ಕಾವೇರಿ: ಮೀನುಗಾರರ ಬದುಕು ಮೂರಾಬಟ್ಟೆ

7

ಕಾವೇರಿ: ಮೀನುಗಾರರ ಬದುಕು ಮೂರಾಬಟ್ಟೆ

Published:
Updated:
ಕಾವೇರಿ: ಮೀನುಗಾರರ ಬದುಕು ಮೂರಾಬಟ್ಟೆ

ಮೈಸೂರು: ಕಾವೇರಿ ನೀರು ತಮಿಳುನಾಡಿಗೆ ಹರಿಯ ತೊಡಗಿದಂತೆ ಕಾವೇರಿ ಕೊಳ್ಳದ ಜಲಾಶಯದ ಸುತ್ತ ಇರುವ ಮೀನುಗಾರರ ಬದುಕು ಕೂಡಾ ಕಣ್ಣೀರ ಕೋಡಿಯಾಗಿದೆ.ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಮೀನುಗಾರಿಕೆಯ ಅವಕಾಶ ಕೂಡ ಕಡಿವೆುಯಾಗುತ್ತಿದೆ.ಕೃಷ್ಣರಾಜ ಸಾಗರದ ಸುತ್ತ 10 ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಮೀನುಗಾರರಿಗೆ ನೀರಿಗಿಳಿಯಲು ಸಾಧ್ಯವಾಗುತ್ತಿಲ್ಲ. ತೆಪ್ಪಗಳು, ಹರಿಗೋಲುಗಳು ಮೂಲೆ ಸೇರಿವೆ. ಬಲೆಗಳು ಕಾವೇರಿ ದಡದಲ್ಲಿ ಅನಾಥವಾಗಿ ಬಿದ್ದಿವೆ. ಮೀನುಗಾರರ ಬದುಕು ಮೂರಾಬಟ್ಟೆಯಾಗಿದ್ದು ದಿನನಿತ್ಯದ ಗಳಿಕೆಗಾಗಿ ಅವರು ಗಾರೆ ಕೆಲಸಕ್ಕೆ ಹೋಗತೊಡಗಿದ್ದಾರೆ.ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡ ನೂರಾರು ಕುಟುಂಬಗಳಿವೆ. ಸಾಗರಕಟ್ಟೆ, ಆಯರಹಳ್ಳಿ, ಮೂಲೆಪೆಟ್ಟಿಲು, ಆನಂದೂರು ಕೊಪ್ಪಲು, ರಾಮನಹಳ್ಳಿ, ಮೀನಾಕ್ಷಿಪುರ ಮುಂತಾದ ಕಡೆ ಮೀನುಗಾರರು ವಾಸವಾಗಿದ್ದಾರೆ. ಅಲ್ಲದೆ ಅಲೆಮಾರಿ ಜನಾಂಗದಂತೆ ಹಿನ್ನೀರಿನ ಸುತ್ತಲೂ ತಿರುಗುವ ಕುಟುಂಬಗಳು ಕೂಡ ಮೀನು ಹಿಡಿಯುವುದನ್ನೇ ಕಸುಬು ಮಾಡಿಕೊಂಡಿವೆ.`ಏಪ್ರಿಲ್‌ನಿಂದ ಜುಲೈವರೆಗೆ ಭರಪೂರ ಮೀನುಗಳು ಸಿಗುತ್ತವೆ. ಈ ಸಮಯದಲ್ಲಿ ಅಷ್ಟೊಂದು ಮೀನುಗಳು ಸಿಗದೇ ಇದ್ದರೂ ದಿನ ನಿತ್ಯದ ಖರ್ಚಿಗೆ ತೊಂದರೆ ಇರುತ್ತಿರಲಿಲ್ಲ. ಆದರೆ ಈ ಬಾರಿ ಅಕ್ಟೋಬರ್ ತಿಂಗಳಿನಲ್ಲಿಯೇ ಹಿನ್ನೀರು ಕಡಿವೆುಯಾಗ್ದ್ದಿದು ಮುಂದಿನ ಏಪ್ರಿಲ್ ಹೊತ್ತಿಗೆ ನೀರು ಪೂರ್ಣ ಬರಿದಾಗಿರುತ್ತದೆ. ಆಗ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ~ ಎಂದು ಸಾಗರಕಟ್ಟೆಯ ಸಂತೋಷ್ ಗೋಳಿಡುತ್ತಾರೆ.`ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ ನಿತ್ಯ 20 ರಿಂದ 40 ಕಿಲೊ ಮೀನು ಹಿಡಿಯುತ್ತೇವೆ. ಈಗ ಕೊಂಚ ಕಡಿಮೆ. ಆದರೂ ಕಾವೇರಿ ಗಲಾಟೆ ಆರಂಭವಾಗುವುದಕ್ಕೆ ಮೊದಲು ದಿನಕ್ಕೆ 4ರಿಂದ 5 ಕಿಲೊ ಮೀನು ಸಿಗುತ್ತಿತ್ತು. ಈಗ ಅದೂ ಇಲ್ಲವಾಗಿದೆ~ ಎನ್ನುವಾಗ ಮೀನುಗಾರ ರಾಮಕೃಷ್ಣ ನಾಯಕರ ಮುಖದಲ್ಲಿ ಆತಂಕ ಕಾಣುತ್ತದೆ.