ಭಾನುವಾರ, ಡಿಸೆಂಬರ್ 8, 2019
25 °C
ಮಂಡ್ಯ ಜಿಲ್ಲೆಯಲ್ಲಿ ಸತತ ಮೂರನೇ ವರ್ಷವೂ ಕಡಿಮೆ ಬಿತ್ತನೆ

ಕಾವೇರಿ ನಾಡಲ್ಲಿ ಬರದ ಛಾಯೆ

ಪ್ರಜಾವಾಣಿ ವಾರ್ತೆ / ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಕಾವೇರಿ ನಾಡಲ್ಲಿ ಬರದ ಛಾಯೆ

ಮಂಡ್ಯ: ಜಿಲ್ಲೆಗೆ ನೀರಾವರಿ ಒದಗಿಸುವ ಎರಡೂ ಜಲಾಶಯಗಳು ಭರ್ತಿ­ಯಾಗಿವೆ. ಆದರೆ, ನಾಲೆಯ ನೀರು ಕೊನೆ ಭಾಗಕ್ಕೆ ತಲುಪದೆ ಇರುವು­ದರಿಂದ ಬಿತ್ತನೆ ಮಾಡದಿ­ರುವುದು ಒಂದೆಡೆಯಾದರೆ, ಮಳೆಯ ಕೊರತೆ­ಯಿಂದಾಗಿ ಬಿತ್ತನೆಯಾಗ­ದಿರುವುದು ಇನ್ನೊಂದೆಡೆ.   ಹೀಗಾಗಿ ಮೂರನೇ ವರ್ಷವೂ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿಕೊಂಡಿದೆ.ಕೆಆರ್‌ಎಸ್ ಜಲಾಶಯದಿಂದ ಬಿಟ್ಟ ಲಕ್ಷಾಂತರ ಕ್ಯೂಸೆಕ್ ನೀರು ತಮಿಳುನಾಡಿನ ಮೆಟ್ಟೂರು ಜಲಾಶಯ ತಲುಪಿದೆ. ಆದರೆ, ಜಿಲ್ಲೆಯಲ್ಲಿಯೇ ಇರುವ ಕೊನೆ ಭಾಗದ ನಾಲೆ ಹಾಗೂ ಕೆರೆಗಳಿಗೆ ಇಂದಿಗೂ ನೀರು ತಲುಪಿಲ್ಲ. ಜುಲೈ 9ರಂದು ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸಲಾಗಿದೆ. 15 ದಿನಗಳಲ್ಲಿ ನಾಲೆಯ ಕೊನೆಭಾಗಕ್ಕೆ ನೀರು ತಲುಪಬೇಕಿತ್ತು. ಅಧಿಕಾರಿಗಳ ಉದಾಸೀನ, ಮೇಲ್ಭಾಗದ ರೈತರ ನೀರಿನ ಹೆಚ್ಚು ಬಳಕೆಯಿಂದಾಗಿ ಎರಡು ತಿಂಗಳು ಕಳೆದರೂ, ಕೊನೆಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗಿಲ್ಲ.ಕೆರೆಗೋಡು ಶಾಖೆ ಕೊನೆ ಭಾಗಕ್ಕೆ ತಲುಪಿದೆ. ಕೌಡ್ಲೆ, ಮದ್ದೂರು ಶಾಖಾ ನಾಲೆಗಳ ಕೊನೆ ಭಾಗಕ್ಕೆ ಇನ್ನಷ್ಟೇ ತಲುಪಬೇಕಿದೆ. ನಾಗಮಂಗಲ ಹಾಗೂ ಮಂಡ್ಯ ತಾಲ್ಲೂಕಿನ ಬಸರಾಳು ಭಾಗದಲ್ಲಿ ಹರಿಯುವ ಹೇಮಾವತಿ ನಾಲೆಯ ಕೊನೆಭಾಗಕ್ಕೂ ನೀರು ಬಂದಿಲ್ಲ.ಭರ್ತಿಯಾಗದ ಕೆರೆಗಳು:

ಮಂಡ್ಯದ ವಿ.ಸಿ. ವಿಭಾಗದಲ್ಲಿ ನಾಲೆಗೆ ಹೊಂದಿಕೊಂಡಂತೆ 119 ಕೆರೆಗಳು ಬರುತ್ತವೆ. ಅವುಗಳಲ್ಲಿ ಸುಮಾರು 50 ಕೆರೆಗಳು ಮಾತ್ರ ಪೂರ್ಣ ಭರ್ತಿಯಾಗಿವೆ. ಸೋರಿಕೆ ನೀರು ಬಂದಿದ್ದರಿಂದ  ಕೆಲವು ಕೆರೆಗಳಲ್ಲಿ ಶೇ 10ರಿಂದ 25ರಷ್ಟು ನೀರು ತುಂಬಿಕೊಂಡಿದೆ. ಕೆಲ ಕೆರೆಗಳಿಗೆ ಇಂದಿಗೂ ನೀರು ತಲುಪಿಲ್ಲ.ಕೆರೆಗಳು ಭರ್ತಿಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದು ಹೋಗಿದೆ. ಮಳೆಗಾಲದಲ್ಲಿಯೂ ಜಿಲ್ಲೆಯ ಆರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎನ್ನುವುದು ಸಮಸ್ಯೆ ಎಷ್ಟು ತೀವ್ರವಾಗಿದೆ ಎನ್ನುವುದರ ದ್ಯೋತಕ. ಎಂಟು ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ನೀರು ಇರಲಿಲ್ಲ. ಹೀಗಾಗಿ, ಭೂಮಿ ಬಹಳಷ್ಟು ನೀರು ಹೀರಿಕೊಳ್ಳುತ್ತಿದೆ.   ಪೊಲೀಸ್ ಬಂದೋ­ಬಸ್ತ್‌ನಲ್ಲಿ ನೀರು ತಲುಪಿಸುವ ಕೆಲಸ ನಡೆದಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ.ಪಾಂಡವಪುರ, ಶ್ರೀರಂಗಪಟ್ಟಣ ತಾಲ್ಲೂಕುಗಳಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಆದರೆ, ನೀರಾವರಿ ಹೆಚ್ಚಿರುವುದರಿಂದ ತೊಂದರೆ ಎನಿಸುತ್ತಿಲ್ಲ. ಮಂಡ್ಯ, ಮಳವಳ್ಳಿ, ಕೆ.ಆರ್‌. ಪೇಟೆ ಹಾಗೂ ನಾಗಮಂಗಲ ತಾಲ್ಲೂಕುಗಳಲ್ಲಿ ಮಳೆ ವಾಡಿಕೆಯಷ್ಟು ಆಗಿದ್ದರೂ, ಒಣ ಪ್ರದೇಶವಿರು­ವುದರಿಂದ ಬರದ ಛಾಯೆ ಆವರಿಸಿಕೊಂಡಿದೆ.

ಈಗಷ್ಟೇ ಬಿತ್ತನೆ ಆರಂಭ

ಪ್ರತಿ ವರ್ಷ ಜುಲೈ ಹೊತ್ತಿಗೆ ರಾಗಿ ಹಾಕುತ್ತಿದ್ದೆವು. ಈ ಬಾರಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈಗಷ್ಟೇ ಬಿತ್ತನೆ ಆರಂಭಿಸಿದ್ದೇವೆ. ವಿಳಂಬವಾಗಿ­ರುವುದರಿಂದ ಇಳುವರಿಯ ಮೇಲೆಯೂ ಪರಿಣಾಮ ಆಗಲಿದೆ.

–ಎಚ್.ಕೆ. ಕೃಷ್ಣ, ಬಸರಾಳು, ಮಂಡ್ಯ ತಾಲ್ಲೂಕು.

ಮೂರು ವರ್ಷಗಳಿಂದ ಬರ

ಮೂರು ವರ್ಷಗಳಿಂದ ಬರ ಇದೆ. ಈ ವರ್ಷ ₨ 1.5 ಲಕ್ಷ   ಖರ್ಚು ಮಾಡಿ 600 ಅಡಿ ಕೊಳವೆಬಾವಿ ಕೊರೆಯಿಸಿದ್ದೇನೆ. ಎರಡು ಇಂಚು ನೀರು ಬಿದ್ದಿದೆ. ಮುಂದಿನ ದಿನಗಳಲ್ಲಿ ಅದೂ ಬತ್ತಿ ಹೋಗುವ ಸಾಧ್ಯತೆ ಇದೆ.

–ಜಗದೀಶ್, ಅಂಚೆಚಟ್ನಹಳ್ಳಿ, ಕೆ.ಆರ್. ಪೇಟೆ ತಾಲ್ಲೂಕು.ಮಂಡ್ಯ ಜಿಲ್ಲೆಯ ವಿವಿಧ ಬೆಳೆಗಳ ಬಿತ್ತನೆ ವಿವರ (ಹೆಕ್ಟೇರ್‌ಗಳಲ್ಲಿ) ಸೆ. 2ಕ್ಕೆ ಅಂತ್ಯಗೊಂಡಂತೆ


ಬೆಳೆ ಗುರಿ ಸಾಧನೆ

ಭತ್ತ 64,450 37,843

ರಾಗಿ 70,600 38,950

ಮುಸುಕಿನ ಜೋಳ 5,700 5,500

ತೊಗರಿ 1,400 1,116

ಹುರುಳಿ 10,850 60

ಉದ್ದು 450 511

ಎಳ್ಳು 4,600 8,695

ಕಬ್ಬು 30,550 16,755

ಒಟ್ಟು 2,05,800 1,25,740.

ಮಳೆ ವಿವರ (ಸೆ. 2ಕ್ಕೆ ಕೊನೆಗೊಂಡಂತೆ ಮಿ.ಮೀ.ಗಳಲ್ಲಿ)

ತಾಲ್ಲೂಕು ವಾಡಿಕೆ ವಾಸ್ತವ

ಮಂಡ್ಯ 305 318

ಕೆ.ಆರ್‌. ಪೇಟೆ 370 351

ಮದ್ದೂರು 340 357

ಮಳವಳ್ಳಿ 376 453

ಪಾಂಡವಪುರ 328 249

ನಾಗಮಂಗಲ 290 315

ಶ್ರೀರಂಗಪಟ್ಟಣ 354 31.

ಪ್ರತಿಕ್ರಿಯಿಸಿ (+)