ಶುಕ್ರವಾರ, ನವೆಂಬರ್ 15, 2019
22 °C

`ಕಾವೇರಿ ನೀರು ಪೂರೈಕೆಗೆ ಯತ್ನ'

Published:
Updated:

ಕೃಷ್ಣರಾಜಪುರ: `ಕ್ಷೇತ್ರ ವ್ಯಾಪ್ತಿಯಲ್ಲಿರುವ ಬಡಾವಣೆಗಳಿಗೆ ಜಲಮಂಡಳಿ ಕಾವೇರಿ ನೀರು ಪೂರೈಕೆಗೆ ಭಗೀರಥ ಪ್ರಯತ್ನ ನಡೆಸಿದೆ. ಸದ್ಯ ಶೇಕಡಾ 70ರಷ್ಟು ಬಡಾವಣೆಗಳಿಗೆ ನೀರು ಪೂರೈಕೆಯಾಗುತ್ತಿದೆ. 2004ರಲ್ಲಿ ಅಳವಡಿಸಿರುವ ಪೈಪುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅವನ್ನು ದುರಸ್ತಿಗೊಳಿಸಿ ಇತರ ಬಡಾವಣೆಗಳಿಗೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್ ಆಶ್ವಾಸನೆ ನೀಡಿದರು.ಹಿರಿಯರ ವೇದಿಕೆ ಕಾರ್ಯಾಧ್ಯಕ್ಷ ಎಂ.ರಾಮರಾವ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸಮಿತಿ ಸದಸ್ಯರು, ವಾರ್ಡ್ ವ್ಯಾಪ್ತಿಯ ಬಡಾವಣೆಗಳಿಗೆ ಸಮರ್ಪಕ ನೀರು ಪೂರೈಕೆಗೆ ಮನವಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, `ಕ್ಷೇತ್ರ ವ್ಯಾಪ್ತಿಯಲ್ಲಿ ಜಲಮಂಡಳಿ ವತಿಯಿಂದ 747 ಕೊಳವೆ ಬಾವಿಗಳಿವೆ. ಅವುಗಳ ಪೈಕಿ 50- 60 ಬಾವಿಗಳಲ್ಲಿ ಮಾತ್ರ ನೀರು ಪೂರೈಕೆಯಾಗುತ್ತಿದೆ.  ತುರ್ತು ಸಂದರ್ಭಗಳಲ್ಲಿ ಉಚಿತ ಟ್ಯಾಂಕರ್ ನೀರು ಪೂರೈಕೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು' ಎಂದು ಹೇಳಿದರು.ಪೋಲು ತಡೆಗೆ ಕ್ರಮ: `ಸಮಸ್ಯೆ ಪರಿಹರಿಸುವಲ್ಲಿ ನಾಗರಿಕರ ಸಹಕಾರ ಅಗತ್ಯ. ನೀರಿನ ಮಿತವ್ಯಯ ಬಳಕೆ ಮತ್ತು ನೀರು ಪೋಲು ತಡೆಗೆ ಜನರು ಎಲ್ಲರಿಕೆ ವಹಿಸಬೇಕು. ಪ್ರತಿಯೊಂದು ಮನೆಗಳಿಗೂ ಮೀಟರ್ ಮತ್ತು ಪ್ಲಗ್ ಅಳವಡಿಕೆಯಾದರೆ ಇತರೆ ಬಡಾವಣೆಗಳಿಗೂ ನೀರು ಪೂರೈಕೆ ಮಾಡಬಹುದು' ಎಂದು ಅವರು ನುಡಿದರು.

ಪ್ರತಿಕ್ರಿಯಿಸಿ (+)