ಮೀನಾಕ್ಷಿಪುರದಲ್ಲಿ 80ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿವೆ. ಮೀನು ಹಿಡಿದು ಗುತ್ತಿಗೆದಾರರಿಗೆ ಮಾರಾಟ ಮಾಡುವುದು ಇವರ ಕೆಲಸ. ರಾತ್ರಿ ಹಗಲೆನ್ನದೆ ಹಿನ್ನೀರಿನಲ್ಲಿ ತೆಪ್ಪದಲ್ಲಿ ಹೋಗಿ ಬಲೆ ಬೀಸಿ ಮೀನು ಹಿಡಿದು ಬಂದರೆ ಇವರಿಗೆ ಸಿಗುವುದು ಒಂದು ಕಿಲೊ ಮೀನಿಗೆ 26 ರೂಪಾಯಿ. ಗುತ್ತಿಗೆದಾರರು ಈ ಮೀನನ್ನು ಮಾರುಕಟ್ಟೆಯಲ್ಲಿ 65 ರಿಂದ 75 ರೂಪಾಯಿಗೆ ಮಾರಾಟ ಮಾಡುತ್ತಾರೆ.`ಒಂದು ಬಲೆಗೇ 1500 ರೂಪಾಯಿ ಆಗುತ್ತದೆ. ಹರಿಗೋಲಿಗೂ ಸಾವಿರಾರು ರೂಪಾಯಿ ಬೇಕು. ರಾತ್ರಿ ಎಲ್ಲಾ ನೀರಿನಲ್ಲಿಯೇ ತೇಲುತ್ತಾ ಬಲೆ ಬೀಸುತ್ತಾ ನಾವು ಕಷ್ಟಪಟ್ಟು ಮೀನು ಹಿಡಿಯುತ್ತೇವೆ. ಆದರೆ ನಾವು ಹಿಡಿದ ಮೀನನ್ನು ನಮ್ಮ ಮನೆಗೆ ಕೂಡ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಬಲೆಗೆ ಸಿಕ್ಕಿದ್ದನ್ನೆಲ್ಲ ಗುತ್ತಿಗೆದಾರರಿಗೇ ಕೊಡಬೇಕು. ನಮ್ಮ ಮನೆಗೆ ಬೇಕಾದರೂ 65 ರೂಪಾಯಿ ಕೊಟ್ಟು ಅವರಿಂದಲೇ ಪಡೆಯಬೇಕು~ ಎಂದು ಮೀನುಗಾರರು ಹೇಳುತ್ತಾರೆ.`ಗುತ್ತಿಗೆದಾರರು ರೋಬೊ, ಕಾಟ್ಲಾ ಮುಂತಾದ ದೊಡ್ಡ ಮೀನುಗಳ ಮರಿಯನ್ನು ಮಾತ್ರ ಬಿಡುತ್ತಾರೆ. ಉಳಿದಂತೆ ಸಣ್ಣ ಸಣ್ಣ ಮೀನುಗಳಾದ ಹಾವಬಟ್ಟಿ, ಜಿಲಾಬಿ, ಗೊದಲೆ, ಗಿರಿಲು, ಮೇಘನಾಥ, ಅವಲು, ಚಾಪಲು, ವರ‌್ಲಿ, ಬಿಳಕಿ ಮುಂತಾದ ಜಾತಿಗಳು ನೀರಿನಲ್ಲಿಯೇ ಹುಟ್ಟುತ್ತವೆ. ಅಂತಹ ಮೀನುಗಳನ್ನೂ ತೆಗೆದುಕೊಳ್ಳಲು ನಮಗೆ ಅವಕಾಶ ಇಲ್ಲ~ ಎಂದು ಅವರು ಅಲವತ್ತುಕೊಳ್ಳುತ್ತಾರೆ.`ಅವೆಲ್ಲಾ ಏನಾದರೂ ಆಗಲಿ. ಜಲಾಶಯದಲ್ಲಿ ನೀರಿದ್ದರೆ ಮಾತ್ರ ಮೀನುಗಾರಿಕೆಗೆ ಅವಕಾಶವಿರುತ್ತದೆ. ನೀರು ಕಡಿಮೆಯಾದರೆ ಜೀವನ ಕಷ್ಟ. ಕಾವೇರಿ ಮಾತೆ ಕೇವಲ ರೈತರಿಗೆ ಮಾತ್ರ ಜೀವನಾಡಿಯಲ್ಲ. ನಮಗೂ ಜೀವನಾಡಿ~ ಎಂದು ಅವರು ಹೇಳುತ್ತಾರೆ. ಅಂದಹಾಗೆ ಕೃಷ್ಣರಾಜ ಸಾಗರದ ಸುತ್ತ ಮೀನುಗಾರಿಕೆಯಲ್ಲಿ ತೊಡಗಿರುವವರ ಪೈಕಿ ಬಹುತೇಕ ಮಂದಿ ತಮಿಳರು. ಮೀನಾಕ್ಷಿಪುರದಲ್ಲಿ ಇರುವ ಎಲ್ಲರೂ ತಮಿಳುನಾಡಿನವರು. ಅಲೆಮಾರಿಗಳಂತೆ ಬಂದು ಮೀನು ಹಿಡಿಯುವವರೂ ಕೂಡ ತಮಿಳರು. ಕಾವೇರಿ ಗಲಾಟೆ ಆರಂಭವಾಗಿ ಹಿನ್ನೀರು ಕಡಿಮೆಯಾಗುತ್ತಿದ್ದಂತೆ ಹಲವಾರು ಮಂದಿ ಈಗ  ತಮಿಳುನಾಡಿಗೆ ವಾಪಸು ಹೋಗಿದ್ದಾರೆ. ನೀರು ಬಂದರೆ ಮತ್ತೆ ಮರಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry