ಕಾವೇರಿ ಸ್ಥಿತಿ- ಕೇಂದ್ರ ತಂಡಕ್ಕೆ ಮನವರಿಕೆ

7

ಕಾವೇರಿ ಸ್ಥಿತಿ- ಕೇಂದ್ರ ತಂಡಕ್ಕೆ ಮನವರಿಕೆ

Published:
Updated:
ಕಾವೇರಿ ಸ್ಥಿತಿ- ಕೇಂದ್ರ ತಂಡಕ್ಕೆ ಮನವರಿಕೆ

ಮಂಡ್ಯ: ಕಾವೇರಿ ಕಣಿವೆಯ ವಸ್ತುಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರದ ತಂಡವನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಎದುರಿಸುತ್ತಿರುವ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟರು.ಕೆಆರ್‌ಎಸ್ ಜಲಾಶಯದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಮನವಿ ಸಲ್ಲಿಸಿದ ಅವರು, ಪ್ರಸ್ತುತ ಇರುವ ಬೆಳೆ, ಅದಕ್ಕೆ ಬೇಕಾಗುವ ನೀರು, ಮಳೆಯ ಕೊರತೆ ಸೇರಿದಂತೆ ಹಲವು ವಿಷಯಗಳನ್ನು ತಂಡಕ್ಕೆ ವಿವರಿಸಿದರು.

ಬೆಂಗಳೂರಿಗೆ ಕುಡಿಯುವ ನೀರಿಗೆ 30 ಟಿಎಂಸಿ ನೀರು ಬೇಕಾಗುತ್ತದೆ. ಈಗಿನ ಪ್ರಮಾಣದಲ್ಲಿ ನೀರು ಬಿಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆ ಎದುರಿಸಬೇಕಾಗುತ್ತದೆ. ಇದನ್ನೆಲ್ಲ ಪರಿಗಣಿಸಿ ವಾಸ್ತವ ವರದಿ ನೀಡಬೇಕು ಎಂದು ಮನವಿ ಮಾಡಿದರು.ಸಂಸದ ಎನ್. ಚಲುವರಾಯಸ್ವಾಮಿ, ಶಾಸಕರಾದ ಜಮೀರ್ ಅಹ್ಮದ್, ಸಿ.ಎಸ್. ಪುಟ್ಟರಾಜು, ಎಂ.ಶ್ರೀನಿವಾಸ್, ಬಿ.ರಾಮಕೃಷ್ಣ, ಕಲ್ಪನಾ ಸಿದ್ದರಾಜು, ರಮೇಶಬಾಬು ಬಂಡಿಸಿದ್ದೇಗೌಡ, ಸಾ.ರಾ.ಮಹೇಶ್ ಉಪಸ್ಥಿತರಿದ್ದರು.

ಪ್ರತ್ಯೇಕವಾಗಿ ಮನವಿ ಸಲ್ಲಿಸಿದ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಕಾವೇರಿ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗವಾದ ಮಳವಳ್ಳಿ ತಾಲ್ಲೂಕಿಗೆ ಇಂದಿಗೂ ನೀರೇ ತಲುಪಿಲ್ಲ. ಕುಡಿಯುವ ನೀರಿಗೂ ತೊಂದರೆ ಎದುರಿಸುತ್ತಿದ್ದೇವೆ. ಅಲ್ಲಿಗೂ ಭೇಟಿ ನೀಡಿ ವಸ್ತುಸ್ಥಿತಿ ಅರಿಯಬೇಕು ಎಂದು ಮನವಿ ಮಾಡಿದರು.ಕೆ.ಆರ್. ಪೇಟೆ ತಾಲ್ಲೂಕಿನ ಹದನೂರು ಬಳಿ ಕೇಂದ್ರ ತಂಡಕ್ಕೆ ಶಾಸಕರಾದ ಕೆ.ಬಿ. ಚಂದ್ರಶೇಖರ್, ಕೆ. ಸುರೇಶಗೌಡ ಅವರೂ ಕೆ.ಆರ್. ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನ ಸ್ಥಿತಿಯ ಬಗ್ಗೆ ಮನವಿಯನ್ನು ಸಲ್ಲಿಸಿದರು.ಸಮಿತಿ ಮನವಿ: ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ಕೇಂದ್ರ ತಂಡದ ತಜ್ಞರನ್ನು  ಭೇಟಿ ಮಾಡಿ, ಲಭ್ಯ ಇರುವ ನೀರಿನ ವಸ್ತುಸ್ಥಿತಿಯ ಕುರಿತು ವಿವರಣೆ ನೀಡಲಾಯಿತು.

 ಸಮಿತಿ ಉಪಾಧ್ಯಕ್ಷ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಪ್ರತಿಭಟನೆಗಳ ಮಹಾಪೂರ ಹರಿದು ಬರುತ್ತಿದೆ ಜನಸಾಗರ

 ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ರಸ್ತೆ ತಡೆ, ಪ್ರತಿಭಟನಾ ರ‌್ಯಾಲಿ, ಎತ್ತಿನಗಾಡಿ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳು ನಡೆದಿವೆ. ಸರದಿ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರದಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಗ್ರಾಮೀಣ ಪ್ರದೇಶದಿಂದ ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ತಗ್ಗಹಳ್ಳಿ ವೆಂಕಟೇಶ್, ಸಿಎಂ ದ್ಯಾವಪ್ಪ, ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಸತೀಶ್ ಕುಮಾರ್, ಜಿ.ಸಿ.ಆನಂದ್ ಹಾಗೂ ಪುಟ್ಟಸ್ವಾಮಿ ಉಪವಾಸ ಸತ್ಯಾಗ್ರಹ ನಡೆಸಿದರು.ಚಿತ್ರನಟ ಶ್ರೀನಗರ ಕಿಟ್ಟಿ, ಕವಯತ್ರಿ ಲತಾ ರಾಜಶೇಖರ್ ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಮುಖಂಡ ಅಬ್ಬಾಸ್ ಅಲಿ ಬೊಹ್ರಾ, 50 ಸಾವಿರ ರೂಪಾಯಿ ದೇಣಿಗೆಯನ್ನು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಗೆ ನೀಡಿದರು.ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ನಡೆದಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಬಾಲಕಿ ದೀಕ್ಷಿತಾ ರಾಜು ಉಪವಾಸ ನಡೆಸುವ ಮೂಲಕ ಬೆಂಬಲ ಸೂಚಿಸಿದಳು. ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿಯೂ ಪ್ರತಿಭಟನೆಗಳು ಮುಂದುವರಿದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry