ಕಾವೇರಿ ತೀರ್ಪು ಮತ್ತು ಅಧಿಸೂಚನೆಯ ಪರಿಣಾಮ

7

ಕಾವೇರಿ ತೀರ್ಪು ಮತ್ತು ಅಧಿಸೂಚನೆಯ ಪರಿಣಾಮ

Published:
Updated:

 


ಕಾವೇರಿ ಜಲವಿವಾದದ ಬಗ್ಗೆ ನ್ಯಾಯಮಂಡಳಿಯು, 2007ರ ಫೆಬ್ರುವರಿ 5ರಂದು ತನ್ನ ಅಂತಿಮ ತೀರ್ಪು ನೀಡಿರುವುದನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಬೇಕಾಗಿದೆ.ಈ ಅಧಿಸೂಚನೆಯು ಗೆಜೆಟ್‌ನಲ್ಲಿ ಪ್ರಕಟವಾದ ಕೂಡಲೇ ನ್ಯಾಯಮಂಡಳಿಯ ತೀರ್ಪು ಸುಪ್ರೀಂ ಕೋರ್ಟಿನ ಆದೇಶವಿದ್ದಂತೆ ಜಾರಿಗೊಳ್ಳುತ್ತದೆ. ನ್ಯಾಯಮಂಡಳಿಯ ಶಿಫಾರಸ್ಸಿನಂತೆ ತನ್ನ ಆದೇಶವನ್ನು ಜಾರಿಗೊಳಿಸಲು ಕಾವೇರಿ ಕಾರ್ಯನಿರ್ವಹಣಾ ಮಂಡಳಿ ರಚಿಸಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರವು ನೇಮಿಸುವ ಒಬ್ಬ ಪೂರ್ಣಾವಧಿ   (3ರಿಂದ 5ವರ್ಷಗಳ      ವರೆಗೆ) ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರಿರುತ್ತಾರೆ. ಸಂಬಂಧಿಸಿದ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಅರೆಕಾಲಿಕ ಸದಸ್ಯರಾಗಿರುತ್ತಾರೆ. 

 

ಕರ್ನಾಟಕ ರಾಜ್ಯವು ನ್ಯಾಯಮಂಡಳಿಯ ಮುಂದೆ 27.28ಲಕ್ಷ ಎಕರೆ ನೀರಾವರಿ ಮತ್ತು ಬೆಂಗಳೂರೂ ಸೇರಿದಂತೆ ಎಲ್ಲಾ ಪಟ್ಟಣ ಪ್ರದೇಶಗಳ ಕುಡಿಯುವ ನೀರು, ವಿದ್ಯುತ್ ಮುಂತಾದವುಗಳಿಗೆ ಒಟ್ಟು 465 ಟಿ.ಎಂ.ಸಿ ನೀರಿನ ಬೇಡಿಕೆ ಮಂಡಿಸಿತ್ತು. ಆದರೆ ನ್ಯಾಯಮಂಡಳಿಯು ಈ ಎಲ್ಲಾ ಉದ್ದೇಶಕ್ಕಾಗಿ 270 ಟಿ.ಎಂ.ಸಿ ಮಾತ್ರ ಹಂಚಿಕೆ ಮಾಡಿದೆ. ಇದರ ಜೊತೆಗೆ ಪ್ರತಿ ವರ್ಷ ಜೂನ್ ತಿಂಗಳಿನಿಂದ ಏಪ್ರಿಲ್ ವರೆಗೆ 192 ಟಿ.ಎಂ.ಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಿದೆ. ಇಷ್ಟು ಪ್ರಮಾಣದ ನೀರನ್ನು ಪ್ರತಿ ತಿಂಗಳು ವಾರದಲ್ಲಿ ನಿಗದಿತ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಸೂಚಿಸಿರುತ್ತದೆ. 

 

ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನಂತೆ ಈ ನೀರಿನ ಹರಿವನ್ನು ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರ ಜಲ ಆಯೋಗದ ಸಹಯೋಗದೊಂದಿಗೆ ನಿಯಂತ್ರಣ ಪ್ರಾಧಿಕಾರದ ಉಸ್ತುವಾರಿಯಲ್ಲಿ ಮಾಡಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ಕರ್ನಾಟಕದ ಜಲಾಶಯಗಳ ಹೊರಹರಿವಿನ ಪ್ರಮಾಣವನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧೀನಕ್ಕೊಳಪಟ್ಟ ನಿಯಂತ್ರಣ ಮಂಡಳಿಯು ಮಾಡುತ್ತದೆ. ಈಗ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ಕಾವೇರಿ ನದಿ ಪ್ರಾಧಿಕಾರ ಮತ್ತು ಕಾವೇರಿ ಉಸ್ತುವಾರಿ ಸಮಿತಿ, ಅಂತಿಮ ಆದೇಶದ ಅಧಿಸೂಚನೆಯ ಪ್ರಕಟಣೆಯ ನಂತರ ಇರುವುದಿಲ್ಲ.

 

ಈ ಅಂತಿಮ ಆದೇಶವು ತಮಿಳುನಾಡಿಗೆ ಹೆಚ್ಚು ಅನುಕೂಲಕರವಾಗಿದ್ದು, ಕರ್ನಾಟಕ ರಾಜ್ಯಕ್ಕೆ ಅಷ್ಟಾಗಿ ಅನುಕೂಲಕರವಾಗಿರುವುದಿಲ್ಲ. ರಾಜ್ಯದ ಜಲಾಶಯಗಳು ಭರ್ತಿಯಾಗದೇ ರೈತರು ಮತ್ತು ನಾಗರಿಕರು ಸಂಕಷ್ಟ ಅನುಭವಿಸುವ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಾವೇರಿ ಕಾರ್ಯನಿರ್ವಹಣಾ ಮಂಡಳಿಯು ನಿರ್ದಿಷ್ಟಪಡಿಸಿದ ಪ್ರಮಾಣದಲ್ಲಿ ನೀರು ಬಿಡುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ಎರಡು ರಾಜ್ಯಗಳ ನೀರಿನ ಕನಿಷ್ಠ ಅಗತ್ಯತೆಯನ್ನು ಪೂರೈಸಲು ಸೂಕ್ತ ವಿಧಿ ವಿಧಾನಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ.

 

ನ್ಯಾಯಮಂಡಳಿಯ ಅಂತಿಮ ತೀರ್ಪಿನಿಂದ ರಾಜ್ಯದ ರೈತರು ಮತ್ತು ನಾಗರಿಕರಿಗೆ ಉಂಟಾಗುವ ಪರಿಣಾಮಗಳಲ್ಲಿ  ಪ್ರಮುಖವಾದವು ಇವು:       

*  ಕರ್ನಾಟಕದ ಈಗಿರುವ ನೀರಾವರಿ ಮತ್ತು ಅರೆ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಕೇವಲ ಒಂದು ಬೆಳೆ ಬೆಳೆಯಲು ಮಾತ್ರ ಸಾಧ್ಯವಾಗಬಹುದು. 

 

*  ಅಪೂರ್ಣಗೊಂಡ ಮತ್ತು ಪ್ರಗತಿಯಲ್ಲಿರುವ ಯೋಜನೆಗಳ ಅಚ್ಚುಕಟ್ಟು ಪ್ರದೇಶಕ್ಕೆ ಅಗತ್ಯ ಪ್ರಮಾಣದ ನೀರನ್ನು ಒದಗಿಸಲು ಸಾಧ್ಯವಿಲ್ಲ.

 

* ಸುಮಾರು 110 ಏತ ನೀರಾವರಿ ಯೋಜನೆಗಳಿಗೆ ಈಗಾಗಲೇ ಸುಮಾರು 150ರಿಂದ 200 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದ್ದು, ಇವುಗಳಿಗೆ ನೀರನ್ನು ಒದಗಿಸದಿದ್ದಲ್ಲಿ     ನಿಷ್ಪ್ರಯೋಜಕವಾಗುತ್ತವೆ.

 

* ಈಗಿರುವ ನದಿ ಅಣೆಕಟ್ಟು ಹಾಗೂ ಕೆಲವು ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ  ಮುಂದೆ ಕಬ್ಬು ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ.

 

* ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಅನಿವಾರ್ಯವಾಗಿ ತಮಿಳುನಾಡಿಗೆ ನೀರನ್ನು ಕೊಡಲೇಬೇಕಾಗಿ ಬರುವುದರಿಂದ  ನಮ್ಮ ಬೆಳೆಗಳಿಗೆ ನೀರು ಸಿಗದೆ ಬೆಳೆ ಒಣಗುವ ಪರಿಸ್ಥಿತಿ ಉದ್ಭವಿಸಬಹುದು.

 

* ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ.

 

* ಈಗಿರುವ ನೀರಾವರಿ ಪ್ರದೇಶಗಳಿಗೆ  ನೀರಿನ ಹಂಚಿಕೆ ಪ್ರಮಾಣವನ್ನು ನಿಗದಿಗೊಳಿಸಿರುವುದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಒದಗಿಸಲು ಸಾಧ್ಯವಾಗುವುದಿಲ್ಲ.

 

* ಈಗಿರುವ ಪರಿಸ್ಥಿತಿಯಲ್ಲಿ ನಾಲೆಯ ಕೊನೆಯ ಹಂತಕ್ಕೆ ಕೆಲವು ಕಾಲುವೆಗಳ ನೀರು ಮುಟ್ಟುತ್ತಿಲ್ಲ. ಈ ಪ್ರದೇಶಗಳು ಒಣ ಭೂಮಿಗಳಾಗುತ್ತವೆ. 

 

* ನೀರಿನ ಹಂಚಿಕೆ ಪ್ರಮಾಣದ ಕೊರತೆಯಿಂದಾಗಿ ಕೆರೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸುವುದು ಕಷ್ಟವಾಗುತ್ತದೆ.

 

* ಕೆರೆಗಳು ಬತ್ತಿ ಹೋಗುವ ಸಂಭವ ಇರುವುದರಿಂದ ಅಂತರ್ಜಲದ ಪ್ರಮಾಣ ಕಡಿಮೆಯಾಗುತ್ತದೆ.

 

* ಕಾವೇರಿ ಪ್ರದೇಶದ ಅಚ್ಚುಕಟ್ಟು ಜಮೀನುಗಳಲ್ಲಿ ಬೆಳೆಯುತ್ತಿರುವ ಕಬ್ಬು ಬೆಳೆ ನಿಲ್ಲುವುದರಿಂದ ಈ ಪ್ರದೇಶಗಳಲ್ಲಿರುವ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಬೇಕಾಗುತ್ತದೆ.

 

* ಈ ಪ್ರದೇಶದ ಸಾವಿರಾರು ಕಬ್ಬಿನ ಗಾಣಗಳು ಕಬ್ಬಿನ ಸರಬರಾಜು ಇಲ್ಲದೆ ನಿಷ್ಪ್ರಯೋಜಕವಾಗುತ್ತವೆ.

 

* ಸಕ್ಕರೆ ಕಾರ್ಖಾನೆ, ಕಬ್ಬಿನ ಗಾಣ ಇತರೆ ಕೃಷಿ ಆಧಾರಿತ ಕಾರ್ಖಾನೆಗಳ ಲಕ್ಷಾಂತರ ಕೆಲಸಗಾರರು ಉದ್ಯೋಗ ಇಲ್ಲದೇ ಸಂಕಷ್ಟಕ್ಕೊಳಗಾಗುತ್ತಾರೆ.

 

* ಒಟ್ಟಾರೆ ಆರ್ಥಿಕ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗುವ ಸಂಭವವಿದ್ದು ರಾಜ್ಯದ ಜನರು ಅತೀವ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಉದ್ಭವಿಸುತ್ತದೆ. ಈ ಕಾರಣದಿಂದ ರಾಜ್ಯ ಸರ್ಕಾರವು ಸೇರಿದಂತೆ ಎಲ್ಲಾ ರಾಜ್ಯಗಳು ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಿಶೇಷ ಅರ್ಜಿಯನ್ನು ದಾಖಲಿಸಿವೆ. ಈ ಎಲ್ಲಾ ರಾಜ್ಯಗಳ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುತ್ತವೆ. ಆದುದರಿಂದ, ಈ ಅರ್ಜಿಗಳು ಇತ್ಯರ್ಥವಾಗುವ ಮುನ್ನ ಕೇಂದ್ರ ಸರ್ಕಾರವು ಅಂತಿಮ ಅಧಿಸೂಚನೆಯನ್ನು ಹೊರಡಿಸಿದಲ್ಲಿ ಆಗಬಹುದಾದ ಕೆಲವು ಪರಿಣಾಮ ಹಾಗೂ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.

 

* ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ತಮಿಳುನಾಡಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ನೀರು ಹರಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವುದಿಲ್ಲ.

 

* ಈಗ ಸಾಮಾನ್ಯ ವರ್ಷಗಳಲ್ಲಿ ಉತ್ತಮ ಮಳೆಯಾದ ಸಂದರ್ಭಗಳಲ್ಲಿ ಕರ್ನಾಟಕ ಜಲಾಶಯಗಳಿಂದ ನ್ಯಾಯಮಂಡಳಿ ನಿಗದಿಪಡಿಸುವುದಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿಯುತ್ತಿದೆ. ಆದರೆ ಮಳೆಯ ಅಭಾವದಿಂದ ರಾಜ್ಯ ಜಲಾಶಯಗಳು ಭರ್ತಿಯಾಗದೇ ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಮತ್ತು ಕುಡಿಯುವ ನೀರಿಗೆ ತೊಂದರೆ ಆಗುವ ಸಂಕಷ್ಟದ ಸಂದರ್ಭದಲ್ಲಿ ಎರಡೂ ರಾಜ್ಯಗಳು ಒಪ್ಪುವಂತಹ ಸಂಕಷ್ಟ ಸೂತ್ರವನ್ನು ರೂಪಿಸಿರುವುದಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟಲ್ಲಿ ಕರ್ನಾಟಕದ ರೈತರಿಗೆ ಮತ್ತು ನಾಗರೀಕರಿಗೆ ತೊಂದರೆ ಉಂಟಾಗುತ್ತದೆ.

 

* ರಾಜ್ಯದ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಬೆಳೆ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. 

 

* ಉತ್ತಮ ಮಳೆಯಾದ ಸಂದರ್ಭದಲ್ಲಿ ತಮಿಳುನಾಡಿಗೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ನೀರು ಹರಿಯುವ ಸಂದರ್ಭದಲ್ಲಿ ಕರ್ನಾಟಕದ ಮೇಕೆದಾಟು ಸ್ಥಳಕ್ಕಿಂತ ಮುಂಚಿತವಾಗಿ ಒಂದು ಸಮತೋಲನ ಜಲಾಶಯವನ್ನು (ಬ್ಯಾಲೆನ್ಸಿಂಗ್ ರಿಸರ್ವಾಯರ್) ಕಟ್ಟಿ ಈ ಹೆಚ್ಚುವರಿ ನೀರನ್ನು ಕರ್ನಾಟಕದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಉಪಯೋಗ ಮಾಡಿಕೊಳ್ಳಬಹುದಾದ ಅವಕಾಶವಿರುತ್ತದೆ. ಈ ವಿಚಾರವನ್ನು ಸಹಾ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನ್ಯಾಯಮಂಡಳಿಯ ಮುಂದೆ ಪ್ರಸ್ತಾಪಿಸಿ ಜಾರಿಗೊಳಿಸಬಹುದು.

 

* ತಮಿಳುನಾಡು ರಾಜ್ಯದಲ್ಲಿ ದೊರೆಯಬಹುದಾದ ಕಾವೇರಿ ನದಿ ಮುಖಜ ಭೂಮಿಯ ಪ್ರದೇಶದಲ್ಲಿ ಒದಗುವ ಸುಮಾರು 88 ಟಿ.ಎಂ.ಸಿ ಹಾಗೂ ತಮಿಳುನಾಡು ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಒದಗಿಸಬಹುದಾದ ಸುಮಾರು 150 ಟಿ.ಎಂ.ಸಿಯಷ್ಟು ಅಂತರ್ಜಲ  ನೀರನ್ನು ನ್ಯಾಯಮಂಡಳಿಯು ಪರಿಗಣಿಸದೇ ಇರುವುದರಿಂದ ತಮಿಳುನಾಡಿಗೆ ಈ ಹೆಚ್ಚುವರಿ ನೀರು ಲಭ್ಯವಾದಂತಾಗುತ್ತದೆ.ಆದುದರಿಂದ ಕಾವೇರಿ ನ್ಯಾಯಮಂಡಳಿಯ ಮುಂದೆ ರಾಜ್ಯ ಸರ್ಕಾರವು ಸಲ್ಲಿಸುವ ಪುನರ್ ಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಮತ್ತು ನ್ಯಾಯಮಂಡಳಿಯ ಮುಂದೆ ರಾಜ್ಯ ಸರ್ಕಾರವು ಪರಿಣಾಮಕಾರಿಯಾಗಿ ಕೇಳಿಕೊಳ್ಳಬಹುದು.

 

ಮುಖ್ಯವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಇಚ್ಛಾಶಕ್ತಿಯ ಆಧಾರದ ಮೇಲೆ ಮುಂದೆ ಸರ್ವಸಮ್ಮತವಾದ ರೀತಿಯಲ್ಲಿ ಎರಡೂ ರಾಜ್ಯಗಳು ಪರಸ್ಪರ ಚರ್ಚೆ ಮತ್ತು ಒಪ್ಪಂದದ ಮೂಲಕ ವಿಚಾರವನ್ನು ಬಗೆಹರಿಸಿಕೊಂಡಲ್ಲಿ ಎರಡೂ ರಾಜ್ಯಗಳ ರೈತರ ಮತ್ತು ನಾಗರಿಕರ ಹಿತಾಸಕ್ತಿಯನ್ನು ಕಾಪಾಡಿದಂತಾಗುತ್ತದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry