ಕಾವೇರಿ ಜಾಗೃತಿ ತೀರ್ಥಯಾತ್ರೆ ಆರಂಭ

7

ಕಾವೇರಿ ಜಾಗೃತಿ ತೀರ್ಥಯಾತ್ರೆ ಆರಂಭ

Published:
Updated:

ಮಡಿಕೇರಿ: ಜೀವನದಿ ಕಾವೇರಿ ಮಾತೆಗೆ ಕನ್ನಡಿಗರು ಹಾಗೂ ತಮಿಳರು ಅವಳಿ-ಜವಳಿ ಮಕ್ಕಳಿದ್ದಂತೆ. ಇವರಿಬ್ಬರನ್ನೂ ಒಂದುಗೂಡಿಸುವ ಮೂಲಕ  ಎರಡೂ ರಾಜ್ಯಗಳ ನಡುವೆ ಮಧುರ ಬಾಂಧವ್ಯವನ್ನು ಕಾವೇರಿ ಮಾತೆ ಬೆಸೆಯುತ್ತಾಳೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.ತಲಕಾವೇರಿಯಲ್ಲಿ ಭಾನುವಾರ ~ಮಾತೆ ಶ್ರೀ ಕಾವೇರಿ ಜಾಗೃತಿ ತೀರ್ಥಯಾತ್ರೆ~ಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಕಾವೇರಿಯ ಪಾವಿತ್ರ್ಯತೆಯನ್ನು ಸಾರುವುದು, ನದಿಯನ್ನು ಕಲುಷಿತಗೊಳಿಸದಂತೆ ನದಿಯ ತಟದಲ್ಲಿನ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೊರಟಿರುವ ಈ ಯಾತ್ರೆ ಮಹತ್ವದ್ದಾಗಿದೆ. ಕಾವೇರಿ ಉಗಮ ಸ್ಥಳವಾದ ತಲಕಾವೇರಿಯಿಂದ ತಮಿಳುನಾಡಿನ ಪೂಂಬುಕಾರ್‌ವರೆಗೆ ಸುಮಾರು 765 ಕಿ.ಮೀ  ವರೆಗೆ ಸಂಚರಿಸಿ ಭಾವೈಕ್ಯ ಸಾರಲಿದೆ ಎಂದರು.ಈ ಯಾತ್ರೆಯನ್ನು ರಾಮೇಶ್ವರಂನ ಅಖಿಲ ಭಾರತ ಸನ್ಯಾಸಿಗಳ ಸಂಘವು ಆಯೋಜಿಸಿದೆ. ಯಾತ್ರೆಯ ಉದ್ದೇಶವನ್ನು ರಾಜ್ಯದ ಸಂಯೋಜಕ ಸದಾಶಿವ ಅವರು ವಿವರಿಸಿದರು.ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯದವರಲ್ಲದೇ, ತಮಿಳುನಾಡಿನ ಸುಮಾರು 40 ಜನ ಸಂತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿ.ಪಂ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಭಾಗಮಂಡಲ ಜಿ.ಪಂ.ಕ್ಷೇತ್ರದ ಸದಸ್ಯ ಎಸ್.ಎನ್.ರಾಜಾರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ದೇವಸ್ಥಾನ ಸಮಿತಿಯ ಎಸ್.ಎಸ್. ಸಂಪತ್‌ಕುಮಾರ್ ಇದ್ದರು. ಜಿಲ್ಲಾ ಸಂಯೋಜಕ ಚಿ.ನಾ.ಸೋಮೇಶ್ ಸ್ವಾಗತಿಸಿದರು.ಭೇಟಿ ಮಾಡಿದರೆ ತಪ್ಪೇನು?: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜೈಲಿನಲ್ಲಿ ಮಠಾಧೀಶರು ಭೇಟಿಯಾಗಿರುವ ಬಗ್ಗೆ ಪೇಜಾವರ ಶ್ರೀಗಳನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಭೇಟಿ ಮಾಡಿರುವುದರಲ್ಲಿ ತಪ್ಪೇನೂ ಇಲ್ಲ ಎಂದರು.ಆಸ್ಪತ್ರೆಯಲ್ಲಾಗಲಿ, ಜೈಲಿನಲ್ಲಾಗಲೀ ಕೈದಿಗಳನ್ನು ಭೇಟಿ ಮಾಡಿ ಮನಃಪರಿವರ್ತನೆ ಮಾಡಲು ಪ್ರಯತ್ನಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry