ಕಾವೇರಿ ವಿವಾದ: ಶಾಶ್ವತ ಪರಿಹಾರ ಅಗತ್ಯ

7

ಕಾವೇರಿ ವಿವಾದ: ಶಾಶ್ವತ ಪರಿಹಾರ ಅಗತ್ಯ

Published:
Updated:

ಪಾಂಡವಪುರ: ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲು ಅಕ್ಟೋಬರ್ 3ರಂದು ಕಾವೇರಿ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಕೆಆರ್‌ಎಸ್ ಮುತ್ತಿಗೆ ಹಾಗೂ ಜೈಲ್‌ಭರೋ ಕಾರ್ಯಕ್ರಮಕ್ಕೆ ಈ ಭಾಗದ ರೈತರು ಭಾಗವಹಿಸಬೇಕೆಂದು ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಕರೆ ನೀಡಿದರು.ಪಟ್ಟಣದ ಐದು ದೀಪ ವೃತ್ತದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾವೇರಿ ಹೋರಾಟದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಪಕ್ಷಾತೀತವಾಗಿ ಎಲ್ಲರೂ ಪ್ರಯತ್ನಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು. ಪ್ರತಿಭಟನೆಯ ಜತೆಗೆ ಕಾನೂನಿನ ಹೋರಾಟಕ್ಕೂ ನಾವು ಸಿದ್ದರಾಗಬೇಕು. ಎಲ್ಲ ಪಕ್ಷದ ಸಂಸದರು ಒಂದಾಗಿ ಸಂಸತ್ತಿನಲ್ಲಿ ಸಮರ್ಥವಾಗಿ ದನಿಯೆತ್ತಿ ಪ್ರಧಾನ ಮಂತ್ರಿಗಳ ಜತೆ ಮಾತುಕತೆ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು. ರಾಜ್ಯದ ಕೇಂದ್ರ ಮಂತ್ರಿಗಳು ಕಾವೇರಿ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾನವ ಸರಪಳಿ: ಕಾವೇರಿ ಹಿತರಕಕ್ಷಣಾ ಸಮಿತಿಯ ಅಧ್ಯಕ್ಷ ಸಿ.ಅಣ್ಣೇಗೌಡ ಅವರ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು ಮಂಗಳವಾರ ಭಾಗವಹಿಸಿದ್ದವು. ಐದು ದೀಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದವು.ಸವಿತಾ ಸಮಾಜದ ಪ್ರತಿಭಟನೆ: ತಾಲ್ಲೂಕಿನ ಸವಿತಾ ಸಮಾಜ ಸಂಘದ ಪ್ರತಿನಿಧಿಗಳು ಅಧ್ಯಕ್ಷ ನಾರಾಯಣಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಗುತ್ತಿಗೆದಾರರ ಸಂಘದ ಧರಣಿ: ತಾಲ್ಲೂಕಿನ ಗುತ್ತಿಗೆದಾರರ ಸಂಘದ ಸದಸ್ಯರು ಅಧ್ಯಕ್ಷ ಕೆ.ಕುಬೇರ ಅವರ ನೇತೃತ್ವದಲ್ಲಿ ಪಟ್ಟಣದ ಐದು ದೀಪ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಬೆಂಗಳೂರು-ಮೈಸೂರು ಪರ್ಯಾಯ ರಸ್ತೆ ತಡೆ

ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ತಾಲ್ಲೂಕಿನ ಕ್ಯಾತೇಗೌಡನದೊಡ್ಡಿಯ ಗೇಟ್ (ರಾಷ್ಟ್ರೀಯ ಹೆದ್ದಾರಿ- 209) ಬಳಿ ಮಂಗಳವಾರ ಗ್ರಾಮಸ್ಥರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಕಾವೇರಿ ನದಿ ಪ್ರಾಧಿಕಾರ ತನ್ನ ಆದೇಶವನ್ನು ಕೂಡಲೇ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಬೆಂಗಳೂರು ಮೈಸೂರು ಪರ್ಯಾಯ ಮಾರ್ಗದ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಬೆಂಗಳೂರು-ಕನಕಪುರ-ಮಳವಳ್ಳಿ ಪರ್ಯಾಯ ಮಾರ್ಗದಲ್ಲಿ ಮೈಸೂರಿಗೆ ಸಂಚರಿಸುತ್ತಿದ್ದ ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry