ಕಾವೇರಿ ನೀರು ಸ್ಥಗಿತ

7

ಕಾವೇರಿ ನೀರು ಸ್ಥಗಿತ

Published:
Updated:
ಕಾವೇರಿ ನೀರು ಸ್ಥಗಿತ

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುವುದನ್ನು ಸೋಮವಾರ ರಾತ್ರಿ 7.30ಕ್ಕೆ ಸ್ಥಗಿತಗೊಳಿಸಲಾಗಿದೆ.ಮುಖ್ಯ ಎಂಜಿನಿಯರ್ ಸೂಚನೆ ಮೇರೆಗೆ ಅಣೆಕಟ್ಟೆಯ ಗೇಟುಗಳ ಮೂಲಕ ನದಿಗೆ ಹರಿಸುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗಾಗಿ ಮಾತ್ರ 5,100 ಕ್ಯೂಸೆಕ್ ನೀರನ್ನು ನಾಲೆಗೆ ಬಿಡಲಾಗುತ್ತಿದೆ ಎಂದು ಹೇಳಿದರು.ಸೋಮವಾರ ಸಂಜೆ ಕೆಆರ್‌ಎಸ್ ಅಣೆಕಟ್ಟೆಯ ಹೊರ ಹರಿವು 9,873 ಕ್ಯೂಸೆಕ್ ಇತ್ತು. ರಾತ್ರಿ ವೇಳೆಗೆ ಅದನ್ನು 300 ಕ್ಯೂಸೆಕ್‌ಗೆ ಇಳಿಸಲಾಗಿದೆ.ಸೆ.29 ರಂದು ಮಧ್ಯರಾತ್ರಿ ನೀರು ಬಿಡಲು ಆರಂಭಿಸಿದಾಗ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 110.80 ಅಡಿ ನೀರಿತ್ತು. ಅ. 8 ರಂದು ನೀರು ಹರಿಸುವುದನ್ನು ನಿಲ್ಲಿಸುವ ಹೊತ್ತಿಗೆ 104.92 ಅಡಿಗೆ ಇಳಿದಿತ್ತು. ಹೇಮಾವತಿ ಜಲಾಶಯದಿಂದಲೂ ಕೆಆರ್‌ಎಸ್ ಅಣೆಕಟ್ಟೆಗೆ ನೀರು ಬಿಡಲಾಗಿತ್ತು. ಇದಲ್ಲದೇ ಕಬಿನಿ ಜಲಾಶಯದಿಂದ ನೇರವಾಗಿ ತಮಿಳುನಾಡಿಗೆ ನೀರು ಹರಿಸಿದ್ದನ್ನು ನೆನಪಿಸಿಕೊಳ್ಳಬಹುದು.ಪ್ರತಿಭಟನೆ ನಿಲ್ಲದು: ಕೊನೆಗೂ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿರುವುದು ಒಳ್ಳೆಯದು. ಮುಂದಿನ ದಿನಗಳಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಬೇಕಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ತಿಳಿಸಿದ್ದಾರೆ.ಹೋರಾಟ ಹೇಗಿರಬೇಕು ಎಂಬುದರ ಕುರಿತು ಅ.9 ರಂದು ಬೆಳಿಗ್ಗೆ ನಡೆಯುವ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗುವುದು. ರಾಜ್ಯ ಸರ್ಕಾರ ಈಗ ತೆಗೆದುಕೊಂಡಿರುವ ನಿಲುವಿನಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಆಗ್ರಹಿಸಿದರು.

