ಶನಿವಾರ, ಮೇ 15, 2021
22 °C

ಕಾವೇರಿ: ತಮಿಳುನಾಡು ಬೇಡಿಕೆಗೆ ಸುಪ್ರೀಂ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾವೇರಿ ನದಿಯಿಂದ ಬೇಸಿಗೆ ಬೆಳೆಗೆ ಹೆಚ್ಚುವರಿ ನೀರು ಬಿಡುಗಡೆ ಮಾಡದಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ಮತ್ತೆ ನಿರಾಕರಿಸಿತು.

ನ್ಯಾ. ಡಿ.ಕೆ. ಜೈನ್ ಹಾಗೂ ನ್ಯಾ. ಎ.ಆರ್.ದವೆ ಅವರನ್ನು ಒಳಗೊಂಡ ನ್ಯಾಯಪೀಠ, ಈ ವಿಷಯವನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಲು ಶುಕ್ರವಾರ (ಏ.27) ಪುನಃ ಮನವಿ ಸಲ್ಲಿಸುವಂತೆ ತಮಿಳುನಾಡು ಪರ ವಕೀಲ ಸಿ.ಎಸ್. ವೈದ್ಯನಾಥನ್ ಅವರಿಗೆ ಸೂಚಿಸಿತು.

ತಮಿಳುನಾಡು ಸರ್ಕಾರ ಮಾರ್ಚ್ 23ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ, ಕಾವೇರಿ ನದಿಯ ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಅಣೆಕಟ್ಟೆಯಿಂದ ಬೇಸಿಗೆ ಬೆಳೆಗೆ ನೀರು ಬಳಕೆ ಮಾಡದಂತೆ ಕರ್ನಾಟಕವನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿದೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿ ಏ.13ರಂದು ವಿಚಾರಣೆಗೆ ಬಂದಾಗ ಏ.23ರಂದು ಮತ್ತೆ ಮನವಿ ಮಾಡಲು ನ್ಯಾಯಾಲಯ ಸೂಚಿಸಿತ್ತು. ಅದರಂತೆ ಇಂದು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿತ್ತು.

ಕರ್ನಾಟಕ ಈಗಾಗಲೇ ಅಣೆಕಟ್ಟೆಯಿಂದ 29 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬೇಸಿಗೆ ಬೆಳೆಗೆ ಬಿಡುಗಡೆ ಮಾಡಿದೆ. ಇದೇ ರೀತಿ ನೀರು ಬಿಡುಗಡೆ ಮಾಡಿದರೆ ತಮ್ಮ ಜಲಾಶಯಗಳಿಗೆ ಬಿಡುಗಡೆ ಮಾಡಲು ನೀರೇ ಇಲ್ಲದಂತಾಗುತ್ತದೆ ಎಂದು ತಮಿಳುನಾಡು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ, ಮತ್ತೊಂದೆಡೆ ಕರ್ನಾಟಕ ಕಾವೇರಿ ನ್ಯಾಯಮಂಡಳಿ ಅಂತಿಮ ಆದೇಶದಂತೆ 192 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಇದು ಬಿಳಿಗುಂಡ್ಲು ಮಾಪಕ ಕೇಂದ್ರದಲ್ಲಿ ದಾಖಲಾಗಿದೆ ಎಂದು ಪ್ರತಿಪಾದಿಸಿದೆ.

ತಮಿಳುನಾಡಿಗೆ ಸಾಮಾನ್ಯ ವರ್ಷದಲ್ಲಿ 192 ಟಿಎಂಸಿ ಬಿಡುಗಡೆ ಮಾಡಿದ ಬಳಿಕ ಉಳಿದ ನೀರು ಬಳಕೆ ಮಾಡಲು ರಾಜ್ಯಕ್ಕೆ ಯಾವುದೇ ಅಭ್ಯಂತರವಿಲ್ಲ. ನೀರಾವರಿ ಪ್ರದೇಶ ಅಥವಾ ಬೆಳೆಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವೂ ಇಲ್ಲ ಎಂದು ಕರ್ನಾಟಕ ಹೇಳಿದೆ.

ಅಲ್ಲದೆ, ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಕುರಿತು ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ನಿರ್ದೇಶಿಸುವಂತೆ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಕೋರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.