ಕಾವ್ಯೋಪಾಸಕನ ನಾದಸುಧೆ

7

ಕಾವ್ಯೋಪಾಸಕನ ನಾದಸುಧೆ

Published:
Updated:
ಕಾವ್ಯೋಪಾಸಕನ ನಾದಸುಧೆ

ಕನ್ನಡದ ಶ್ರೇಷ್ಠ ಕವಿಗಳ ಕಾವ್ಯದ ಪದಗಳು ಅದೆಷ್ಟೋ ಹೊಸ ಕಾವ್ಯಗಳನ್ನು ಹುಟ್ಟುಹಾಕಿವೆ. ಬರೆಯುವ, ಕವಿಯಾಗುವ ಆಸೆಯನ್ನು ಧುಮ್ಮಿಕ್ಕಿಸಿವೆ. ಅಂಥವರಲ್ಲಿ ಬೆಂಗಳೂರಿನ ಯುವಕ ಪ್ರವೀಣ್ ಮಾಯಾಕರ್ ಕೂಡ ಒಬ್ಬರು.ದ.ರಾ.ಬೇಂದ್ರೆ, ಕುವೆಂಪು ಮುಂತಾದ ಕವಿಗಳ ಹಾಡು ಕೇಳುತ್ತಿದ್ದ ಇವರಿಗೆ ಚಿಕ್ಕಂದಿನಿಂದಲೇ ಲೇಖನಿ ಹಿಡಿದು ಅನಿಸಿದ್ದನ್ನು ಅಕ್ಷರ ರೂಪಕ್ಕಿಳಿಸುವ ಬಯಕೆ. ಬದುಕಿನ ಪ್ರತಿ ಕ್ಷಣದ ಅನುಭವಗಳಿಗೆ ಕವನದ ರೂಪು ಕೊಡುತ್ತಾ ಹೋದರು. ಹುಟ್ಟೂರು ಧಾರವಾಡದ ಸಂಗೀತದ ಅಮಲಿನಲ್ಲಿ ಹಾಡನ್ನು ಸಂಯೋಜನೆ ಮಾಡುವ ಗುಂಗಿಗೂ ಬಿದ್ದರು. ಇದೀಗ ಅವರ ಹೆಸರಿನಲ್ಲಿ ಏಳು (ಅನಾಯೆನ್ಸ್‌, ಎಕ್ಸ್‌ಪೀರಿಯನ್ಸ್‌, ಅಕ್ಸಪ್ಟೆನ್ಸ್‌, ಅಪಿಯರೆನ್ಸ್‌, ಎಮೋಶನ್ಸ್‌ ಹೀಗೆ ಇವರು ನೀಡುವ ಹೆಸರು ವಿಭಿನ್ನ) ಆಲ್ಬಂಗಳಿವೆ.ಹುಟ್ಟೂರು ಧಾರವಾಡವಾದರೂ ಪ್ರವೀಣ್‌ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿ ಹಾಗೂ ಕೆಲಸ ಸ್ವೀಡನ್‌ನಲ್ಲಿ. ಕಳೆದ ಆರು ವರ್ಷದಿಂದ ಅಲ್ಲೇ ನೆಲೆಸಿರುವ ಇವರಿಗೆ ಕವಿಗಳು ಹುಟ್ಟುಹಾಕಿದ ತನ್ನೊಳಗಿನ ಕವಿಗೆ ದನಿ ನೀಡುವಾಸೆ ಹೆಚ್ಚಾಯಿತು. ಕಲಿತದ್ದು ಎಲೆಕ್ಟ್ರಾನಿಕ್ಸ್‌ ಆದ್ದರಿಂದ ಸಾಧನೆಯ ದಾರಿ ಸುಲಭವಾಯಿತು. ಸಿಗುತ್ತಿರುವ ಅನೇಕ ಆಧುನಿಕ ಉಪಕರಣಗಳನ್ನು ಖರೀದಿಸಿ ತಾವಿರುವ ಮನೆಯಲ್ಲೇ ಪುಟ್ಟದೊಂದು ಸ್ಟುಡಿಯೊ ನಿರ್ಮಿಸಿಕೊಂಡಿದ್ದಾರೆ.

ಕಚೇರಿಯ ಕೆಲಸ ಮುಗಿಸಿ ಬಂದಾಗಿನಿಂದ ಕವಿತೆಯ ಸಾಲು ತೆರೆದುಕೊಳ್ಳುತ್ತದೆ. ಹಾಡಿಗೆ ಧಾಟಿಯ ಸಂಯೋಜನೆ. ಜೊತೆಗೆ ಈಗಷ್ಟೇ ಅಂಟಿಸಿಕೊಂಡ ಗಿಟಾರ್‌ ಕಲಿಕೆ.ಆಸಕ್ತಿಯ ಬೆನ್ನೇರಿದ ಪ್ರವೀಣ್‌ ಅವರು ಇಷ್ಟಕ್ಕೇ ಸೀಮಿತರಲ್ಲ. ಕಳೆದ ಮೂರು ವರ್ಷಗಳಿಂದ ಅವರ ಸಂಗೀತ ಪಯಣ ಜೋರಾಗಿದೆ. ಸ್ವೀಡನ್‌ನಲ್ಲೇ ಅವರ ಬ್ಯಾಂಡ್‌ ಒಂದು ಪ್ರಾರಂಭವಾಗಿದೆ. ಅದೇ ‘ಮಾಯಾಸ್ವರ’. ಇವರ ಬ್ಯಾಂಡ್‌ ಕನಸಿಗೆ ಕೈಜೋಡಿಸಿದ್ದು ಸ್ವೀಡನ್‌ ಕಲಾವಿದ, ಗಿಟಾರ್‌ ವಾದಕ ಡೇವಿಡ್‌ ಎಕ್ಲೂನ್‌. ಅಲೇಸಿಯಾ ಅಂಕೋವಾ ಹಾಗೂ ಕನ್ನಡದವರೇ ಆದ ಚಂದ್ರಶೇಖರ್‌ ಪೋತಲ್ಕರ್‌ ಗಾಯಕರು.ವಿವಿಧ ಸಂಗೀತ ಪ್ರಕಾರಗಳನ್ನು ಹಾಗೂ ಕಲಾವಿದರನ್ನು ಸೇರಿಸಿಕೊಂಡು ಆಲ್ಬಂ ಮಾಡಬೇಕು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಹೆಬ್ಬಯಕೆ ಇವರದು. ಇತ್ತೀಚೆಗಷ್ಟೇ ಇವರಿಗೆ ಕೈಜೋಡಿಸಿದ್ದು ಅಮೆರಿಕ ನಿವಾಸಿ, ಮಂಗಳೂರಿನ ಗಾಯಕಿ ಸ್ತುತಿ ಭಟ್‌. ಲೂಸಿಯಾ ಸಿನಿಮಾಕ್ಕೆ ಇವರು ಆಡಿಶನ್‌ ನೀಡಿದ್ದನ್ನು ಯೂಟ್ಯೂಬ್‌ನಲ್ಲಿ ಪ್ರವೀಣ್‌ ನೋಡಿದ್ದರಂತೆ. ಹಾಡುತ್ತೀರಾ ಎಂದಾಗ ಸ್ತುತಿ ಖುಷಿಯಿಂದ ಒಪ್ಪಿಗೆ ಸೂಚಿಸಿದರು.ಆನ್‌ಲೈನ್‌ನಲ್ಲೇ ಕವನದ ಸಾಲುಗಳ ವಿನಿಮಯವಾಗುತ್ತದೆ. ಹಾಡಿನ ಧಾಟಿ ಹೇಗಿರಬೇಕು ಎಂಬುದನ್ನೂ ಪ್ರವೀಣ ತಿಳಿಸಿರುತ್ತಾರೆ. ಅಮೆರಿಕದಲ್ಲಿರುವ ಸ್ತುತಿ ಹಾಡಿ, ತಮ್ಮಲ್ಲಿರುವ ರೆಕಾರ್ಡರ್‌ನಲ್ಲಿ ದಾಖಲಿಸಿಕೊಂಡು, ಅದನ್ನು ಆನ್‌ಲೈನ್‌ ಮೂಲಕ ಕಳುಹಿಸುತ್ತಾರೆ. ಪ್ರವೀಣ್‌ ಸ್ವೀಡನ್‌ನಲ್ಲಿರುವ ತಮ್ಮ ಮನೆಯ ಸ್ಟುಡಿಯೊದಲ್ಲಿ ಹಾಡಿಗೆ ವಾದ್ಯ ಸಂಯೋಜನೆ ಮಾಡಿ, ಹೊಸ ರೂಪ ನೀಡುತ್ತಾರೆ. ‘ಇದಕ್ಕೆಲ್ಲಾ ಹೆಚ್ಚು ಸಮಯ ಬೇಕು ನಿಜ. ಆದರೆ ತುಡಿತ ಮುಖ್ಯವಾದಾಗ ಮನಸ್ಸು ಸುಮ್ಮನಾಗುವುದಿಲ್ಲ. ಬೇರೆ ಬೇರೆ ಕಲಾವಿದರ ಜೊತೆ ಸೇರಿ ಹೊಸ ಹಾಡು, ಹೊಸ ಆಲ್ಬಂ ತರುವ ಕನಸು ನನ್ನದು’ ಎನ್ನುತ್ತಾರೆ ಪ್ರವೀಣ್‌.ಗೊತ್ತಿಲ್ಲದ ದೇಶ ಸ್ವೀಡನ್‌ನಲ್ಲಿ ಸಂಗೀತದ ಅಲೆ ಎಬ್ಬಿಸುವುದು ಪ್ರಾರಂಭದಲ್ಲಿ ಅವರಿಗೆ ಕಷ್ಟವಾಯಿತು. ಅದಕ್ಕಾಗಿ ಮೂರೇ ತಿಂಗಳಲ್ಲಿ ಸ್ವೀಡಿಶ್‌ ಭಾಷೆ ಕಲಿತರು. ಭಾರತೀಯ ಹಬ್ಬಗಳನ್ನು ಅಲ್ಲೂ ಆಚರಿಸುತ್ತಾ ಸ್ವೀಡನ್‌ ಮಕ್ಕಳನ್ನು ಗುಂಪಿನಲ್ಲಿ ಸೇರಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ನೀಡಿದರು.

ಅಲ್ಲಿನವರಿಗೆ ಭಾರತೀಯ ಸಿನಿಮಾಗಳನ್ನು ತೋರಿಸಿ ಅಭಿಮಾನ ಮೂಡಿಸುವ ಪ್ರಯತ್ನ ಮಾಡಿದರು. ಕ್ರಮೇಣ ಅಲ್ಲಿನ ಜನರಿಂದ ಪ್ರೋತ್ಸಾಹ ಸಿಗತೊಡಗಿತು. ಒಂದು ತಿಂಗಳ ರಜೆಗೆಂದು ಬೆಂಗಳೂರಿಗೆ ಬಂದಿರುವ ಅವರು ಸ್ವೀಡನ್‌ ರೇಡಿಯೊ ಒಂದರಲ್ಲಿ ಸ್ವೀಡಿಶ್‌ ಭಾಷೆಯಲ್ಲೇ ಸಂದರ್ಶನ ನೀಡಿ ಬಂದಿದ್ದಾರೆ. ತಮ್ಮ ಪ್ರಯತ್ನಕ್ಕೆ ಅಲ್ಲಿಯವರಿಂದ ಸಿಕ್ಕ ಮನ್ನಣೆ ಅದು ಎನ್ನುತ್ತಾರೆ ಪ್ರವೀಣ್‌.‘ನನ್ನ ಆಲ್ಬಂನ ಹೆಚ್ಚಿನ ರಾಗಗಳು ವಾದ್ಯ ಸಂಯೋಜನೆಯಿಂದಷ್ಟೇ ರೂಪುತಳೆದಿದ್ದವು. ಇತ್ತೀಚೆಗೆ ಹಾಡುಗಾರಿಕೆಯನ್ನೂ ಸೇರಿಸುವ ಯತ್ನ ಮಾಡಿದ್ದೇನೆ. ಮಾನವನ ಮನಸ್ಥಿತಿ ಹಾಗೂ ಭಾವನೆಗಳನ್ನು ಸಂಗೀತರೂಪಕ್ಕಿಳಿಸಿ, ಅದರಿಂದ ಕೇಳುಗರಲ್ಲಿ ಸಂತೋಷ ಮೂಡಿಸುವುದು ನನ್ನ ಉದ್ದೇಶ. ಅತ್ಯಂತ ಸೊಗಸಾದ, ಶ್ರೀಮಂತ ಭಾಷೆ ಕನ್ನಡ. ಆದರೆ ಅದಕ್ಕೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ ಎಂಬ ನೋವಿದೆ. ಸದ್ಯದಲ್ಲೇ ಇನ್ನೂ ನಾಲ್ಕು ಆಲ್ಬಂಗಳನ್ನು ಬಿಡುಗಡೆ ಮಾಡುವ ಮನಸ್ಸಿದೆ. ಅದರಲ್ಲಿ ಕನ್ನಡ ಹಾಡುಗಳನ್ನೂ ಸೇರಿಸಲಿದ್ದೇನೆ’ ಎಂದು ತಮ್ಮ ಯೋಜನೆಯ ಪಟ್ಟಿಯನ್ನೇ ಮುಂದಿಡುತ್ತಾರೆ ಪ್ರವೀಣ್‌.ಅಕ್ಷರಗಳನ್ನು ಪ್ರೀತಿಸುವ ಇವರಿಗೆ ಛಾಯಾಚಿತ್ರದಲ್ಲೂ ವಿಶೇಷ ಆಸಕ್ತಿ. ಅದೂ ಅಲ್ಲದೆ ಇವರು ಎಂಟು ಕಥೆಗಳನ್ನು ಬರೆದಿದ್ದಾರೆ. ಇ–ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ. ತತ್ವಶಾಸ್ತ್ರದ ಬಗ್ಗೆ ವಿಶೇಷವಾದ ಒಲವಿದೆಯಂತೆ. ಹೀಗಾಗಿಯೇ ಜೀವನದ ಸಮಸ್ಯೆ ಕುರಿತಾಗಿ ಅವುಗಳಿಗೆ ಪರಿಹಾರ ಹೇಳುವ ಪ್ರಯತ್ನವನ್ನು ಕವನಗಳಲ್ಲಿ ಮಾಡಿದ್ದಾರಂತೆ. ತಮ್ಮ ಎಲ್ಲಾ ಆಲ್ಬಂಗಳನ್ನು ಆನ್‌ಲೈನ್‌ನಲ್ಲೇ ಬಿಡುಗಡೆ ಮಾಡಿದ್ದಾರೆ. ‘ಕೆಲವು ಆಲ್ಬಂಗಳಿಗೆ ಹಣ ನೀಡಬೇಕು. ಅದಕ್ಕಾಗಿಯೇ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಕ್ಕಿಲ್ಲವೇನೋ? ಹಣ ಇದ್ದವರು ಖರೀದಿಸಿದರೆ ಮಾತ್ರ ಸಂಗೀತಗಾರನ ಪ್ರಯತ್ನಕ್ಕೆ ಗೌರವ ಸಿಕ್ಕಂತೆ ಅಲ್ಲವೆ’ ಎಂದು ಅವರು ಪ್ರಶ್ನಿಸುತ್ತಾರೆ.ಅಂದಹಾಗೆ, ಇವರು ತಮ್ಮ ಆಲ್ಬಂಗಳನ್ನು ಸೀಡಿ ರೂಪದಲ್ಲಿ ಬಿಡುಗಡೆ ಮಾಡಿ, ಮಾರಿದ್ದಾರೆ. ಅದರಿಂದ ಬಂದ ಹಣವನ್ನು ಬಡ ಮಕ್ಕಳಿಗೆ ನೀಡುವುದು ಉದ್ದೇಶ. ಸಂಗೀತ ಕಲಿಯುವ ಆಸಕ್ತಿ ಅವರಿಗಿದೆ. ಆದರೆ ಕಲಿಕೆಗೆ ಇನ್ನೂ ಅನೇಕ ವರ್ಷ ಹಿಡಿಯುತ್ತದೆ. ಅದಕ್ಕಿಂತ ತಮ್ಮ ಯೋಚನೆಯನ್ನು ಸಾಕಾರಗೊಳಿಸಿಕೊಳ್ಳಲು ಗಾಯನ ಅಥವಾ ವಾದ್ಯ ಕಲಿತವರನ್ನು ಜೊತೆ ಸೇರಿಸಿಕೊಳ್ಳುವ ಹಂಬಲದಲ್ಲಿದ್ದಾರೆ ಪ್ರವೀಣ್‌. ಅವರ ಪ್ರಯತ್ನಕ್ಕೆ ಜೊತೆಯಾಗಬಯಸುವ ಕಲಾವಿದರು praveenmayakar@gmail.com ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ www.mayaswara.mayajaala.com, www.facebook.com/musictrix.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry