ಕಾವೇರಿ ನಾಲ್ಕನೇ ಹಂತದ ಯೋಜನೆ ಶೀಘ್ರ ಆರಂಭ

ಸೋಮವಾರ, ಮೇ 27, 2019
24 °C

ಕಾವೇರಿ ನಾಲ್ಕನೇ ಹಂತದ ಯೋಜನೆ ಶೀಘ್ರ ಆರಂಭ

Published:
Updated:

ಬೆಂಗಳೂರು: ಕಾವೇರಿ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ರಾಜಧಾನಿ ಬೆಂಗಳೂರಿನ ಜನರಿಗೆ ಸಂತಸದ ಸುದ್ದಿ. ಪ್ರತಿನಿತ್ಯ 500 ದಶಲಕ್ಷ ಲೀಟರ್ ನೀರು ಪೂರೈಸುವ ಕಾವೇರಿ ನಾಲ್ಕನೇ ಹಂತದ 2ನೇ ಘಟ್ಟದ ಯೋಜನೆ ಇದೇ 25ರಿಂದ ಕಾರ್ಯ ಆರಂಭಿಸಲಿದೆ. ಮಾರ್ಚ್‌ನಲ್ಲೇ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ, ಐದು ತಿಂಗಳು ತಡವಾಗಿ ಪೂರ್ಣಗೊಂಡು ನೀರುಣಿಸಲು ಅಣಿಯಾಗಿದೆ.`ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ಆರು ನಗರಸಭೆ, ಒಂದು ಪುರಸಭೆ ಹಾಗೂ 54ರಿಂದ 56 ವಾರ್ಡ್‌ಗಳಿಗೆ 2ನೇ ಘಟ್ಟದಿಂದ ಹೆಚ್ಚುವರಿಯಾಗಿ ದೊರೆಯಲಿರುವ ನೀರು ಪೂರೈಕೆಯಾಗಲಿದೆ~ ಎಂದು ಬೆಂಗಳೂರು ಜಲಮಂಡಳಿ ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು. ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಸಂಬಂಧ ಪ್ಲಂಬರ್‌ಗಳ ಜೊತೆ ಸಭೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.ನಗರಕ್ಕೆ ಈಗ 900 ದಶಲಕ್ಷ ಲೀಟರ್ ಕಾವೇರಿ ನೀರು ಪ್ರತಿನಿತ್ಯ ಸರಬರಾಜು ಆಗುತ್ತಿದೆ. ಈ ನೀರನ್ನು ನಗರದ ಪ್ರಮುಖ ಪ್ರದೇಶಗಳಿಗೆ (ಕೋರ್ ಏರಿಯಾ) ಪೂರೈಸಲಾಗುತ್ತಿದೆ. ಹೆಚ್ಚುವರಿಯಾಗಿ ದೊರೆಯಲಿರುವ 500 ದಶಲಕ್ಷ ಲೀಟರ್ ನೀರನ್ನು ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಬ್ಯಾಟರಾಯನಪುರ, ಕೆ.ಆರ್.ಪುರ, ಮಹದೇವಪುರ, ಬೊಮ್ಮನಹಳ್ಳಿ (ಇವೆಲ್ಲವೂ ಈ ಹಿಂದೆ ನಗರಸಭೆಗಳಾಗಿದ್ದವು) ಹಾಗೂ ಕೆಂಗೇರಿ (ಇದು ಹಿಂದೆ ಪುರಸಭೆಯಾಗಿತ್ತು) ಭಾಗಕ್ಕೆ ನೀಡಲಾಗುವುದು ಎಂದು ಹೇಳಿದರು.ನೀರು ಸರಬರಾಜಿಗೆ ಈ ಭಾಗಗಳಲ್ಲಿ ಜಲಮಂಡಳಿ ವತಿಯಿಂದ ಪೈಪುಗಳನ್ನು ಅಳವಡಿಸಲಾಗಿದೆ. ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದೆ. ಇದನ್ನು ಅಭಿಯಾನದ ರೀತಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. `ನೀರಿನ ಸಂಪರ್ಕ ಮೇಳ~ ಎಂಬ ಕಾರ್ಯಕ್ರಮದ ಅಡಿ, ಸೆಪ್ಟೆಂಬರ್ ಅಂತ್ಯದೊಳಗೆ ಎರಡು ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.ಪ್ಲಂಬರ್‌ಗಳ ಸಭೆ: ಭಾರಿ ದೊಡ್ಡ ಪ್ರಮಾಣದಲ್ಲಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕಾಗಿರುವುದರಿಂದ ಪ್ಲಂಬರ್‌ಗಳ ಅಗತ್ಯ ಹೆಚ್ಚಾಗಿದೆ. ಸುಮಾರು 700 ಪ್ಲಂಬರ್‌ಗಳ ಜತೆ ಮಾತುಕತೆ ನಡೆಸಿದ್ದು, ಒಂದೂವರೆ ತಿಂಗಳಲ್ಲಿ ಎಲ್ಲ ಮನೆಗಳಿಗೂ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.`ಸಾರ್ವಜನಿಕರಿಗೆ ಪ್ಲಂಬರ್‌ಗಳಿಂದ ಆಗಬಹುದಾದ ಸುಲಿಗೆ ತಪ್ಪಿಸುವುದಕ್ಕೂ ಜಲಮಂಡಳಿ ಕ್ರಮ ತೆಗೆದುಕೊಂಡಿದೆ. ಪ್ಲಂಬರ್‌ಗಳು ಕಾಮಗಾರಿ ಆರಂಭಕ್ಕೂ ಮುನ್ನವೇ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಕರಪತ್ರ ಹಂಚಿ, ನೀರಿನ ಸಂಪರ್ಕಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ತಿಳಿಸಬೇಕು. ಅದರ ಅನ್ವಯವೇ ಸಾರ್ವಜನಿಕರಿಂದ ಹಣ ಸಂಗ್ರಹಿಸಬೇಕು. ಪ್ಲಂಬರ್‌ಗಳಿಗೆ ಜಲಮಂಡಳಿಯಿಂದ ಗುರುತಿನ ಚೀಟಿ ನೀಡಲಾಗುವುದು~ ಎಂದು ಸುರೇಶ್ ಕುಮಾರ್ ವಿವರಿಸಿದರು. ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಪ್ರತ್ಯೇಕ ನಿಯಮಗಳಿವೆ ಎಂದು ಉತ್ತರಿಸಿದರು.ಸೋರಿಕೆ ಪತ್ತೆಗೆ ಕ್ರಮ: ನಗರಕ್ಕೆ ಸರಬರಾಜು ಆಗುತ್ತಿರುವ ನೀರಿನ ಪೈಕಿ ಶೇ 30ರಿಂದ 40ರಷ್ಟು ಲೆಕ್ಕಕ್ಕೇ ಸಿಗುತ್ತಿಲ್ಲ. ಇದರಲ್ಲಿ ಸರಬರಾಜಿನ ವೇಳೆ ಸೋರಿಕೆ ಆಗುವುದು, ಸಾರ್ವಜನಿಕ ಕೊಳವೆಗಳ ಮೂಲಕ ಸರಬರಾಜು ಮಾಡುತ್ತಿರುವುದೂ ಸೇರಿದೆ. ಸೋರಿಕೆಯನ್ನು ಶೇ 20ಕ್ಕೆ ಇಳಿಸಿದರೂ, ಬೆಂಗಳೂರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಇದು ಮತ್ತೊಂದು ಹಂತದ ಕಾವೇರಿ ಯೋಜನೆಯನ್ನು ಅನುಷ್ಠಾನ ಮಾಡಿದಷ್ಟೇ ಅನುಕೂಲ ಒದಗಿಸುತ್ತದೆ. ಹೆಚ್ಚಿನ ಪ್ರದೇಶಗಳಿಗೆ ನೀರು ಕೂಡ ನೀಡಬಹುದು ಎಂದು ವಿವರಿಸಿದರು.ನೀರು ಸೋರಿಕೆ ಪತ್ತೆ ಮತ್ತು ಅದನ್ನು ಸರಿಪಡಿಸುವ ವಿಧಾನಗಳ ಬಗ್ಗೆ ಎಲ್ ಆಂಡ್ ಟಿ ಸಂಸ್ಥೆ ಪ್ರಯತ್ನ ನಡೆಸುತ್ತಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ದಾಖಲೆ ಕಡ್ಡಾಯ

ಕಾವೇರಿ ನೀರಿನ ಸಂಪರ್ಕ ಪಡೆಯಲು ಇಚ್ಛಿಸುವ ಮನೆ ಮಾಲೀಕರ ಬಳಿ ತಮ್ಮ ಮನೆಯ ದಾಖಲೆಗಳಿರಬೇಕು. ಅವು ಇಲ್ಲದಿದ್ದರೆ ಪಡಿತರ ಚೀಟಿ, ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ, ಬೆಸ್ಕಾಂನ ವಿದ್ಯುತ್ ಬಿಲ್ ಅಥವಾ `ಅಫಿಡವಿಟ್~ ಹೊಂದಿರಬೇಕು. ಈ ದಾಖಲೆ ಇರುವವರ ಮನೆಗಳಿಗೆ ಮಾತ್ರ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ.

 

ಪ್ರತಿ ಸಂಪರ್ಕಕ್ಕೆ ರೂ 2,400 ಕಟ್ಟಬೇಕು

ಬೆಂಗಳೂರು: ಪ್ರತಿ ಮನೆಯ ನೀರಿನ ಸಂಪರ್ಕಕ್ಕೆ ಗ್ರಾಹಕರು 2,400 ರೂಪಾಯಿ ಸಂದಾಯ ಮಾಡಬೇಕು. ಇದರಲ್ಲಿ ನೀರಿನ ಮೀಟರ್ ಶುಲ್ಕ ಸೇರಿದಂತೆ ಇತರ ವೆಚ್ಚಗಳು ಸೇರಿವೆ.ಜಲಮಂಡಲಿಯ ಮುಖ್ಯ ಪೈಪ್‌ನಿಂದ ತಮ್ಮ ಮನೆಗಳಿಗೆ ಸಣ್ಣ ಗಾತ್ರದ ನೀರಿನ ಪೈಪು ಹಾಕಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ಮನೆ ಮಾಲೀಕರೇ ಭರಿಸಬೇಕು. ಮನೆ ಮಾಲೀಕರಿಗೆ ರಸ್ತೆ ಅಗೆಯುವ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

 

`110 ಹಳ್ಳಿಗಳಿಗೆ ಕಾವೇರಿ ನೀರಿಲ್ಲ~

ಬೆಂಗಳೂರು: `ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನಾಲ್ಕನೇ ಹಂತದ 2ನೇ ಘಟ್ಟದ ಯೋಜನೆಯಡಿ ನೀರು ಪೂರೈಸಲು ಸಾಧ್ಯವಿಲ್ಲ. ಈ ಹಳ್ಳಿಗಳಿಗೆ ನೀರು ಒದಗಿಸಲು ಪರ್ಯಾಯ ಜಲಮೂಲಗಳ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದರು.`ಜಪಾನ್‌ನ ಜೈಕಾ ಸಂಸ್ಥೆ ಈ ಸಂಬಂಧ ಅಧ್ಯಯನ ನಡೆಸುತ್ತಿದೆ. ಜಲಮೂಲಗಳು ಪತ್ತೆಯಾದ ಬಳಿಕ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗುವುದು~ ಎಂದು ವಿವರಿಸಿದರು.ಈಗಿರುವ ನೀರು ಸರಬರಾಜು ವ್ಯವಸ್ಥೆಯೇ ಈ ಹಳ್ಳಿಗಳಲ್ಲಿ ಮುಂದುವರಿಯಲಿದೆ. ಮೂಲಗಳ ಪ್ರಕಾರ ವರ್ಷಕ್ಕೆ 15 ಟಿಎಂಸಿ ಅಡಿ ನೀರು ನಗರಕ್ಕೆ ಪ್ರಸ್ತುತ ಸರಬರಾಜಾಗುತ್ತಿದೆ. ಹೆಚ್ಚುವರಿಯಾಗಿ 10 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಈ ಪ್ರಮಾಣದ ನೀರು ಒದಗಿಸುವಂತೆ ಜಲಸಂಪನ್ಮೂಲ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.`ನೀರು ನಿರ್ವಹಣೆ ಒಂದು ದೊಡ್ಡ ಸವಾಲಾಗಿದೆ. ಆ ಬಗ್ಗೆ ಎಲ್ಲರೂ ಗಮನ ನೀಡಬೇಕಾಗಿದೆ. ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಆಗುತ್ತಿದ್ದು, ಅದನ್ನು ತಪ್ಪಿಸುವ ಕೆಲಸ ಆಗಬೇಕು. ಕೃಷಿಗೆ ಅನ್ಯಾಯ ಆಗದಂತೆ ಹೆಚ್ಚುವರಿ ನೀರನ್ನು ಕುಡಿಯುವುದಕ್ಕೂ ಬಳಸುವ ಅಗತ್ಯ ಇದೆ~ ಎಂದು ಅವರು ಪ್ರತಿಪಾದಿಸಿದರು.`ಅರ್ಕಾವತಿ, ಕುಮುದ್ವತಿ ನದಿಗಳ ಪುನರುಜ್ಜೀವನ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಭಾಗದಲ್ಲಿ ಆಗಿರುವ ಒತ್ತುವರಿ ತೆರವಿನಿಂದ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬಹುದು. ತಿಪ್ಪಗೊಂಡನಹಳ್ಳಿಯಲ್ಲಿ ಈ ನದಿಗಳ ನೀರು ಶೇಖರಣೆಯಾದರೆ ಬೆಂಗಳೂರಿನ ಕೆಲವು ಭಾಗಗಳಿಗೆ ಸುಲಭವಾಗಿ ನೀರು ಸರಬರಾಜು ಮಾಡಬಹುದು. ಈ ಕಾರಣಕ್ಕೆ ನದಿ ಪುನಶ್ಚೇತನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry