ಸೋಮವಾರ, ಏಪ್ರಿಲ್ 12, 2021
31 °C

ಕಾವೇರಿ ಯೋಜನೆ ಈ ವರ್ಷ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾವೇರಿ 4ನೇ ಹಂತದ 2ನೇ ಘಟ್ಟ ಯೋಜನೆ ಪ್ರಗತಿಯಲ್ಲಿದ್ದು, ಈ ವರ್ಷ ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದು ಬೆಂಗಳೂರು ಜಲಮಂಡಲಿ ಸಚಿವ ಸುರೇಶ್‌ಕುಮಾರ್ ಮಂಗಳವಾರ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

ಈ ಯೋಜನೆ ನಿಗದಿಯಂತೆ 2012ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದರು. ಈ ಯೋಜನೆ ಜಾರಿಯಾದ ನಂತರ ಪ್ರತಿನಿತ್ಯ 500 ದಶಲಕ್ಷ ಲೀಟರ್ ನೀರು ಹೆಚ್ಚುವರಿಯಾಗಿ ನಗರಕ್ಕೆ ಲಭ್ಯವಾಗಲಿದೆ. ಅಲ್ಲಿಯವರೆಗೂ ಇರುವ ನೀರನ್ನೇ ಬಳಸಬೇಕಾಗಿದೆ. ಈ ಕುರಿತು ಚರ್ಚಿಸಲು ಸದ್ಯದಲ್ಲೇ ನಗರದ ಎಲ್ಲ ಶಾಸಕರ ಸಭೆ ಕರೆಯಲಾಗುವುದು ಎಂದು ಸಚಿವರು ಹೇಳಿದರು.ಕಾಂಗ್ರೆಸ್‌ನ ನೆ.ಲ.ನರೇಂದ್ರ ಬಾಬು, ಎನ್.ಎ.ಹ್ಯಾರೀಸ್ ಸೇರಿದಂತೆ ಇತರರು ಕೂಡ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು. ಸಚಿವರು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅದನ್ನು ನೀಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.‘ಬೆಂಗಳೂರು ಪೂರ್ವ, ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಕುರಿತು ಬೆಂಗಳೂರು ಹೊರವಲಯದ ಶಾಸಕರ ಸಭೆ ಕರೆದು ಚರ್ಚಿಸಿದ್ದೇನೆ. ಇದಕ್ಕೆ ಪರ್ಯಾಯವಾಗಿ ಏನೆಲ್ಲ ಮಾಡಬೇಕು ಎನ್ನುವುದರ ಬಗ್ಗೆಯೂ ಚರ್ಚಿಸಲಾಗಿದೆ. ಅಗತ್ಯ ಇರುವ ಕಡೆ ಕೊಳವೆಬಾವಿ ಕೊರೆಯಲು ಸೂಚಿಸಲಾಗಿದೆ. ಪ್ರಸ್ತುತ 5,594 ಕೊಳವೆ ಬಾವಿಗಳಿದ್ದು, ಹೊಸದಾಗಿ 2,489 ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದರು. ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಮಾತನಾಡಿ, ತಿಪ್ಪಗೊಂಡನಹಳ್ಳಿ ಕೆರೆ ಪುನಶ್ಚೇತನಗೊಳಿಸುವುದರ ಮೂಲಕ ಅದರ ನೀರನ್ನು ಹೆಚ್ಚು ಬಳಕೆ ಮಾಡುವಂತೆ ಮಾಡಿ ಎಂದು ಸಲಹೆ ನೀಡಿದರು.ನಂತರ ಸಚಿವರು ಮಾತನಾಡಿ, ಅರ್ಕಾವತಿ ನದಿ ನೀರು ತಿಪ್ಪಗೊಂಡನಹಳ್ಳಿ ತಲುಪುವ ಹಾಗೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.ತಕ್ಷಣ ತೆರವು: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಜ್ಞಾನಜ್ಯೋತಿ ನಗರದ 1ನೇ ಅಡ್ಡರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಕಾಂಪೌಂಡ್ ಗೋಡೆಯನ್ನು ತ್ವರಿತವಾಗಿ ತೆರವುಗೊಳಿಸಿ, ರಸ್ತೆ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಸುರೇಶಗೌಡ ಅವರು ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದರು. ನಟರಾಜ್ ಎಂಬುವರ (ಮಲ್ಲತಹಳ್ಳಿ ಸರ್ವೆ ನಂಬರ್ 42ರ 288.25 ಚದರ ಅಡಿ) ಜಾಗವನ್ನು ಸ್ವಾಧೀನಪಡಿಸಿಕೊಂಡು, ನಂತರ ಅಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.