ಕಾವೇರಿ ಬಂದ್: ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ

7

ಕಾವೇರಿ ಬಂದ್: ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ

Published:
Updated:

ಬೆಂಗಳೂರು (ಪಿಟಿಐ): ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ವಿರೋಧಿಸಿ ಕನ್ನಡ ಒಕ್ಕೂಟದ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 



 ಜನ ಜೀವನ ಸಾಮಾನ್ಯ ಸ್ಥಿತಿಯಲ್ಲಿದ್ದರೂ, ಕಾವೇರಿ ಜಲಾನಯನ ಪ್ರದೇಶದ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜ ನಗರ ಜಿಲ್ಲೆಗಳು ಸೇರಿದಂತೆ ಪ್ರಮುಖ ನಗರಗಳಲ್ಲಿ `ಕಾವೇರಿ~ ಕಾವು ಹೆಚ್ಚಿತ್ತು. ಕೆಲ ಕನ್ನಡ ಸಂಘಟನೆಗಳ ಸದಸ್ಯರು ಕನ್ನಡ ಬಾವುಟಗಳನ್ನು ಹಿಡಿದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ  ಪ್ರತಿಭಟನೆ ನಡೆಸಿದರು. ಕೆಲವೆಡೆ ಬಸ್‌ಗಳಿಗೆ ಕಲ್ಲು ಎಸೆದು, ಹಾನಿಗೊಳಿಸಿದ ಘಟನೆ ಸಹ ನಡೆದಿದೆ.



`ಕಾವೇರಿ~ ಪ್ರತಿಭಟನೆಗೆ ಬೆಂಗಳೂರಿನ ನಾಗರಿಕರು ಸ್ಪಂದಿಸುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ನಗರದಲ್ಲಿಯೂ ಕೂಡ ವ್ಯಾಪಕ ಪ್ರತಿಭಟನೆ ನಡೆಯಿತು. ಕೆಲವು ಪ್ರದೇಶಗಳಲ್ಲಿ ಕಿಡಿಗೇಡಿಗಳು ಬಿಎಂಟಿಸಿ ಬಸ್‌ಗಳಿಗೆ ಕಲ್ಲು ತೂರಿ ಹಾನಿಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



ಬಂದ್ ಪರಿಣಾಮದಿಂದಾಗಿ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಂಡಿರುವುದು ವರದಿಯಾಗಿದೆ. ಬೆಳಿಗ್ಗೆಯಿಂದಲೇ ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿತ್ತು. ನಿತ್ಯ ವಾಹನಗಳ ದಟ್ಟಣೆಯಿಂದ ಕೂಡಿದ್ದ ನಗರದ ರಸ್ತೆಗಳು ಎಲ್ಲೆಡೆ ಬಿಕೋ ಎನ್ನುತ್ತಿದ್ದವು.  



ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಪರ ಸಂಘಟನೆಗಳು ಟೈರ್‌ಗಳನ್ನು ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದವು. ಅಂಗಡಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು.



ಬೆಳಿಗ್ಗೆಯಿಂದಲೇ ನಗರ ಸಾರಿಗೆ ಬಸ್‌ಗಳ ಸಂಚಾರ ಇಲ್ಲದ ಪರಿಣಾಮ, ಮುಂದಾಲೋಚನೆ ಇಲ್ಲದೇ ನಗರಕ್ಕೆ ಆಗಮಿಸಿದ್ದ ಜನರು ಸಮಸ್ಯೆಯನ್ನು ಅನುಭವಿಸಬೇಕಾಯಿತು. ಆಟೋ ರಿಕ್ಷಾಗಳು ಕೂಡ ರಸ್ತೆಗಿಳಿಯದೇ ಬಂದ್‌ಗೆ ಸ್ಪಂದಿಸಿರುವುದು ವಿಶೇಷವಾಗಿತ್ತು.



ನೆಲಮಂಗಲ, ಆನೆಕಲ್ಲು ಮತ್ತು ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕೆಲ ಕನ್ನಡ ಪರ ಸಂಘಟನೆಗಳು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದವು ಎಂದು ಬೆಂಗಳೂರು ಗ್ರಾಮೀಣ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ. ಪ್ರಕಾಶ್ ತಿಳಿಸಿದ್ದಾರೆ.



ಮೈಸೂರಿಗೆ ಚಲಿಸುತ್ತಿದ್ದ ಚಾಮುಂಡಿ ಎಕ್ಸ್‌ಪ್ರೆಸ್ ರೈಲನ್ನು ಶ್ರೀರಂಗಪಟ್ಟಣದ ಬಳಿ ಕೆಲ ಸಮಯ ತಡೆದು ಪ್ರತಿಭಟಿಸಲಾಯಿತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.



ಆದಷ್ಟು ಬೇಗನೆ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಯುವುದನ್ನು ನಿಲ್ಲಿಸದಿದ್ದಲ್ಲಿ ಪ್ರತಿಭಟನೆಯನ್ನು ರಾಜ್ಯದೆಲ್ಲೆಡೆ ತೀವ್ರಗೊಳಿಸಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿವೆ.



ಕಾವೇರಿ ಜಲನಯನ ಪ್ರದೇಶದಲ್ಲಿನ ವಸ್ತುಸ್ಥಿತಿಯನ್ನು ಅಧ್ಯಯನ ಮಾಡಲು ಆಗಮಿಸಿರುವ ಕೇಂದ್ರ ಪರಿಶೀಲನಾ ತಂಡವು ಎರಡನೇ ದಿನ ಹಾರಂಗಿ, ಕಬಿನಿ ಮತ್ತು ಹೇಮಾವತಿ  ಜಲಾಶಯದ ನೀರಿನ ಮಟ್ಟವನ್ನು ಪರಿಶೀಲಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry