ಕಾವೇರಿ ಜಲ ವಿವಾದ: ಕರವೇ ಪ್ರತಿಭಟನೆ

7

ಕಾವೇರಿ ಜಲ ವಿವಾದ: ಕರವೇ ಪ್ರತಿಭಟನೆ

Published:
Updated:

ಯಲಬುರ್ಗಾ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಲತಾಯಿ ಧೋರಣೆಯಿಂದ ಕರ್ನಾಟಕ ರಾಜ್ಯದ ಜನತೆಗೆ ಅನ್ಯಾಯವಾಗಿದೆ, ಪುನರ್‌ಪರಿಶೀಲನೆ ಮಾಡಿ ನ್ಯಾಯಸಮ್ಮತ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ)ಯ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ವಿವಿಧ ಬೀದಿಗಳನ್ನು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಂತರ ಪ್ರಧಾನಿ ಮನಮೋಹನ್‌ಸಿಂಗ್ ಅವರ ಪ್ರತಿಕೃತಿ ದಹಿಸಿದರು.

ತಾಲ್ಲೂಕು ಕರ್ನಾಟಕ ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮುನಿಯಪ್ಪ ಹುಬ್ಬಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಸ. ಶರಣಪ್ಪ ಪಾಟೀಲ, ರೈತ ಮುಖಂಡ ತಿರುಗುಣೆಪ್ಪ ಬೆಟಗೇರಿ ಸೇರಿದಂತೆ ಅನೇಕರು ಮಾತನಾಡಿ, ರಾಜ್ಯದ ಜನತೆಗೆ ಸಮರ್ಪಕವಾಗಿ ನೀರುದೊರೆಯದೇ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀಡುವುದು ಸಾಧ್ಯವಿಲ್ಲ, ವಾಸ್ತವ ಚಿತ್ರಣವನ್ನು ಅರಿಯದೇ ಸರ್ಕಾರದ ಮುಖ್ಯಸ್ಥರು ಮಾತನಾಡುವುದು ಸರಿಯಲ್ಲ, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಮಾರು ವರ್ಷಗಳಿಂದಲೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಕೇಂದ್ರ ಸರ್ಕಾರ ತಮಿಳುನಾಡಿಗೆ ಹೆಚ್ಚು ಒಲವು ತೋರುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆಪಾದಿಸಿದ ಮುಖಂಡರು, ರಾಜ್ಯಕ್ಕೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದವರು ಈ ಕೂಡಲೇ ರಾಜೀನಾಮೆ ಸಲ್ಲಿಸಿ ನಾಡಿನ ಜನರ ಹಿತ ಕಾಪಾಡುವುದು ಅಗತ್ಯವಿದೆ ಎಂದರು.ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದ ನೀರಾವರಿ ಹಾಗೂ ಅಗತ್ಯ ಸೌಲಭ್ಯಗಳ ಕುರಿತ ಪ್ರತಿಭಟನೆಗೆ ಆ ಭಾಗದ ಜನತೆ ಬೆಂಬಲಿಸದೇ ನಿರ್ಲಕ್ಷಿಸುವುದು ವಿಷಾದನೀಯ. ಆದರೂ ರಾಜ್ಯದ ಸಮಗ್ರತೆ ದೃಷ್ಟಿಯಿಂದ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಜನರ ಹೋರಾಟಕ್ಕೆ ಬೆಂಬಲಿಸುತ್ತಿರುವುದಾಗಿ ಅನೇಕರು ಅಭಿಪ್ರಾಯಪಟ್ಟರು.ತಾಲ್ಲೂಕಿನ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು, ಕೆಲವೊಂದು ಅಂಗಡಿ ಮಾಲಿಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಉಳ್ಳಾಗಡ್ಡಿ ನೇತೃತ್ವ ವಹಿಸಿದದರು. ಕಾರ್ಯದರ್ಶಿ ರಾಜಶೇಖರ ಶ್ಯಾಗೋಟಿ, ಉಪಾಧ್ಯಕ್ಷ ಮಹಾಂತೇಶ ಬಂಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಜಯ ಕರ್ನಾಟಕ ಪ್ರತಿಭಟನೆ:
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಒತ್ತಾಯಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಕೈಬಿಡುವುದು ಹಾಗೂ ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಶನಿವಾರ ಜಯಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿತು.ಕನ್ನಡ ಕ್ರಿಯಾ ಸಮಿತಿ ವೃತ್ತದ ಬಳಿ ಸಭೆ ಸೇರಿ ನಂತರ ಜಯಲಲಿತಾ ಅವರ ಪ್ರತಿಕೃತಿ ದಹಿಸಿದರು. ಅಧ್ಯಕ್ಷ ಖಾಜಾವಲಿ ಮಾನ್ವಿ, ಉಪಾಧ್ಯಕ್ಷ ಶ್ರೀಧರಗೌಡ ಪಾಟೀಲ, ಕಾರ್ಯದರ್ಶಿ ಶಿವಶರಣಯ್ಯ ಎಂ, ಅಶ್ರಫಲಿ, ಫರೀದ್, ಬಸವರಾಜ ಯಂಕಪ್ಪ ಟಿ, ಕನಕಪ್ಪ ಎಂ, ನಿಂಗನಗೌಡ ಎಂ. ಕಲ್ಯಾಣಪ್ಪ ಜಿ. ಹಾಗೂ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry