ಕಾವೇರಿ: ನಗರದಲ್ಲಿ ಬುಸುಗುಟ್ಟಿದ ನಾಗರಾಜ್

7

ಕಾವೇರಿ: ನಗರದಲ್ಲಿ ಬುಸುಗುಟ್ಟಿದ ನಾಗರಾಜ್

Published:
Updated:

ದಾವಣಗೆರೆ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟಿರುವುದನ್ನು ಖಂಡಿಸಿ ಅ. 6ರಂದು

ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್  ಹೇಳಿದರು.ನಗರದಲ್ಲಿ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಯಬಿಟ್ಟಿರುವುದರ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ನಾಗರಾಜ್ `ಬುಸುಗುಟ್ಟಿದ್ದು~ ಹೀಗಿದೆ.ನಾನೇನಾದರೂ ಸನ್ನಿವೇಶದಲ್ಲಿ ಮಂತ್ರಿ ಆಗಿದ್ದರೆ ಸದನದಲ್ಲಿ ಇವರೆಲ್ಲರ ..... ಬಿಚ್ಚುತ್ತಿದ್ದೆ. ಆದರೆ, ನಾನು ಮಂತ್ರಿ ಅಲ್ಲ. ನನಗೆ ಮಂತ್ರಿಗಿರಿ ಅಂದ್ರೆ ಕನ್ನಡ. ಹೋರಾಟ ಅಂದರೆ ಮುಖ್ಯಮಂತ್ರಿ. ಹಾಗಾಗಿ ನಾನು ಹೋರಾಟದಲ್ಲೇ ಇರಲು ಬಯಸುತ್ತೇನೆ. ಕೆಲವು ಶಾಸಕರು ರಾಜೀನಾಮೆ ಕೊಡ್ತೀವಿ ಅಂತ ನಾಟಕ ಆಡ್ತಿದ್ದಾರೆ. ರಾಜೀನಾಮೆಯನ್ನು ವಿಧಾನಸಭಾ ಅಧ್ಯಕ್ಷರಿಗೆ ಕೊಡಬೇಕು. ಮನೆ ಹೆಂಗಸರ ಕೈಲಿ ಕೊಟ್ರೆ ಆಗಲ್ಲಾರಿ...ಸಿಎಂ ಜಗದೀಶ್ ಶೆಟ್ಟರ್ ಅವರು ನೀರು ಬಿಡೋದಿಲ್ಲ ಎಂದು ಹೇಳಿ ಈಗ ಬಿಟ್ಟಿದ್ದಾರೆ. ಅಧಿಕಾರ ಹೋದರೂ ಪರ್ವಾಗಿಲ್ಲ ಎಂದು ನೀರು ಬಿಡದಿರುವ ಗಟ್ಟಿ ನಿರ್ಧಾರಕ್ಕೆ ಬರುತ್ತಿದ್ದರೆ ಅವರ ಹೆಸರು ಶಾಶ್ವತವಾಗಿರುತ್ತಿತ್ತು ಎಂದು ತೀವ್ರ ವಾಗ್ದಾಳಿ ನಡೆಸಿದರು. ವಾಗ್ದಾಳಿ ಕೇಂದ್ರದ ಸಚಿವರ ಮೇಲೂ ಹರಿಯಿತು. ಸರ್ವ ಪಕ್ಷ ಸಭೆ ಹೆಸರಿನಲ್ಲಿ ಎಲ್ಲರನ್ನು ಒಳಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಈ ನಿಟ್ಟಿನಲ್ಲಿ ಬಂದ್ ಸಂಬಂಧ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಂಡಿರುವುದಾಗಿ ತಿಳಿಸಿದರು.ಕನ್ನಡ ಸೇನೆಯ ಅಧ್ಯಕ್ಷ ಕೆ. ಆರ್. ಕುಮಾರ್ ಮಾತನಾಡಿ, ರಾಜ್ಯದ 450ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು.

ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿದರು.

ಜಯದೇವ ವೃತ್ತದಿಂದ ಗಾಂಧಿವೃತ್ತದವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಕಾರರು ಗಾಂಧಿವೃತ್ತದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಾಗೇಂದ್ರ ಬಂಡೀಕರ್, ಕೆ.ಜಿ. ಶಿವಕುಮಾರ್, ಎ. ನಾಗರಾಜ್, ಕನ್ನಡ ಸಮರ ಸೇನೆ ರಾಜ್ಯ ಘಟಕದ ಅಧ್ಯಕ್ಷ ಅತ್ತಿಗೆರೆ ಮಂಜುನಾಥ್, ಪಿ. ರಾಜ್‌ಕುಮಾರ್, ವಿಶ್ವನಾಥ್, ಶಿವಯೋಗಿಸ್ವಾಮಿ, ಪ್ರಕಾಶ್, ಸೈಯದ್ ಸೈಫುಲ್ಲಾ ಇದ್ದರು.ಕರವೇ ಮೌನ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಬಿಟ್ಟಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಇಲ್ಲಿನ ವಿದ್ಯಾನಗರದ ಗಾಂಧಿ ಪ್ರತಿಮೆ ಬಳಿ ಮಂಗಳವಾರ ರಸ್ತೆತಡೆ ಮಾಡಿ ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಧರಣಿ ನಡೆಸಿದರು.ಗಾಂಧಿ ಜಯಂತಿಯ ಸಲುವಾಗಿ ಅಲ್ಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಅರ್ಧಗಂಟೆ ಕಾಲ ಮೌನಾಚರಣೆ ನಡೆಸಿದರು.ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಗೌರವಾಧ್ಯಕ್ಷ ಬಿ.ಪಿ. ನಾಗಾಚಾರ್, ಚಿದಂಬರ ಶೆಟ್ಟಿ, ಮಂಜುನಾಥ ಪವಾರ್, ತಿಪ್ಪಾರೆಡ್ಡಿ, ಮಂಜುನಾಥಯ್ಯ, ಜಿ. ಲಿಂಗರಾಜ್, ಧನ್ಯಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry