ಕಾವೇರಿ ಮತ್ತೆ ಹೋರಾಟ ಆರಂಭ

7

ಕಾವೇರಿ ಮತ್ತೆ ಹೋರಾಟ ಆರಂಭ

Published:
Updated:
ಕಾವೇರಿ ಮತ್ತೆ ಹೋರಾಟ ಆರಂಭ

ಮಂಡ್ಯ:  ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮತ್ತೆ ನೀರು ಬಿಡಬೇಕು ಎನ್ನುವ ಸೂಚನೆ ನೀಡಲಾಗಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮತ್ತೆ ಹೋರಾಟ ತೀವ್ರತೆ ಪಡೆದುಕೊಂಡಿದೆ.ರೈತ ಸಂಘದ ಕಾರ್ಯಕರ್ತರು ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಮೈಸೂರು- ಬೆಂಗಳೂರು ಪ್ಯಾಸೆಂಜರ್ ರೈಲನ್ನು 15 ನಿಮಿಷಗಳ ಕಾಲ ತಡೆದು ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳ ಸದಸ್ಯರು ಸಂಜಯ ವೃತ್ತದಲ್ಲಿ ಕೆಲಕಾಲ ಒಂಟಿ ಕಾಲಿನ ಮೇಲೆ ನಿಂತು ಪ್ರತಿಭಟಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ನಿಷೇಧಾಜ್ಞೆ ಜಾರಿ:  ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೃಷ್ಣರಾಜಸಾಗರ ಅಣೆಕಟ್ಟೆಯ ಒಂದು ಕಿ.ಮೀ. ವ್ಯಾಪ್ತಿಯವರೆಗೆ ಗುರುವಾರ ರಾತ್ರಿಯಿಂದ ಅ. 12 ಮಧ್ಯರಾತ್ರಿಯವರೆಗೆ ಪಾಂಡವಪುರ ಉಪ ವಿಭಾಗಾಧಿಕಾರಿ ಆರ್. ಲತಾ ನಿಷೇಧಾಜ್ಞೆ ಹೊರಡಿಸಿದ್ದಾರೆ.ಶೀಘ್ರದಲ್ಲಿ ಶಾಸಕರು ಹಾಗೂ ಸಂಸದರ ಸಭೆ: ಕಾವೇರಿ ಹೋರಾಟ ಹಾಗೂ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ನಿಲುವಿನ ಕುರಿತು ಚರ್ಚಿಸಲು ಸಂಸದರು ಹಾಗೂ ಶಾಸಕರ ಸಭೆಯನ್ನು ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಕರೆಯಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಹೇಳಿದರು.ನವದೆಹಲಿಯಲ್ಲಿ ಗುರುವಾರ ನಡೆದ ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 8.75 ಟಿಎಂಸಿ ಅಡಿ ನೀರು ಬಿಡುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಶಿಫಾರಸ್ಸು ಮಾತ್ರ. ಇದನ್ನು ಒಪ್ಪಿಕೊಳ್ಳಬೇಕೆಂಬ ಕಡ್ಡಾಯ ಏನಿಲ್ಲ. ನೀರು ಬಿಡದಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗುವುದು ಎಂದರು.ತೂಬು ಕಾಯುವ ಕೆಲಸವನ್ನು ಅಣೆಕಟ್ಟೆಯ ಭಾಗದ ರೈತರು ಮಾಡಲಿದ್ದಾರೆ. ನೀರು ಬಿಟ್ಟರೆ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲಾಗುವುದು. ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಆ ತೀರ್ಪಿನ ನಂತರ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.`ಸಮಿತಿಯದು ಸಲಹೆಯಷ್ಟೇ~ (ಹುಬ್ಬಳ್ಳಿ ವರದಿ):  ತಮಿಳುನಾಡಿಗೆ ನೀರು ಹರಿಸುವಂತೆ ಗುರುವಾರ ಕಾವೇರಿ ಮೇಲ್ವಿಚಾರಣಾ ಸಮಿತಿ ತೀರ್ಪು ನೀಡಿಲ್ಲ, ಬದಲಿಗೆ ಸಲಹೆ  ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ತಿಳಿಸಿದರು.ಸಮಿತಿಯ ಸಲಹೆಯನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ತಿರಸ್ಕರಿಸಿ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನಿ ಮನಮೋಹನ್‌ಸಿಂಗ್ ಅವರ ನಿಲುವು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವಂತಿದೆ ಎಂದರು.

`ಕರ್ನಾಟಕ ಶತ್ರು ರಾಜ್ಯವಲ್ಲ~ಹುಬ್ಬಳ್ಳಿ:  ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕರ್ನಾಟಕ ಶತ್ರು ರಾಜ್ಯವಲ್ಲ ಎಂಬುದನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೊದಲು ಮನಗಾಣಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದರು.ಬೆಳಗಾವಿಗೆ ತೆರಳುವ ಮಾರ್ಗದಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ತಮಿಳುನಾಡಿನ ಈ ಕ್ರಮದಿಂದ ಎರಡೂ ರಾಜ್ಯಗಳ ನಡುವಿನ ಸೌಹಾರ್ದ ವಾತಾವರಣ ಕದಡಿ ಸಂವಿಧಾನಿಕ ಸಮಸ್ಯೆಗಳು ಉದ್ಭವವಾಗಬಹುದು~ ಎಂದು ಎಚ್ಚರಿಸಿದರು.`ಮೊಕದ್ದಮೆ ಹಿಂತೆಗೆದುಕೊಳ್ಳುವಂತೆ ಜಯಲಲಿತಾ ಅವರಿಗೆ ಬುದ್ಧಿ ಹೇಳಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪಕ್ಷದ ಪರವಾಗಿ ಮನವಿ ಮಾಡಲಾಗುವುದು. ಅಲ್ಲದೇ, ಕಾನೂನು ಹೋರಾಟ ಸೇರಿದಂತೆ ರಾಜ್ಯ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮವನ್ನು ಪಕ್ಷ ಬೆಂಬಲಿಸಲಿದೆ~ ಎಂದರು.ಬೆಳಗಾವಿಯ ಸುವರ್ಣಸೌಧ ನಿರುಪಯುಕ್ತವಾಗಬಾರದು. ಮಹಾರಾಷ್ಟ್ರದ ನಾಗಪುರ ಮಾದರಿಯಲ್ಲಿ ಶಾಸನಬದ್ಧವಾಗಿ ಅಲ್ಲಿ ಕೆಲವು ಚಟುವಟಿಕೆಗಳನ್ನು ನಿಗದಿಪಡಿಸಬೇಕು ಎಂಬುದು ಪಕ್ಷದ ಒತ್ತಾಯವಾಗಿದೆ ಎಂದರು.

`ತಮಿಳುನಾಡು ಔದಾರ್ಯ ತೋರಲಿ~

ಬೆಂಗಳೂರು:  `ಕಾವೇರಿ ಜಲವಿವಾದದ ವಿಚಾರದಲ್ಲಿ ತಮಿಳುನಾಡು ಔದಾರ್ಯ ತೋರಿಸಬೇಕು. ಇಲ್ಲದಿದ್ದರೆ ದೇಶದ ಒಕ್ಕೂಟದ ವ್ಯವಸ್ಥೆ ಅಪಾಯಕ್ಕೆ ಸಿಲುಕಲಿದೆ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಎಚ್ಚರಿಸಿದರು.ಜೆಡಿಎಸ್ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ನಗರದಲ್ಲಿ ಗುರುವಾರ ನಡೆದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯದಲ್ಲಿ ಇವತ್ತು ಕುಡಿಯುವ ನೀರಿಗಾಗಿ ಬೇರೆಯವರಿಂದ ಅನುಮತಿ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಮೂರು ದಿನಗಳಿಂದ ಪಕ್ಕದ ರಾಜ್ಯದ ಪ್ರಮುಖರ ಹೇಳಿಕೆ ಗಮನಿಸಿದಾಗ ಭಯವಾಗುತ್ತಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಈ ದೇಶದ ಏಕತೆ ಉಳಿಯುತ್ತದಾ ಎಂಬ ಆತಂಕ ಕಾಡುತ್ತಿದೆ. ಅಪಾಯಕಾರಿ ಸನ್ನಿವೇಶಕ್ಕೆ ನಮ್ಮನ್ನು ದೂಡಿಕೊಂಡಿದ್ದೇವೆ. ಆದರೆ, ಇದರಿಂದ ಪಾರಾಗುವ ದಾರಿ ಕಾಣುತ್ತಿಲ್ಲ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.`ಈ ವಿವಾದ 120 ವರ್ಷಗಳಷ್ಟು ಹಳೆಯದು. ಕೇಂದ್ರ ಸರ್ಕಾರವನ್ನು ಉಳಿಸುವ ಹಾಗೂ ಉರುಳಿಸುವ ಶಕ್ತಿ ಪಕ್ಕದ ರಾಜ್ಯದ ರಾಜಕೀಯ ಮುಖಂಡರಿಗೆ ಇದೆ. ನಮ್ಮಲ್ಲಿ ಏಕತೆಯ ಕೊರತೆ ಇದೆ. ನಾವು ಎಲ್ಲ ಹಂತಗಳಲ್ಲಿ ಎಡವಿದ್ದೇವೆ. ಅದನ್ನೇ ನೆಪವಾಗಿಟ್ಟುಕೊಂಡು ಕುಡಿಯುವ ನೀರಿಗೂ ತೊಂದರೆ ಕೊಡಬಾರದು. ಆ ಮೂಲಕ ಈ ವ್ಯವಸ್ಥೆಯನ್ನು ಛಿದ್ರಗೊಳಿಸಬಾರದು~ ಎಂದು ಅವರು ವಿನಂತಿಸಿದರು.`ಲೋಕಸಭೆಯಲ್ಲಿ ರಾಜ್ಯದ ಸಂಸದರು ಧ್ವನಿ ಎತ್ತಿ ಮಾತನಾಡಲು ತಮಿಳುನಾಡಿನ ಸಂಸದರು ಅವಕಾಶ ನೀಡುತ್ತಿಲ್ಲ. ಅಂತಹ ಕೆಟ್ಟ ಸ್ಥಿತಿಗೆ ನಾವು ತಲುಪಿದ್ದೇವೆ. ನ್ಯಾಯಾಂಗಕ್ಕೆ ಕರ್ನಾಟಕ ಸದಾ ಗೌರವ ಕೊಡಲಿದೆ. ಪಕ್ಕದ ರಾಜ್ಯದ ಮುಖಂಡರು ರಾಜ್ಯದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು~ ಎಂದರು.`ಗಂಗಾನದಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಬಾಂಗ್ಲಾ ದೇಶದ ನಡುವೆ ಬಹುಕಾಲದಿಂದ ವಿವಾದ ಇತ್ತು. ಪಶ್ಚಿಮ ಬಂಗಾಳದ ಆಗಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರಲ್ಲಿ ವಿವಾದ ಇತ್ಯರ್ಥಕ್ಕೆ ಶ್ರಮಿಸುವಂತೆ ವಿನಂತಿಸಿದೆ.ಎರಡೂ ರಾಷ್ಟ್ರಗಳ ನಡುವಿನ ತಿಕ್ಕಾಟ ತಪ್ಪಿಸಲು ಒಪ್ಪಂದ ಮಾಡಿಕೊಳ್ಳಲಾಯಿತು. ಅದು ಯಶಸ್ವಿಯಾಯಿತು. ಅಲ್ಲಿ 17 ವರ್ಷಗಳಿಂದ ಯಾವುದೇ ವಿವಾದ ಇಲ್ಲ~ ಎಂದು ಅವರು ನೆನಪಿಸಿಕೊಂಡರು.

`ಕೋರ್ಟ್‌ನಲ್ಲಿ ವಿವಾದ ಇತ್ಯರ್ಥ ಕಷ್ಟ~

ಬೆಂಗಳೂರು: ಕಾವೇರಿ ಜಲ ವಿವಾದವನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವುದು ಕಷ್ಟ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಮುಂದಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಸಲಹೆ ನೀಡಿದರು.ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ ವಿವಾದಗಳನ್ನು ಇತ್ಯರ್ಥಪಡಿಸಲು ಈವರೆಗೂ ನ್ಯಾಯಾಲಯಗಳಿಗೆ ಸಾಧ್ಯವಾಗಿಲ್ಲ ಎಂದರು.`ತಮಿಳುನಾಡು ಸರ್ಕಾರ ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಕ್ಯಾತೆ ತೆಗೆಯುತ್ತದೆ.

ಅದರ ಬದಲು ಹಿಂಗಾರು ಮಳೆ ಆರಂಭ ಆಗುವವರೆಗೂ ಕಾಯಬೇಕು. ಈ ಮಳೆ, ಎರಡೂ ರಾಜ್ಯಗಳ ನೀರಿನ ಅಭಾವ ತಗ್ಗಿಸುವ ಸಾಧ್ಯತೆ ಇದೆ~ ಎಂದು ಅವರು ಹೇಳಿದರು.

ಕಾನೂನು ತಜ್ಞರು ಏನೆನ್ನುತ್ತಾರೆ?

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಸಂಬಂಧ ಸೆ. 28ರಂದು ನೀಡಿರುವ ತೀರ್ಪು ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಪುನರ್‌ಪರಿಶೀಲನಾ ಅರ್ಜಿಯ ವಿಚಾರಣೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ಇಬ್ಬರು ಕಾನೂನು ತಜ್ಞರು ನೀಡಿರುವ ಸಲಹೆ ಇಲ್ಲಿದೆ. ರಾಜ್ಯದ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ವಸ್ತುಸ್ಥಿತಿ ಬಗ್ಗೆ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಬೇಕು. ನ್ಯಾಯಾಲಯ ಮತ್ತು ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಡಬೇಕು.

 

-ಅಶೋಕ ಹಾರನಹಳ್ಳಿ,

 ಮಾಜಿ ಅಡ್ವೊಕೇಟ್ ಜನರಲ್ಕಾವೇರಿ ಉಸ್ತುವಾರಿ ಸಮಿತಿ ಆದೇಶವನ್ನು ಕರ್ನಾಟಕ ಪಾಲಿಸಬೇಕಾಗುತ್ತದೆ. ಆದರೆ ಇದನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ. ಸಮಿತಿ ತಮಿಳುನಾಡಿಗೆ ದಿನ ನಿತ್ಯ ನೀರು ಬಿಡುವಂತೆ ಸೂಚಿಸಿಲ್ಲ. ರಾಜ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ.

 

- ಬಿ.ವಿ.ಆಚಾರ್ಯ,

  ಮಾಜಿ ಅಡ್ವೊಕೇಟ್ ಜನರಲ್

`ನೀರು ಬಿಡಬಾರದು~

ಬೆಳಗಾವಿ: `ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬಾರದು. ರಾಜ್ಯದ ರೈತರ ಹಿತ ಕಾಪಾಡಬೇಕು~ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒತ್ತಾಯಿಸಿದರು.  `ನೀರು ಬಿಡದಂತೆ  ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಲಾಗುವುದು~ ಎಂದರು. `ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ನೀರು ಬಿಡುವ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ ರಾಜ್ಯದ ಸಮಸ್ಯೆ ಕುರಿತು ಮತ್ತೊಮ್ಮೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry