ಶುಕ್ರವಾರ, ನವೆಂಬರ್ 15, 2019
20 °C

ಕಾವೇರಿ ವಿವಾದ: ರೈತರ ಪರ ಬಿಜೆಪಿ ಹೋರಾಟ

Published:
Updated:

ಹಾಸನ: `ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಿ.ಜೆ.ಪಿ. ಸರ್ಕಾರ ರೈತರ ಪರವಾಗಿ ಹೋರಾಟ ಮಾಡಿದೆ. ಅಂದು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಅಭಿನಂದಿಸಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಈಗ ಆ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಗೌಡರು ಸಣ್ಣ ಮಟ್ಟದ ರಾಜಕೀಯಕ್ಕೆ ಮುಂದಾಗಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆರೋಪಿಸಿದರು.ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸೋಮವಾರ ಹಾಸನಕ್ಕೆ ಬಂದಿದ್ದ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೆ.ಜೆ.ಪಿ. ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಬಿ.ಜೆ.ಪಿ. ರಾಷ್ಟ್ರ ನಾಯಕ ಎಲ್.ಕೆ. ಅಡ್ವಾಣಿ ಹಾಗೂ ಅವರ ಮಕ್ಕಳಿಗೆ ಹಣ ನೀಡಿರುವುದಾಗಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, `ಹಣದ ಚೀಲದೊಂದಿಗೆ ಹೋಗಿ ವ್ಯವಹಾರ ಕುದುರಿಸುವುದು ಧನಂಜಯ ಅವರ ಹಳೆಯ ಹವ್ಯಾಸ, ಹಾಗಾಗಿ ಅವರು ಅಂಥ ಮಾತನಾಡಿದ್ದಾರೆ. ಅಡ್ವಾಣಿ ಹಾಗೂ ಅವರ ಮಕ್ಕಳಿಗೆ ಹಣ ನೀಡಿರುವ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ, ಹಣ ಪಡೆದಿದ್ದು ಸಾಬೀತಾದರೆ ರಾಜ್ಯದಲ್ಲಿ ಬಿ.ಜೆ.ಪಿ. ತನ್ನ ಬಾಗಿಲು ಮುಚ್ಚಲು ಸಿದ್ಧವಿದೆ' ಎಂದು ಸವಾಲು ಹಾಕಿದರು.ಪ್ರಚಾರಕ್ಕೆ ಮೋದಿ

ಏ.28 ಮತ್ತು 29 ರಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈ ಬಾರಿಯೂ ಬಿ.ಜೆ.ಪಿ.  ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುವುದೆಂಬ ವಿಶ್ವಾಸ ನಮಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರ ಪಡೆದರೂ ಆರಂಭದ ದಿನಗಳಲ್ಲಿ ಕೆಲವು ಗೊಂದಲಗಳಿಂದ ಪಕ್ಷಕ್ಕೆ ಅಲ್ಪ ಮಟ್ಟಿನ ತೊಂದರೆಯಾಗಿದೆ.ಆದರೆ ಕೊನೆಯ ಹಂತದಲ್ಲಿ ಪಕ್ಷ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಆಡಳಿತ ನೀಡಿದೆ. ಹಲವು ವರ್ಷಹಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್.ಗಳಿಗೆ ಜನಪರ ಬಜೆಟ್ ನೀಡಲೂ ಸಾಧ್ಯವಾಗಿರಲಿಲ್ಲ. ಬಿ.ಜೆ.ಪಿ. ಆ ನಿಟ್ಟಿನಲ್ಲಿ ಹೊಸ ದಾಖಲೆ ಮಾಡಿದೆ' ಎಂದರು.ಬಿ.ಜೆ.ಪಿ. ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರುಪ್ರಸಾದ್, ಮುಖಂಡರಾದ ನವಿಲೆ ಅಣ್ಣಪ್ಪ, ಕಮಲ್ ಕುಮಾರ್, ಮಂಜುನಾಥ್ ಮೋರೆ, ಲೋಹಿತ್‌ಗೌಡ ಕುಂದೂರು ಹಾಗೂ ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)