುಮಾರ್, ಎ.ಎಸ್.ಅತುಲ್, ವಿಜಯ್, ಮರಿದ್ಯಾವೆಗೌಡ, ಪಾಪಚ್ಚಿ, ಪ್ರಮೊದ್ ಇತರರು ಇದ್ದರು.

ಹೊಳೆನರಸೀಪುರ ವರದಿ: ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಹಾಗೂ ಶನಿವಾರದ ಬಂದ್ ಕರೆಗೆ ಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಪಟ್ಟಣದ ಅಂಗಡಿ, ಹೋಟೆಲ್, ಬೇಕರಿ, ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್‌ಗಳು, ಚಿತ್ರ ಮಂದಿರಗಳು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಬಂದ್ ಆಗಿದ್ದವು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹಾಸನ- ಮೈಸೂರು ರಸ್ತೆ, ಪೇಟೆ ಮುಖ್ಯ ರಸ್ತೆ, ಚನ್ನಾಂಬಿ ಕವೃತ್ತ, ಗಾಂಧಿವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಯಿತು. ಮತ್ತೆ ಕೆಲವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಣುಕು ಶವ ಯಾತ್ರೆ ನಡೆಸಿದರು. ಪಟ್ಟಣದಲ್ಲಿ ಹಲವು ಮೆರವಣಿಗೆಗಳು ನಡೆದವು.ಸ್ವಾಮಿವಿವೇಕಾನಂದ ಯುವ ವೇದಿಕೆ, ಜನಸ್ಪಂದನ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ತಾಲ್ಲೂಕು ಪತ್ರಕರ್ತರ ಸಂಘ, ಎಸ್‌ಎಲ್‌ಎನ್ ಯುವಕ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ವಾಸವಿ ಕ್ಲಬ್, ಪತಂಜಲಿಯೋಗ ಕೂಟ, ವರ್ತಕರ ಸಂಘ, ವಾಸವಿ ಸೂಪರ್ ಬಾಯ್ಸ, ಆರ್ಯವೈಶ್ಯ ಮಂಡಳಿ, ತಾಲ್ಲೂಕು ರೈತ ಸಂಘ, ಟಿಪ್ಪುಯುವಕ ಸಂಘ, ಕಾರು ಆಟೋ ಚಾಲಕ ಮಾಲೀಕರ ಸಂಘ, ಬಾಳೆಹಣ್ಣು ಮಾರಾಟಗಾರರ ಸಂಘ, ಮೊಬೈಲ್ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳು ಸದಸ್ಯರು ತಾಲ್ಲೂಕು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಶಾಸಕ ಎಚ್.ಡಿ. ರೇವಣ್ಣ, ಟಿ.ಶಿವಕುಮಾರ್, ಎಚ್.ವಿ. ಪುಟ್ಟರಾಜು, ರೆಹಮಾನ್, ಸುರೇಶ್‌ಕುಮಾರ್, ಎಸ್‌ಎಲ್‌ಎನ್ ಪ್ರಸನ್ನ, ರಾಧಾಕೃಷ್ಣ, ಕೆ.ಎಂ. ಶ್ರೀನಿವಾಸ್, ಎಚ್.ಕೆ. ಹರೀಶ್, ಕೆರಗೋಡು ಮಹೇಶ್, ಪುಟ್ಟಸೋಮಪ್ಪ, ಎ.ಆರ್. ರವಿಕುಮಾರ್, ಪ್ರೇಮಾಮಂಜುನಾಥ್, ನಂಜುಂಡೇಗೌಡ, ಪುಟ್ಟಸ್ವಾಮಿ, ಎಚ್.ಸಿ.ಎನ್ ಚಂದ್ರು, ಪ್ರಕಾಶ್, ಮುರಳಿಧರ ಗುಪ್ತಾ ಇದ್ದರು.   

ಹಿರೀಸಾವೆ ವರದಿ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಒಕ್ಕೂಟ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹೋಬಳಿಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಕರವೇ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶ್ರೀಕಂಠಯ್ಯ ವೃತ್ತದಿಂದ ಬೈಕ್ ಮತ್ತು ಆಟೊ ರ‌್ಯಾಲಿ ನಡೆಸಿದವು.

 

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಕರವೇ ಮುಖಂಡ ಮಹೇಶ್, ಬೇಕರಿ ವಾಸು,ಯೊಗೇಶ್, ಪುಟ್ಟಸ್ವಾಮಿ, ಡಾ. ಪರಮೇಶ್ವರ ಯುವಕ ಸಂಘದ ಮಂಜುನಾಥ, ಗೊವಿಂದರಾಜು, ಜಯಣ್ಣ ಮತ್ತು ಚೌಡೇಶ್ವರಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಅಂಗಡಿ- ಹೋಟೆಲ್‌ಗಳು ಬಾಗಿಲು ತೆರೆದು ಎಂದಿನಂತೆ ವ್ಯಾಪಾರ ನಡೆಸಿದವು. ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳ ಬಾಗಿಲು ತೆರೆದಿದ್ದವು. ಹೊರ ಊರುಗಳಿಂದ ಬರುವ ನೌಕರ ಹಾಜರಾತಿ ಕಡಿಮೆ ಇತ್ತು.

ಆಟೊ ಇತರ ವಾಹನಗಳ ಸಂಚಾರ ಪಟ್ಟಣ ದಲ್ಲಿ ಮಾಮೂಲಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಳಗ್ಗೆ ವಾಹನಗಳು ನಿರಾತಂಕವಾಗಿ ಸಂಚಾರಿಸಿದವು. 11 ನಂತರ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ಜಾವಗಲ್ ವರದಿ: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಪಟ್ಟಣದಲ್ಲಿ ಯಶಸ್ವಿಯಾ ಯಿತು. ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕ ಸಂಪೂರ್ಣ ಬಂದ್‌ಗೆ ಕರೆ ನೀಡಿತ್ತು.ಬೆಳಿಗ್ಗೆಯಿಂದಲೇ ವಹಿವಾಟು ಬಂದ್ ಮಾಡಿ ವರ್ತಕರು, ಖಾಸಗಿ ವಾಹನಗಳ ಮಾಲೀಕರು, ಚಾಲಕರು, ನಿರ್ವಾಹಕರು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದರು. ಪಟ್ಟಣದ ಅಂಚೆ ಕಚೇರಿ, ಬ್ಯಾಂಕ್, ಸರ್ಕಾರಿ ಕಚೇರಿಗಳು ಮುಚ್ಚಿದ್ದವು.  ಮುಖ್ಯರಸ್ತೆಯ ದರ್ಗಾದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿದರು. ಜಯಲಲಿತಾರ ಅಣಕು ಶವಯಾತ್ರೆ ನಡೆಸಿಲಾಯಿತು. ಬಸ್‌ನಿಲ್ದಾಣ ಮುಂಭಾಗ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಆರ್. ಮಹೇಶ್, ಜೆ.ಕೆ. ಚಿಕ್ಕಯ್ಯ, ಜೆ.ಎಸ್. ಬಿಂದುಮಾಧವ ಮಾತನಾಡಿದರು.

 

ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ, ಸದಸ್ಯರಾದ ರಮೇಶ, ಜಹೀರ್ ಅಹಮದ್ ರಂಗಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಭಾಸ್ಕರ ಹೋಬಳಿ ಕಾರ್ಯದರ್ಶಿ ದಯಾನಂದ, ಗಂಗಾಮತಸ್ಥ ಸಂಘದ ರವಿಶಂಕರ್, ಮಾಜಿ ಸದಸ್ಯ ನರಸಿಂಹಸ್ವಾಮಿ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಭಾನು ಪ್ರಕಾಶ್ ಪಾಲ್ಗೊಂಡಿದ್ದರು.

ರಾಮನಾಥಪುರ ವರದಿ:  ಕೊಣನೂರು ಮತ್ತು ರಾಮನಾಥಪುರ ಹೋಬಳಿಯ ಜನತೆ ಶನಿವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಕೊಣನೂರು, ರಾಮನಾಥಪುರ, ಬಸವಾ ಪಟ್ಟಣ ಮತ್ತು ಕೇರಳಾಪುರ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿ, ಮುಂಗಟ್ಟುಗಳ ವರ್ತಕರು ಬಾಗಿಲು ಮುಚ್ಚಿದ್ದವು.ರಾಜ್ಯ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಕಾರ್ಯಾ ಧ್ಯಕ್ಷ ಎಚ್.ಈ. ಜಗದೀಶ್ ನೇತೃತ್ವದಲ್ಲಿ ಕೊಣನೂರಿನ ಕಾವೇರಿ ನದಿ ತೂಗು ಸೇತುವೆ ಬಳಿ ತೆರಳಿ ಧರಣಿ ನಡೆಸಿದರು. ತಾಲ್ಲೂಕು ರೈತ ಸಂಘದ ಮುಖಂಡ ರಾದ ಹೊನಗಾನಹಳ್ಳಿ ಗೋವಿಂದೇಗೌಡ,ಎಚ್. ಟಿ. ಶಾಂತರಾಜು, ಶಾಹೀದ್,ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry