ಕಾವೇರಿ: ಶಾಶ್ವತ ಪರಿಹಾರಕ್ಕೆ ಆಗ್ರಹ

7

ಕಾವೇರಿ: ಶಾಶ್ವತ ಪರಿಹಾರಕ್ಕೆ ಆಗ್ರಹ

Published:
Updated:

ಚಿತ್ರದುರ್ಗ: ರಾಜ್ಯದಲ್ಲಿ ಜಲ ಮತ್ತು ಗಡಿ ವಿವಾದಗಳು ಜ್ವಲಂತ ಸಮಸ್ಯೆಯಾಗಿವೆ. ಈ ವಿಷಯಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ಸೋಮವಾರ ನಗರದ ಮದಕರಿ ವೃತ್ತದಲ್ಲಿ ಮಠಾಧೀಶರು ಹಾಗೂ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿದ್ದ ಸಾಂಕೇತಿಕ ಧರಣಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.ದೇಶದಲ್ಲಿ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ.

 

ಆದರೆ, ಕಾವೇರಿ ನೀರಿನ ವಿಷಯದಲ್ಲಿ ಪ್ರಧಾನಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸರಿಯಾಗಿ ನಡೆಯದ ಪರಿಣಾಮ ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ.  ಆದ್ದರಿಂದ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಹತ್ತಿರವಿರುವ ಆಪ್ತರು ಇಲ್ಲಿನ ವಾಸ್ತವಾಂಶದ ಅರಿವು ಮೂಡಿಸಬೇಕಿದೆ. ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ನೀರಿನ ಸಮಸ್ಯೆ ಪುನರಾವರ್ತನೆ ಆಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ದಶಕಗಳಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತ ಬಂದಿದೆ.  ಈಗ ಕಾವೇರಿ ನದಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಹೇಳಿರುವುದು ಅನ್ಯಾಯದ ಮುಂದುವರಿದ ಭಾಗವಾಗಿದೆ. ಕುಡಿಯುವ ನೀರು ಹಾಗೂ ಕೃಷಿ ಉತ್ಪನ್ನಕ್ಕಾಗಿ ಕಾವೇರಿಯನ್ನೇ ಸಂಪೂರ್ಣವಾಗಿ ಆಶ್ರಯಿಸಿದ್ದಾರೆ. ರಾಜ್ಯದಲ್ಲಿ ತೀವ್ರ ಬರಗಾಲ ಸಂಭವಿಸಿದ್ದು ಕುಡಿಯುವ ನೀರಿಗಾಗಿ ತತ್ವಾರ ಉಂಟಾಗಿದ್ದರೂ ಇಂತಹ ಪರಿಸ್ಥಿತಿಯಲ್ಲಿ ನೆರೆ ರಾಜ್ಯಕ್ಕೆ ನೀರು ಹರಿಸುವುದು ಸರಿ ಅಲ್ಲ ಎಂದರು. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಜಯಲಲಿತಾ ಈ ರಾಜ್ಯದವರೇ ಆಗಿದ್ದರೂ ಕರ್ನಾಟಕದ ಜನತೆಗೆ ಅನ್ಯಾಯ ಮಾಡುವುದು ಸರಿಯಲ್ಲ. ನಮ್ಮಲ್ಲಿರುವವರೇ ನಮಗೆ ಶತ್ರುಗಳಾಗುತ್ತಾರೆ. ರಾಜ್ಯದಲ್ಲಿ ಮಳೆಯಾಗದೇ ರೈತರು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ನೀರು ಹರಿಸಿದರೆ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ, ಪ್ರಧಾನಿ ಈ ವಿಚಾರದಲ್ಲಿ ಸಮಗ್ರವಾಗಿ ಅಧ್ಯಯನ ನಡೆಸಿ ನಂತರ ಸೂಕ್ತ ಕ್ರಮ ಕೈಗೊಂಡು ರಾಜ್ಯಕ್ಕೆ ಕಾವೇರಿ ನೀರು ಮೀಸಲಾಗುವಂತೆ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟಗಳು ನಿರಂತರವಾಗಿ ನಡೆಯುತ್ತಿರುತ್ತವೆ ಎಂದು ಎಚ್ಚರಿಕೆ ನೀಡಿದರು.ಧರಣಿಯಲ್ಲಿ ಮುಖಂಡರಾದ ಆರ್. ಶೇಷಣ್ಣಕುಮಾರ್, ಮುರುಘರಾಜೇಂದ್ರ ಒಡೆಯರ್,  ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎಚ್. ಚಿಕ್ಕಣ್ಣ, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ನಗರಸಭೆ ನಾಮ ನಿರ್ದೇಶನ ಸದಸ್ಯ ಎನ್.ಇ. ನಾಗರಾಜ್, ರಾಮಚಂದ್ರಯ್ಯ, ಜಿ. ಬಸವರಾಜಪ್ಪ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry