ಕಾವೇರಿ ನಿರ್ವಹಣಾ ಸಮಿತಿ ಅಗತ್ಯವಿಲ್ಲ
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಈಗಾಗಲೇ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ `ಮೇಲುಸ್ತುವಾರಿ ಸಮಿತಿ ರಚಿಸಿರುವುದರಿಂದ `ನಿರ್ವಹಣಾ ಸಮಿತಿ' ರಚಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಪ್ರತಿಪಾದಿಸಿದೆ.
ಕಾವೇರಿ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕರ್ನಾಟಕ ತಮಿಳುನಾಡಿನ ಬೇಡಿಕೆಯನ್ನು ತಿರಸ್ಕರಿಸುವಂತೆ ಮನವಿ ಮಾಡಿದೆ.
ಕಾವೇರಿ ನದಿ ನೀರು ಹಂಚಿಕೆಗೆ ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮೇ 10ರಂದು ಇತ್ಯರ್ಥ ಪಡಿಸಿದೆ. ಕಾವೇರಿ ಉಸ್ತುವಾರಿ ಸಮಿತಿ ತನ್ನ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಬಳಿಕ ತಮಿಳುನಾಡು ಸುಪ್ರೀಂಕೋರ್ಟ್ ಮುಂದೆ ಈ ಅರ್ಜಿ ಸಲ್ಲಿಸಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಿದೆ.
ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿ 5ರಂದು ನೀಡಿರುವ ಅಂತಿಮ ತೀರ್ಪಿನಲ್ಲಿ ನದಿ ನೀರು ಹಂಚಿಕೆಗೆ ನಿರ್ವಹಣಾ ಮಂಡಳಿ ಮತ್ತು ನಿಯಂತ್ರಣ ಸಮಿತಿ ರಚಿಸುವಂತೆ ಶಿಫಾರಸು ಮಾಡಿದೆ.
ಕೇಂದ್ರ ಸರ್ಕಾರ ಕಳೆದ ಫೆಬ್ರುವರಿ 19ರಂದು ನ್ಯಾಯಮಂಡಳಿ ತೀರ್ಪಿನ ಅಧಿಸೂಚನೆ ಹೊರಡಿಸಿದೆ. ತಮಿಳುನಾಡು ಈ ಹಿಂದೆ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಮಾಡಿದ್ದ ಮನವಿಯನ್ನೇ ಈಗ ಸಲ್ಲಿಸಿರುವ ಅರ್ಜಿಯಲ್ಲೂ ಪ್ರಸ್ತಾಪಿಸಿದೆ. ಇದು ನ್ಯಾಯವಿತರಣಾ ನೀತಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ವಾದಿಸಿದೆ.
ಕರ್ನಾಟಕದಿಂದ ಜೂನ್ ತಿಂಗಳ ಕೋಟಾ 10 ಟಿಎಂಸಿ ಅಡಿ ನೀರು ಬಿಡುಗಡೆಗೆ ತಮಿಳುನಾಡು ಮನವಿ ಮಾಡಿದೆ. ಆದರೆ, ಈಗಾಗಲೇ ಕಾವೇರಿ ಜಲಾಶಯದಿಂದ 11.64 ಟಿಎಂಸಿ ಅಡಿ ನೀರು ಬಿಡುಗಡೆ ಆಗಿದೆ ಎಂದು ಕರ್ನಾಟಕ ಪ್ರಮಾಣ ಪತ್ರದಲ್ಲಿ ವಿವರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.