ಪ್ರಧಾನಿ ನಕಾರ

ನವದೆಹಲಿ: `ಕರ್ನಾಟಕದಿಂದ 9 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನದಿ ಪ್ರಾಧಿಕಾರ            (ಸಿಆರ್‌ಎ) ದ ನಿರ್ದೇಶನವನ್ನು ತಕ್ಷಣಕ್ಕೆ ಪುನರ್ ಪರಿಶೀಲಿಸಲು ಸಾಧ್ಯವಿಲ್ಲ~ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಖಚಿತಪಡಿಸಿದ್ದಾರೆ.`ಸಿಆರ್‌ಎ~ ಅಧ್ಯಕ್ಷರೂ ಆಗಿರುವ ಪ್ರಧಾನಿ, ವಿವಾದವನ್ನು ರಾಜಕೀಯ ಲಾಭ- ನಷ್ಟಗಳ ಹಿನ್ನೆಲೆಯಲ್ಲಿ ನೋಡದೆ ಕಾನೂನಿನ ಚೌಕಟ್ಟಿನೊಳಗೇ ಪರಿಹಾರ ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸೋಮವಾರ ಸ್ಪಷ್ಟವಾಗಿ ಹೇಳಿದ್ದಾರೆ.ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಅನಂತ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಸಂಸತ್  ಸದಸ್ಯರು ಹಾಗೂ ರಾಜ್ಯದ ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಪ್ರತ್ಯೇಕವಾಗಿ ಸಿಂಗ್ ಅವರನ್ನು ಭೇಟಿ ಮಾಡಿ ನಿರ್ದೇಶನ ಪುನರ್ ಪರಿಶೀಲಿಸುವಂತೆ ಕೋರಿದರು.`ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕರೆದಿದ್ದ ಸಿಆರ್‌ಎ ಸಭೆಯಲ್ಲಿ ನೀರು ಬಿಡುಗಡೆ ನಿರ್ದೇಶನ ನೀಡಲಾಗಿದೆ. ಅ. 15ರವರೆಗೆ ಈ ನಿರ್ದೇಶನ ಜಾರಿಯಲ್ಲಿ ಇರುವುದರಿಂದ ತಕ್ಷಣಕ್ಕೆ ಪುನರ್‌ಪರಿಶೀಲನೆ ಸಾಧ್ಯವಿಲ್ಲ. ಅದೂ ಅಲ್ಲದೆ, ಸಂಬಂಧಪಟ್ಟ ರಾಜ್ಯಗಳ ಒಪ್ಪಿಗೆ ಇಲ್ಲದೆ ತಾವೊಬ್ಬರೆ ಸ್ವತಂತ್ರವಾಗಿ ನಿರ್ಧಾರ ಮಾಡಲಾಗದು. ಏನೇ ಬದಲಾವಣೆ ಮಾಡಬೇಕಾದರೂ ಮತ್ತೆ ಸಿಆರ್‌ಎ ಸೇರಬೇಕು~ ಎಂದು ಪ್ರಧಾನಿ ಸ್ಪಷ್ಟಪಡಿಸಿದರು ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.`ಅರೆ ನ್ಯಾಯಿಕ ಸಂಸ್ಥೆಯಾಗಿರುವ ಸಿಆರ್‌ಎ ಕಾನೂನು ಚೌಕಟ್ಟಿನೊಳಗೆ ಸಮಸ್ಯೆಗೆ ಪರಿಹಾರ ಸೂಚಿಸಿದೆ. ಸೆ.19ರ ಪ್ರಾಧಿಕಾರದ ಸಭೆ ಕರ್ನಾಟಕ ಮತ್ತು ತಮಿಳುನಾಡಿನ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಿರ್ದೇಶನ ನೀಡಿದೆ~ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.`ಕರ್ನಾಟಕದಲ್ಲಿ ಬರಗಾಲ ಬಂದಿದೆ. ಮಳೆ ಅಭಾವ ತಲೆದೋರಿದ್ದರಿಂದ ಜಲಾಶಯಗಳಲ್ಲಿ ನೀರಿನ ಕೊರತೆ ಆಗಿದೆ ಎಂಬುದು ನನ್ನ ಗಮನಕ್ಕೂ ಬಂದಿದೆ. ಆದರೆ, ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸಿಆರ್‌ಎ ನಡೆಸಲಾಗಿದೆ. ವಾಸ್ತವ ಸ್ಥಿತಿಗತಿ ಆಧಾರದ ಮೇಲೆ 9000 ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡಲಾಗಿದೆ. ಸೆ.10ರಂದು ಕರ್ನಾಟಕ, ಸುಪ್ರೀಂ ಕೋರ್ಟ್‌ನಲ್ಲಿ ಸೆ.12ರಿಂದ 20ರವರೆಗೆ 10000 ಕ್ಯೂಸೆಕ್ ನೀರು ಬಿಡುವುದಾಗಿ ಕೊಟ್ಟ ಲಿಖಿತ ಬದ್ಧತೆ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.ಕರ್ನಾಟಕ ಹಾಗೂ ತಮಿಳುನಾಡಿನ ವಾಸ್ತವ ಸ್ಥಿತಿಗತಿ ಅರಿಯಲು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಿ.ವಿ. ಸಿಂಗ್ ನೇತೃತ್ವದ ಪರಿಣತರ ತಂಡ ಕಳುಹಿಸಲಾಗಿದೆ. ಈ ತಂಡ ಒಂದೆರಡು ದಿನದಲ್ಲಿ ವರದಿ ನೀಡಲಿದೆ. ಇದೇ 11ರಂದು `ಕಾವೇರಿ ಉಸ್ತುವಾರಿ ಸಮಿತಿ~ (ಸಿಎಂಸಿ) ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ವಸ್ತುಸ್ಥಿತಿ ಪರಿಶೀಲಿಸಿ ಸಿಎಂಸಿ ಸೂಕ್ತ ಶಿಫಾರಸನ್ನು ಸಿಆರ್‌ಎಗೆ ಮಾಡಲಿದೆ. ಅನಂತರ ಸಿಆರ್‌ಎ ಸಭೆ ಕರೆಯುವ ಬಗ್ಗೆ ಚಿಂತಿಸಲಾಗುವುದೆಂದು ಪ್ರಧಾನಿ ತಿಳಿಸಿದ್ದಾರೆ.`ಕಾವೇರಿ ನದಿ ಪ್ರಾಧಿಕಾರದ ಸಭೆ ಕೋರಂ ಅಗತ್ಯವಿದೆ. ಕನಿಷ್ಠ ಏಳು ದಿನ ಮೊದಲು ಸಭೆ ಕರೆಯಬೇಕು. ಈ ಹಿನ್ನೆಲೆಯಲ್ಲಿ 15ರೊಳಗೆ ಸಿಆರ್‌ಎ ಸೇರುವುದು ಕಷ್ಟ. ಮೊದಲು ಸಿಎಂಸಿ ವರದಿ ಬರಲಿ. ಆಮೇಲೆ ನೋಡೋಣ~ ಎಂದು  ಪ್ರಧಾನಿ ಹೇಳಿದ್ದಾರೆ. ರಾಜ್ಯ ಮುಖಂಡರ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಲ್ ಹಾಜರಿದ್ದರು.ತಮಿಳುನಾಡಿನಲ್ಲಿ 13ಲಕ್ಷ ಹೆಕ್ಟೇರ್ ಸಾಂಬಾ ಬೆಳೆ ನಾಟಿ ಗುರಿ ತಲುಪಲಾಗಿದೆ. ಕರ್ನಾಟಕ ತಮಿಳುನಾಡಿಗೆ ನೀರು ಬಿಟ್ಟ ದಿನದಿಂದ ಇಲ್ಲಿಯವರೆಗೆ 1.21 ಲಕ್ಷ ಕ್ಯೂಸೆಕ್ ಹರಿದು ಹೋಗಿದೆ ಎಂದು ಬನ್ಸಲ್ ಅನಂತರ ಪತ್ರಕರ್ತರಿಗೆ ತಿಳಿಸಿದರು.ಬಿಜೆಪಿ ನಿಯೋಗದಲ್ಲಿ ಬಹುತೇಕ ಆ ಪಕ್ಷದ ಎಲ್ಲ ಸಂಸದರು ಇದ್ದರು. ಕಾಂಗ್ರೆಸ್ ನಿಯೋಗದಲ್ಲಿ ಟಿ.ಬಿ. ಜಯಚಂದ್ರ, ನಾಡಗೌಡ, ಡಿ.ಕೆ. ಶಿವಕುಮಾರ್, ವಿ. ಮುನಿಯಪ್ಪ, ಜಯಪ್ರಕಾಶ್ ಹೆಗ್ಡೆ ಮುಂತಾದವರಿದ್ದರು.ಎರಡು ದಿನಗಳಿಂದ ದೆಹಲಿಯಲ್ಲಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಮಂಗಳವಾರ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ಪುನಃ ಸಿಆರ್‌ಎ ಸಭೆ ಕರೆಯುವಂತೆ ಆಗ್ರಹಿಸಲು ಮನಮೋಹನ್‌ಸಿಂಗ್ ಅವರನ್ನು ಭೇಟಿ ಮಾಡಲಾಗುವುದು ಎಂದು ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry