ಭಾನುವಾರ, ಮೇ 9, 2021
25 °C

ಕಾವೇರಿ: ತಿದ್ದುಪಡಿಗೆ ನಕಾರ, ಜೆಡಿಎಸ್ ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿನ `ಕಾವೇರಿ ಐತೀರ್ಪಿನ ಅನುಸಾರ...' ಎನ್ನುವ ವಾಕ್ಯ ತಿದ್ದುಪಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ ಕಾರಣ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.`ಭಾಷಣದಲ್ಲಿ ಈ ವಾಕ್ಯ ಇರುವುದರಿಂದ ರಾಜ್ಯದ ಹಿತಕ್ಕೆ ಧಕ್ಕೆ ಇಲ್ಲ ಎಂದು ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಹೇಳಿದ್ದಾರೆ. ಹೀಗಾಗಿ ತಿದ್ದುಪಡಿ ಅನಗತ್ಯ' ಎಂದು ಸಿದ್ದರಾಮಯ್ಯ ಹೇಳಿದರು.ಇದನ್ನು ಜೆಡಿಎಸ್ ಸದಸ್ಯರು ವಿರೋಧಿಸಿದರು. ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, `ಕಾವೇರಿ ವಿಷಯ ಅತ್ಯಂತ ಸೂಕ್ಷ್ಮದ್ದು. ಪ್ರತಿಷ್ಠೆ ಸಲುವಾಗಿ ತಿದ್ದುಪಡಿಗೆ ನಿರಾಕರಿಸಬೇಡಿ. ಇದೇ ವಾಕ್ಯ ಮುಂದಿನ ದಿನಗಳಲ್ಲಿ ಬರುವ ತೀರ್ಪಿಗೆ ಮಾರಕವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ತಿದ್ದುಪಡಿಗೆ ಒಪ್ಪಬೇಕು' ಎಂದು ಆಗ್ರಹಪಡಿಸಿದರು.ಸಿದ್ದರಾಮಯ್ಯ ಮಾತನಾಡಿ, `ಕಾವೇರಿ ವಿಷಯದಲ್ಲಿ ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗದಂತೆ ಸರ್ಕಾರ ಎಚ್ಚರವಹಿಸಲಿದೆ. ಕಾನೂನು ಹೋರಾಟದಲ್ಲೂ ಹಿಂದೆ ಬೀಳುವುದಿಲ್ಲ' ಎಂದರು.ಜೆಡಿಎಸ್ ಸದಸ್ಯರು ಎಷ್ಟೇ ಪಟ್ಟುಹಿಡಿದು ವಾಕ್ಯ ತಿದ್ದುಪಡಿಗೆ ಆಗ್ರಹಿಡಿಸಿದರೂ ಸಿದ್ದರಾಮಯ್ಯ ಅದನ್ನು ಒಪ್ಪಲಿಲ್ಲ. ಕೊನೆಗೆ ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲ ಸದಸ್ಯರೂ ಸಭಾತ್ಯಾಗ ಮಾಡಿದರು. `ಕಾವೇರಿ ವಿಷಯದಲ್ಲಿ ಜೆಡಿಎಸ್‌ನವರು ರಾಜಕಾರಣ ಮಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ದೂರಿದರು.ಹೊಸ ತಾಲ್ಲೂಕು ರಚನೆಗೆ ನಿರಾಕರಿಸಿದ ಸಿದ್ದರಾಮಯ್ಯ ಅವರ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಅಕ್ರಮ ಗಣಿಗಾರಿಕೆ, ಕೆಐಎಡಿಬಿ ಭೂಹಗರಣ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಯಡಿಯೂರಪ್ಪ ಕೂಡ ಸಭಾತ್ಯಾಗ ನಡೆಸಿದರು.ಕನಿಷ್ಠ 60 ದಿನ ಅಧಿವೇಶನ: ವಿಧಾನಮಂಡಲ ಅಧಿವೇಶವನ್ನು ವರ್ಷಕ್ಕೆ ಕನಿಷ್ಠ 60 ದಿನ ನಡೆಸುವ ಉದ್ದೇಶ ಇದೆ ಎಂದುಸಿದ್ದರಾಮಯ್ಯ ಹೇಳಿದರು.ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇವಲ 30ರಿಂದ 32 ದಿನ ಅಧಿವೇಶನ ನಡೆದ ನಿದರ್ಶನಗಳು ಇವೆ. ಇದು ಸರಿಯಲ್ಲ ಎನ್ನುವ ಕಾರಣಕ್ಕೆ 60 ದಿನ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದರು.ಶಾಲಾ ಮಕ್ಕಳಿಗೆ ಹಾಲು: ಅಂಗನವಾಡಿ  ಮತ್ತು ಶಾಲಾ ಮಕ್ಕಳಿಗೆ ಹಾಲು ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಸದ್ಯದಲ್ಲೇ ತೀರ್ಮಾನಕ್ಕೆ ಬರಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.ಜೆಡಿಎಸ್‌ನ ಎಚ್.ಡಿ.ರೇವಣ್ಣ ವಿಷಯ ಪ್ರಸ್ತಾಪಿಸಿ, ಪ್ರತಿ ಲೀಟರ್ ಹಾಲಿಗೆ ನಾಲ್ಕು ರೂಪಾಯಿ ಪ್ರೋತ್ಸಾಹಧನ ಘೋಷಿಸಿದ ನಂತರ ಹಾಲಿನ ಸಂಗ್ರಹ ಜಾಸ್ತಿಯಾಗಿದೆ. ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ ಹಾಲು ಒಕ್ಕೂಟಗಳು ನಷ್ಟಕ್ಕೆ ಒಳಗಾಗಿವೆ' ಎಂದು  ಗಮನ ಸೆಳೆದರು.`ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಹಾಲು ಕೊಡುವ ಬಗ್ಗೆ ಸದ್ಯದಲ್ಲೇ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.