ಕಾವೇರಿ: ಪ್ರಧಾನಿಗೆ ರೇವಣ್ಣ ಒತ್ತಾಯ

7

ಕಾವೇರಿ: ಪ್ರಧಾನಿಗೆ ರೇವಣ್ಣ ಒತ್ತಾಯ

Published:
Updated:

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವಂತೆ ಸಿಎಂಸಿ ನೀಡಿರುವ ತೀರ್ಪು ರಾಜ್ಯಕ್ಕೆ ವ್ಯತಿರಿಕ್ತವಾಗಿದೆ. ಕಾವೇರಿ ಕಣಿವೆಯಲ್ಲಿ ಈ ಬಾರಿ ಬರಗಾಲ ಕಾಣಿಸಿಕೊಂಡು ಪರಿಸ್ಥಿತಿ ಗಂಭೀರವಾಗಿದೆ. ಪ್ರಧಾನಿ ತಕ್ಷಣವೇ ಮಧ್ಯ ಪ್ರವೇಶಿಸಿ, ರಾಜ್ಯದ ಪರಿಸ್ಥಿತಿ ಅರಿಯಲು ಕೇಂದ್ರದಿಂದ ನಿಯೋಗ ಕಳುಹಿಸಬೇಕು ಎಂದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ರೇವಣ್ಣ ಅವರು ಒತ್ತಾಯಿಸಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಕಣಿವೆಯಲ್ಲೂ ಬರಪೀಡಿತ ತಾಲ್ಲೂಕುಗಳಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಎದುರಾಗಲಿದೆ. ಬೆಳೆ ನಷ್ಟವಾಗಿ ಜನತೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಸಿಎಂಸಿ ಆದೇಶ ಹೊರಡಿಸಿದೆ. ಈ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ರಾಜ್ಯದ ರೈತರ ಮೇಲೆ ಮರಣ ಶಾಸನ ಬರೆದಿವೆ ಎಂದು ದೂರಿದರು.ಕಾಂಗ್ರೆಸ್ ಮತ್ತು ಬಿಜೆಪಿ ಕಾವೇರಿ ವಿಚಾರದಲ್ಲಿ ಧರಣಿ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಈ ಎರಡೂ ಪಕ್ಷಗಳೇ ನೇರ ಕಾರಣ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿಲ್ಲ. ಇದರಲ್ಲಿ ರಾಜ್ಯದ ಬಿಜೆಪಿ ಸರ್ಕಾರವೂ ವಿಫಲವಾಗಿದೆ. ಈಗ ಪ್ರತಿಭಟನೆಯ ನಾಟಕವಾಡುತ್ತಿವೆ. ರಾಜ್ಯದ ಹಿತಾಸಕ್ತಿ ಕಾಯುವ ಕಾಳಜಿ ಇದ್ದರೆ ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ಕಾಂಗ್ರೆಸ್ ನಾಯಕರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry