ಶುಕ್ರವಾರ, ಏಪ್ರಿಲ್ 23, 2021
24 °C

ಕಾವೇರಿ ತಟದಲ್ಲಿ ನಾದ ಲಹರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಹೊಸದಾಗಿ ಜೀರ್ಣೋದ್ಧಾರಗೊಂಡ ಶಿವ ದೇವಾಲಯದಲ್ಲಿ ನಿತ್ಯ ಪೂಜೆ, ನಸುಕು ಹರಿದಾಕ್ಷಣ ಕಿವಿಗೆ ಬೀಳುವ ಇಂಪಾದ ಸಂಗೀತದ ಲಹರಿ, ನಿರಂತರ ವೀಣಾ ವಾದನದ ನೀನಾದ, ಶ್ರೇಷ್ಠ ವಿದ್ವಾಂಸರ ಸಿರಿಕಂಠದಲ್ಲಿ ಮೂಡಿಬರುತ್ತಿರುವ ಗಾಯನ ಸುಧೆ, ಲಯ- ತಾಳಕ್ಕೆ ತಕ್ಕಂತೆ ನುಡಿಸುವ ಮೃದಂಗ, ಪಿಟೀಲು, ರಾತ್ರಿ ವೇಳೆ ಕಣ್ಣು ಕೋರೈಸುವ ವಿದ್ಯುತ್ ಬೆಳಕಿನ ಚಿತ್ತಾರ, ಕಣ್ಮನ ತಣಿಸುವ ನೃತ್ಯ, ನಾಟಕ ವೈಭವ...

ಇದು ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಸಂಗೀತೋತ್ಸವ ಸಮಿತಿ ಟ್ರಸ್ಟ್‌ನ ದಶಮಾನೋತ್ಸವ ಸಮಾರಂಭದ ನಿಮಿತ್ತ ನಾಲ್ಕು ದಿನಗಳಿಂದ ನಡೆಯುತ್ತಿರುವ ಸಂಗೀತ, ನೃತ್ಯ, ನಾಟಕ, ಗಮಕೋತ್ಸವ ವೈಶಿಷ್ಟ್ಯದ ಹಲವು ತುಣುಕಗಳಿವು.

ಅಚ್ಚುಕಟ್ಟಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆ ಶಾಸ್ತ್ರೀಯ ಸಂಗೀತ ವಿದ್ವಾಂಸರು ರಚಿಸಿರುವ ಕೃತಿಗಳು, ಪುಸ್ತಕಗಳು ಹಾಗೂ ಸಿಡಿ ಕ್ಯಾಸೆಟ್‌ಗಳ ಮಾರಾಟ ಕೇಂದ್ರವನ್ನು ಸಹ ತೆರೆಯಲಾಗಿದೆ.

ಜೀರ್ಣೋದ್ಧಾರಗೊಂಡ ದೇಗುಲ: ಅಳಿವಿನ ಅಂಚಿನಲ್ಲಿರುವ ದೇವಾಲಯಗಳ ಅಭಿವೃದ್ಧಿಗಾಗಿ ಸಾರ್ವಜನಿಕರು ಮುಜರಾಯಿ ಇಲಾಖೆಗೆ ಅರ್ಜಿಗಳ ಸುರಿಮಳೆ ಸುರಿಸಿ, ಹಲವು ಬಾರಿ ಜನಪ್ರತಿನಿಧಿಗಳ ಬಳಿ ಗೋಗರೆದರೂ ಅವುಗಳ ಜೀರ್ಣೋದ್ಧಾರ ಆಗುವುದು ಬರಿ ಕನಸು.

ಆದರೆ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ನದಿ ತಟದಲ್ಲಿ ತೀರ ಅವಸಾನದತ್ತ ಸಾಗಿದ್ದ ಪುರಾತನ ಕಾಲದ ಶಿವ ದೇವಾಲಯದ ಜೀರ್ಣೋದ್ಧಾರ ಕೈಂಕರ್ಯ ಕೈಗೊಂಡು ಆಧುನಿಕ ಮಾದರಿಯಲ್ಲಿ ನವೀಕರಿಸಿ ಉದ್ಘಾಟನೆ ಮಾಡಿದ್ದು, ಇಲ್ಲಿ ನಿತ್ಯ ಪೂಜೆ ನಡೆಯುತ್ತಿದೆ.

ಕಣ್ಮನ ತಣಿಸಿದ ಸಂಗೀತೋತ್ಸವ ತಾಣ: ಪ್ರತಿ ವರ್ಷ ಗ್ರಾಮದ ಸಪ್ತಸ್ವರ ದೇವತಾ ಧ್ಯಾನ ಮಂದಿರದ ಬಳಿ ಸಂಗೀತೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ಬಾರಿ ಸಂಗೀತ ಗಾನ ಕಲಾ ಭೂಷಣ ಆರ್.ಕೆ. ಪದ್ಮನಾಭ ಅವರು ಆಯ್ಕೆ ಮಾಡಿಕೊಂಡಿದ್ದು, ಕಾವೇರಿ ನದಿ ತಟದ ಸುಂದರ ತಾಣ. ನದಿ ಅಂಚಿನಲ್ಲಿ 70 ಅಡಿಗಳಷ್ಟು ಎತ್ತರವಿರುವ ಈ ವಿಶಾಲ ಜಾಗದಲ್ಲಿ ಹಸಿರು ಹೊದ್ದ ದಟ್ಟ ಮರ ಕಾಡುಗಳ ನಡುವೆ ‘ನಾರಾಯಣ ನಾದ ಮಂಟಪ’ ಎನ್ನುವ ಹೆಸರಿನಲ್ಲಿ ಅದ್ದೂರಿ ವೇದಿಕೆ ಹಾಕಲಾಗಿದೆ. ತಂಪಾದ ವಾತಾವರಣದ ಕೆಳಗೆ 500 ಮಂದಿ ಕುಳಿತು ಸಂಗೀತ ಕೇಳಲು ಆಸನದ ವ್ಯವಸ್ಥೆ ಕಲ್ಪಿಸಿದ್ದು, ಸಂಗೀತಾಸಕ್ತರ ಮೈ ಮನಗಳಿಗೆ ಮುದ ನೀಡುತ್ತಿದೆ.

ಸಂಗೀತ ದಿಗ್ಗಜರ ಸಮ್ಮಿಲನ: ಶಾಸ್ತ್ರೀಯ ಸಂಗೀತ ಪರಂಪರೆಗೆ ಸಾಕಷ್ಟು ವಿದ್ವಾಂಸರನ್ನು ಕೊಡು ಗೆಯಾಗಿ ಅರ್ಪಿಸುವ ಮೂಲಕ ತನ್ನದೇ ಶ್ರೇಷ್ಠತೆಯನ್ನು ಮೆರೆದಿರುವ ರುದ್ರಪಟ್ಟಣ ಶಾಸ್ತ್ರೀಯ ಸಂಗೀತದ ತವರೂರು ಎನಿಸಿಕೊಂಡಿತ್ತು. ಕಾಲಾ ನಂತರದಲ್ಲಿ ಬಹುತೇಕ ವಿದ್ವಾಂಸರು ನಗರ ಪ್ರದೇಶಗಳತ್ತ ವಲಸೆ ಹೋಗಿ ದೇಶ- ವಿದೇಶಗಳಲ್ಲಿ ಸಂಗೀತ ಕಛೇರಿ ನೀಡುತ್ತಾ ಅಲ್ಲಿಯೇ ನೆಲೆಸಿದ್ದರು. ಆರ್.ಕೆ. ಪದ್ಮನಾಭ ಸಂಗೀತ ಗ್ರಾಮದ ಮೇಲೆ ಇಟ್ಟಿರುವ ಅಪಾರ ಅಭಿಮಾನದಿಂದಾಗಿ ಹಲವು ಸಂಗೀತೋತ್ಸವ ಕಾರ್ಯ ಕ್ರಮಗಳನ್ನು ನಡೆಸುವ ಮೂಲಕ ವಲಸೆ ಹೋಗಿರುವ ಸಂಗೀತ ವಿದ್ವಾಂಸರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನದ ಫಲ ಇಲ್ಲಿ ಯಶಸ್ವಿಯಾಗಿದೆ.

ಕೃಷಿಕರತ್ತ ಶಾಸ್ತ್ರೀಯ ಸಂಗೀತ: ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಶಾಸ್ತ್ರೀಯ ಸಂಗೀತವನ್ನು ಹಳ್ಳಿಗಳತ್ತ ಕೊಂಡೊಯ್ಯುವ ಪ್ರಯತ್ನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹತ್ತು ವರ್ಷಗಳಿಂದ ರುದ್ರ ಪಟ್ಟಣಕ್ಕೆ ಅನೇಕ ಸಂಗೀತ ವಿದ್ವಾಂಸರನ್ನು ಕರೆಸಿ ಸಂಗೀತೋತ್ಸವ ಏರ್ಪಡಿಸಲಾಗುತ್ತಿದೆ ಎಂದು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಹೆಮ್ಮೆಯಿಂದ ಹೇಳುತ್ತಾರೆ.

ಯುವ ಪ್ರತಿಭೆಗೆ ಅವಕಾಶ: ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿಯ ಸಂಗೀತ ಕಾರ್ಯಕ್ರಮದಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿದೆ. ಈ ಸದಾವಕಾಶವನ್ನು ಬಳಸಿಕೊಂಡು ವಿದ್ವಾನ್ ವಿಶ್ವಜಿತ್ ಮತ್ತೂರು, ಅಕ್ಷತಾ ರುದ್ರಪಟ್ಟಣ, ಸುಮನಾ ವೇದಾಂತ್, ಸಂಗೀತಾ ತಾರಾನಾಥನ್ ಸುಬ್ರ ಹ್ಮಣ್ಯ, ಮೈಸೂರು ಎಸ್. ದೀಪಕ್ ಅವರು ಒಂದು ದಿನದ ಸಂಗೀತ ಕಛೇರಿ ನಡೆಸಿ ಯುವ ಪ್ರೌಢಿಮೆ ಪ್ರದರ್ಶಿಸಿದ್ದಾರೆ.

ಜನಮನ ರಂಜಿಸಿದ ಸಂಗೀತ: ರುದ್ರಪಟ್ಟಣದವರೇ ಆದ ವಿದ್ವಾನ್ ಡಾ. ಆರ್.ಎನ್. ಶ್ರೀಲತ, ವಿದ್ವಾನ್ ಬಿ.ಎನ್.ಎಸ್. ಮುರುಳಿ, ವಿದ್ವಾನ್ ಆರ್.ಕೆ. ಪ್ರಕಾಶ್, ವಿದ್ವಾನ್ ಉಮಾ ಕುಮಾರ್, ವಿದ್ವಾನ್ ರೇಣುಕಾ ರುದ್ರಪಟ್ಟಣ, ವಿದ್ವಾನ್ ಡಾ. ಸಿ.ಎ. ಶ್ರೀಧರ್, ಡಾ. ಹಂಸಿನೀ ನಾಗೇಂದ್ರ, ವಿದ್ವಾನ್ ಸಿ.ಎನ್. ಚಂದ್ರಶೇಖರ್, ಸಿ.ಎನ್. ತ್ಯಾಗರಾಜನ್ ಹಾಗೂ ರುದ್ರಪಟ್ಟಣ ಸಹೋದರರಾದ ವಿದ್ವಾನ್ ಆರ್.ಎನ್. ತ್ಯಾಗರಾಜನ್, ಡಾ. ಆರ್.ಎನ್. ತಾರಾನಾಥನ್ ತಂಡದವರು ಸ್ವಗ್ರಾಮಕ್ಕೆ ಆಗಮಿಸಿ ತಮ್ಮ ಸುಮಧುರ ಕಂಠದಿಂದ ಗಾನ ಸುಧೆ ಹರಿಸಿ ಜನಮನ ರಂಜಿಸಿದ್ದು, ನಂತರ ವೇದಿಕೆ ಮೇಲೆ ಸಂಗೀತ ದಿಗ್ಗಜರು ಒಬ್ಬರನೊಬ್ಬರು ಪರಿಚಯಿಸಿಕೊಳ್ಳುವ ಸನ್ನಿವೇಶ, ಸಂತಸದ ಕ್ಷಣ ಎಲ್ಲವೂ ಅಪರೂಪವಾಗಿ ಗೋಚರಿಸಿತು.

ವಿಶೇಷ ಗೌರವ ಸಮರ್ಪಣೆ: ಮಾ. 6ರ ಭಾನುವಾರ ಬೆಳಿಗ್ಗೆ ಗಮಕ ಸೌರಭ ಕುರಿತು ಪದ್ಮಶ್ರೀ ಡಾ. ವಿದ್ವಾನ್ ಮತ್ತೂರು ಕೃಷ್ಣಮೂರ್ತಿ ವ್ಯಾಖಾನಿಸಲಿದ್ದು, ವಿದ್ವಾನ್ ಕೇಶವಮೂರ್ತಿ ವಾಚಿಸಲಿದ್ದಾರೆ. ಸಂಜೆ ಕಾವೇರಿ ನದಿ ದಡದಲ್ಲಿ ತ್ಯಾಗರಾಜ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಏರ್ಪಡಿಸಿದೆ. ಸಭಾ ಕಾರ್ಯಕ್ರಮದಲ್ಲಿ ಕಲಾ ಪೋಷಕರಾದ ಆರ್. ಸುಬ್ರಹ್ಮಣ್ಯ ರುದ್ರಪಟ್ಟಣ ಅವರಿಗೆ ನಾಚಾರಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಗ್ರಾಮದವರಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಆರ್.ಕೆ. ಶ್ರೀಕಂಠನ್ (ಆರ್.ಕೆ.ಎಸ್.) ಅವರಿಗೆ ವಿಶೇಷ ಗೌರವ ಸಮರ್ಪಣೆ ನಡೆಯಲಿದೆ.

ಸಂಗೀತೋತ್ಸವಕ್ಕೆ ತೆರೆ: ಭಾನುವಾರ ರಾತ್ರಿ ನವದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿದ್ವಾನ್ ಸತ್ಯನಾರಾಯಣ ರಾಜು ಮತ್ತು ವಿದ್ವಾನ್ ಸೀತಾ ಕೋಟೆ ಅವರು ನೀಡಲಿರುವ ‘ಶಿವೋಹಂ’ ಭರತನಾಟ್ಯ ಕಾರ್ಯಕ್ರಮದ ಮುಕ್ತಾಯದೊಂದಿಗೆ ಈ ಬಾರಿಯ ಸಂಗೀತೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.