ಕಾವೇರಿ: ನೇಗಿಲು ಹೊತ್ತು ಪ್ರತಿಭಟನೆ

7

ಕಾವೇರಿ: ನೇಗಿಲು ಹೊತ್ತು ಪ್ರತಿಭಟನೆ

Published:
Updated:
ಕಾವೇರಿ: ನೇಗಿಲು ಹೊತ್ತು ಪ್ರತಿಭಟನೆ

ಮಂಡ್ಯ: ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಅ. 16 ರಿಂದ 31ರೊಳಗೆ, ಬಿಳಿಗುಂಡ್ಲುವಿಗೆ 8.85 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಹೇಳಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನೇಗಿಲನ್ನು ಮೈಮೇಲೆ ಹೊತ್ತು ಉಳುಮೆ ಮಾಡುವ ಅಣುಕು ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.ಅಲ್ಲದೆ, ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ  ವಿದ್ಯಾರ್ಥಿಗಳು, ಕಾಲೇಜಿನಿಂದ ಧರಣಿ ಸ್ಥಳದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ಮುಖಂಡ ಜಫ್ರುಲ್ಲಾಖಾನ್ ನೇತೃತ್ವದಲ್ಲಿ ನೂರಾರು ಮುಸ್ಲಿಂಮರು ಜಾಥಾ ನಡೆಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಧರಣಿಯಲ್ಲಿ ಪಾಲ್ಗೊಂಡರು.ತಾಲ್ಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಎಚ್.ಕೋಡಿಹಳ್ಳಿ, ಚನ್ನೇಗೌಡನ ನಗರ ಹಾಗೂ ಫಾರ್ಮ್‌ನ ಗ್ರಾಮಸ್ಥರು, ದ್ವಿಚಕ್ರ ವಾಹನಗಳ ದುರಸ್ತಿಗಾರರ ಸಂಘ, ಮಂಡ್ಯ ನಗರ ಆಟೋ ಕನ್ಸಲ್‌ಟೆಂಟ್ ಮಾಲೀಕರ ಹಾಗೂ ಡೀಲರ್ಸ್‌ಗಳ ಸಂಘ, ಗ್ರಾಮೀಣ ಅಂಗವಿಕಲರ ಪುನರ್ವಸತಿ ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ಹಾಗೂ ದ್ವಿಚಕ್ರ ವಾಹನಗಳ ಮಾರಾಟಗಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.ಸರದಿ ಉಪವಾಸ: ಕಾವೇರಿ ವನ ಮುಂಭಾಗ ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಶುಕ್ರವಾರ ಶಂಭೂನಹಳ್ಳಿ ಕೃಷ್ಣ, ಚಾಮಲಾಪುರ ಯೋಗೇಶ್, ಹಳುವಾಡಿ ಕೃಷ್ಣ, ಬೋರೇಗೌಡ ಹುನಗನಹಳ್ಳಿ, ಬಿ.ದೊರೆಸ್ವಾಮಿ ಮತ್ತು ಸಿದ್ದರೂಢ ಸತೀಶ್‌ಗೌಡ ಪಾಲ್ಗೊಂಡಿದ್ದರು.ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿ 29ನೇ ದಿನಕ್ಕೂ ಮತ್ತು ಸರದಿ ಉಪವಾಸ ಸತ್ಯಾಗ್ರಹ 9ನೇ ದಿನವೂ ನಡೆಯಿತು.`ರೈತರು ಆತಂಕ ಪಡುವ ಅಗತ್ಯವಿಲ್ಲ~

ಮಂಡ್ಯ: ಕಾವೇರಿ ಉಸ್ತುವಾರಿ ಸಮಿತಿಯು ಸಲಹೆ ನೀಡಿರುವಂತೆ 8.85 ಟಿಎಂಸಿ ಅಡಿ ನೀರು ಬಿಡುವ ವಿಷಯದಲ್ಲಿ ರೈತರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ ಹೇಳಿದರು.ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಪ್ರತಿದಿನ ಬಿಳಿಗುಂಡ್ಲು ಮೂಲಕ 5 ಸಾವಿರ ಕ್ಯೂಸೆಕ್ ಹರಿದು ಹೋಗುತ್ತಿದೆ. ತಮಿಳುನಾಡಿನಲ್ಲಿ ಮಳೆ ಆರಂಭವಾಗಿರುವುದರಿಂದ ನಮ್ಮ ಜಲಾಶಯಗಳಿಂದ ನೀರು ಬಿಡುವ ಪ್ರಮೇಯ ಬರುವುದಿಲ್ಲ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರವು ಸಲ್ಲಿಸಿರುವ ಅರ್ಜಿಯಲ್ಲಿ ಅ.1 ರಿಂದ ಜ.31ರ ವರೆಗೆ 38 ಟಿಎಂಸಿ ಅಡಿ ನೀರನ್ನು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಹರಿದು ಹೋಗುವುದನ್ನು ಖಾತ್ರಿ ಪಡಿಸುವುದಾಗಿ ಹೇಳಿದೆ. ಸಮಿತಿ ಹೇಳಿದಂತೆ 24.5 ಟಿಎಂಸಿ ಅಡಿ ಮಳೆಯಿಂದಾಗಿ ಜಲಾಶಯಗಳ ಕೆಳಗಿನ ನೀರಿನಿಂದಲೇ ಹರಿದು ಹೋಗಲಿದೆ ಎಂದರು.ಪರಿಣಾಮ ಸಮಿತಿ ನೀಡಿರುವ ಸಲಹೆಯೂ ಕರ್ನಾಟಕದ ಪಾಲಿಗೆ ವರವಾಗಿದೆ. ಸಮಿತಿ ಕೇವಲ ಸಲಹೆಯನ್ನು ಮಾತ್ರ ನೀಡಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ತಮಿಳುನಾಡಿಗೂ ಇಲ್ಲ. ಈ ಕುರಿತು ಅಂತಿಮ ತೀರ್ಮಾನವನ್ನು ಪ್ರಾಧಿಕಾರವೇ ತೆಗೆದುಕೊಳ್ಳಬೇಕಿದೆ. ರಾಜ್ಯದ ವಾಸ್ತವ ಸ್ಥಿತಿಯ ಅರಿವಿರುವುದರಿಂದ ಪ್ರಧಾನಮಂತ್ರಿಗಳು ರಾಜ್ಯ ಹಿತ ಕಾಪಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಕಾವೇರಿ ಕಣಿವೆಯ ಯಾವುದೇ ಜಲಾಶಯದಿಂದಲೂ ನೀರು ಬಿಡುವುದಿಲ್ಲ ಎಂಬ ನಿರ್ಣಯಕ್ಕೆ ರಾಜ್ಯ ಸರ್ಕಾರ ಬದ್ಧವಾಗಿರಬೇಕು ಎಂದು ಆಗ್ರಹಿಸಿದರು. ನರಸಪ್ಪ ಹೆಗಡೆ, ವೈ.ಎನ್. ತಿಮ್ಮೇಗೌಡ, ಹೊನ್ನೇಶ ಎಂ.ಎಚ್. ಉಪಸ್ಥಿತರಿದ್ದರು.ಜಲನೀತಿಗೆ ರೈತರ ಒತ್ತಾಯ


ಮದ್ದೂರು: ರಾಷ್ಟ್ರೀಯ ಜಲನೀತಿ ರೂಪಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘವು ಇಲ್ಲಿನ ಅಂಚೆ ಮತ್ತು ದೂರವಾಣಿ ಇಲಾಖೆ ಕಚೇರಿ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ 3ನೇ ದಿನಕ್ಕೆ ಕಾಲಿಟ್ಟಿತು.

ಬೆಳಿಗ್ಗೆಯಿಂದ ಸಂಜೆಯವರೆಗೆ ಧರಣಿ ನಡೆಸಿದ ಅವರು, ಸ್ಪಷ್ಟ ಜಲನೀತಿ ರೂಪಿಸುವ ವರೆಗೆ ನಿರಂತರ ಧರಣಿ ನಡೆಸುವುದಾಗಿ ಘೋಷಿಸಿದರು.  ರೈತಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹಿಂದಿನಿಂದಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ತಮಿಳುನಾಡು ಹೆಚ್ಚುವರಿ ನೀರಿಗಾಗಿ ಕ್ಯಾತೆ ತೆಗೆದಿದೆ. ಹೀಗಾಗಿ ಎಲ್ಲರಿಗೂ ಸಮ್ಮತವಾಗುವ ಸ್ಪಷ್ಟ ರಾಷ್ಟ್ರೀಯ ಜಲನೀತಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ರೈತಸಂಘದ ವಿಭಾಗೀಯ ಕಾರ್ಯದಶಿ ಯರಗನಹಳ್ಳಿ ರಾಮಕೃಷ್ಣಯ್ಯ, ನಾಗಮಂಗಲ ಕ್ಷೇತ್ರ ಅಧ್ಯಕ್ಷ ಕೀಳಘಟ್ಟನಂಜುಂಡಯ್ಯ, ಮುಖಂಡರಾದ ಚಂದ್ರು, ಸೀತರಾಮು, ವರದಯ್ಯ, ವೆಂಕಟೇಶ್, ಕೃಷ್ಣ, ಅಪ್ಪಾಜಿ, ಚೆಲುವೇಗೌಡ, ಗಿರಿಯಪ್ಪ, ದುಂಡೇಗೌಡ, ರಾಮಲಿಂಗಯ್ಯ, ಎ.ಸಿ.ಮಾದೇಗೌಡ, ನದೀಂ, ಜಿ.ಅಶೋಕ್, ಅಜ್ಜಹಳ್ಳಿ ಮಾದೇಗೌಡ, ಮಹೇಂದ್ರ ಭಾಗವಹಿಸಿದ್ದರು.ಸಿಎಂಸಿ ಸೂಚನೆಗೆ ವಿರೋಧ

ಕೃಷ್ಣರಾಜಪೇಟೆ: ತಮಿಳುನಾಡಿಗೆ 8.85 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಿರುವ ಕಾವೇರಿ ಉಸ್ತುವಾರಿ ಸಮಿತಿಯ (ಸಿಎಂಸಿ) ಕ್ರಮವನ್ನು ವಿರೋಧಿಸಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಶುಕ್ರವಾರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿಯಲ್ಲಿ ಸಾಗಿದ ವಕೀಲರು ಮಿನಿ ವಿಧಾನಸೌಧ ತೆರಳಿ ಮನವಿ ಸಲ್ಲಿಸಿದರು.ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಲ್.ದೇವರಾಜ್, ಕಾರ್ಯದರ್ಶಿ ಅನಂತರಾಮಯ್ಯ, ಮಾಜಿ ಅಧ್ಯಕ್ಷರಾದ ಬಿ.ಗಣೇಶ್, ಎಚ್.ರವಿ, ನ್ಯಾಯವಾದಿಗಳಾದ ಎಂ.ಆರ್.ಪ್ರಸನ್ನ ಕುಮಾರ್, ಪಿ.ಬಿ.ಮಂಜುನಾಥ್, ಸರೋಜಮ್ಮ, ಪಲ್ಲವಿ, ಕೆ.ಆರ್.ಮಹೇಶ್, ಸಿ.ಎನ್.ಮೋಹನ್ ಕುಮಾರ್, ಎಸ್.ಆರ್.ನವೀನ್ ಕುಮಾರ್, ಸಿ.ದಿನೇಶ್, ಪಾಂಡು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಕಾವೇರಿ ಚಳವಳಿಗೆ ತಾತ್ಕಾಲಿಕ ತೆರೆ

ಶ್ರೀರಂಗಪಟ್ಟಣ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಪಟ್ಟಣದಲ್ಲಿ ನಡೆಯುತ್ತಿದ್ದ ಚಳವಳಿಯನ್ನು ಅ.19ರ ವರೆಗೆ ಮುಂದೂಡಲಾಗಿದೆ.ಪಟ್ಟಣದ ಕುವೆಂಪು ವೃತ್ತದಲ್ಲಿ ಶುಕ್ರವಾರ ನಡೆದ ಧರಣಿಯಲ್ಲಿ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಈ ವಿಷಯ ತಿಳಿಸಿದರು. ಕಾವೇರಿ ನದಿ ನೀರು ಹಂಚಿಕೆ ಕುರಿತ ವಿಚಾರಣೆ ಅ.19ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಸಮಿತಿ ಈ ತಿರ್ಮಾನ ಕೈಗೊಂಡಿದೆ. ಅ.19ರ ಬೆಳವಣಿಗೆ ನೋಡಿಕೊಂಡು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.ತಾಲ್ಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮಸ್ಥರು ಶುಕ್ರವಾರ ಪಟ್ಟಣದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಧರಣಿ ದಿನಪೂರ್ತಿ ನಡೆಸಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ನಂಜುಂಡಪ್ಪ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಂ.ರವಿ, ಸಿ.ಸುರೇಶ್, ಶಿವಕುಮಾರ್, ದಿನೇಶ್, ಕರವೇ ಮುಖಂಡ ಸಿ.ಸ್ವಾಮಿಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry