ಕಾವ್ಯ ಎಲ್ಲರದೂ...

ಮಂಗಳವಾರ, ಜೂಲೈ 23, 2019
24 °C

ಕಾವ್ಯ ಎಲ್ಲರದೂ...

Published:
Updated:

`ನನ್ನ ಕಾವ್ಯ ನನ್ನದು' ಎನ್ನುವ ಪ್ರತಿಭಾ ನಂದಕುಮಾರ್ ಅವರ ಬರಹ ಸ್ವಕಲ್ಪಿತ ಹಾಗೂ ಸತ್ಯದೂರವಾದ ನಂಬಿಕೆಗಳಿಂದ ತುಂಬಿದೆ. ಕನ್ನಡದಲ್ಲಿ ಮಹಿಳಾ ಕವಿಗಳು ಮುಖ್ಯನೆಲೆಗೆ ಬಂದಿದ್ದಾರೆ ಎಂದು ಅವರು ಯಾವ ಆಧಾರದಲ್ಲಿ ಹೇಳುತ್ತಾರೆ? ಈವರೆಗೆ ಕನ್ನಡಕ್ಕೆ ಸಂದಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಒಬ್ಬ ಮಹಿಳೆ ಇದ್ದಿದ್ದರೂ ಲೇಖಕಿಯರು ಕನ್ನಡ ಸಾಹಿತ್ಯದ ಮುಖ್ಯನೆಲೆಗೆ ಬಂದಿದ್ದಾರೆ ಎಂದು ಒಪ್ಪಬಹುದಿತ್ತು. ರಾಷ್ಟ್ರಮಟ್ಟದ ಪ್ರತಿಷ್ಠಿತ ಮನ್ನಣೆ ಕನ್ನಡದ ಕವಯಿತ್ರಿಯರಿಗೆ ಸಿಕ್ಕಿದ್ದರೆ ಅಥವಾ ಮಹಾಶ್ವೇತಾದೇವಿ, ಅಮೃತಾ ಪ್ರೀತಮ್, ಕಮಲಾದಾಸ್ ಅವರಂತಹ ಗಟ್ಟಿ ದನಿಗಳು ಕನ್ನಡದಲ್ಲಿ ಸತತ ಮೊಳಗುತ್ತಿದ್ದರೆ ಪ್ರತಿಭಾ ಅವರ ಮಾತನ್ನು ಒಪ್ಪಬಹುದಿತ್ತು. ವಸ್ತುಸ್ಥಿತಿ ಹಾಗಿಲ್ಲ.ಕನ್ನಡದಲ್ಲಿ ಕವಯಿತ್ರಿಯರು ಇದ್ದಾರೆ ಮತ್ತವರು ಕೆಲವು ಪ್ರಮುಖ ಮಹಿಳಾ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ ಎಂದು ಹೇಳಬಹುದು ಅಷ್ಟೇ ಹೊರತು ಮಹಿಳೆಯರೇ ಕನ್ನಡ ಸಾಹಿತ್ಯದ ಮುಖ್ಯ ಧ್ವನಿ ಆಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.ಪ್ರತಿಭಾ ಅವರ ಮಾತನ್ನು ಒಪ್ಪಬೇಕೆಂದರೆ, ಕನ್ನಡದ ನವ ಕವಿಗಳ ದಂಡನ್ನು ಕಣ್ಣೆತ್ತಿ ನೋಡದೆ, ಅವರನ್ನು ಅಲಕ್ಷಿಸಿ ಒಪ್ಪಬೇಕಷ್ಟೆ. ಕವಯಿತ್ರಿಯರು ಮುಖ್ಯನೆಲೆಗೆ ಬಂದಿದ್ದಾರೆಂದು ಅವರು ಕೊಡುವ ಕಾರಣ, ಮಹಿಳೆಯರು ಪ್ರಯೋಗಶೀಲರೆಂಬುದು. ಅರ್ಥಾತ್ ಪುರುಷ ಕವಿಗಳು ಯಾವುದೇ ಪ್ರಯೋಗಗಳಿಗೆ ತೊಡಗದೆ, ಇನ್ನೂ ನವೋದಯ ಬಂಡಾಯದ ದಾಟಿಯಲ್ಲೇ ಬರೆಯುತ್ತಿದ್ದಾರೆಂಬುದು ಅವರ ಮಾತಿನ ಸೂಚ್ಯಾರ್ಥ. ಅದಕ್ಕೆ ಪ್ರತಿಯಾಗಿ ಸಮರ್ಥನೆ ಕೊಡುವುದು ನಿರರ್ಥಕ.ಲೇಖನದುದ್ದಕ್ಕೂ ತುಂಬಿಕೊಡಿರುವ ಇನ್ನೊಂದು ಅಪಾಯಕಾರಿ ಪೂರ್ವಗ್ರಹವೆಂದರೆ, ಇದುವರೆಗೆ ಬರೆದ ಎಲ್ಲ ಪುರುಷ ಸಾಹಿತಿಗಳು ಮಹಿಳೆಯರನ್ನು ಕಟೆಕಟೆಗೆ ನಿಲ್ಲಿಸುತ್ತಿದ್ದರೆಂಬುದು ಮತ್ತು ಈಗ ಅವರನ್ನೆಲ್ಲ ಮಹಿಳೆಯರು ಸ್ವತಃ ತಾವೇ ವಿಚಾರಿಸಿಕೊಳ್ಳುತ್ತಿರುವರು ಎಂಬುದು. ಇಂಥ ಮಾತನ್ನು ಈಗ ಬರೆಯತೊಡಗಿರುವ ಯುವ ಲೇಖಕಿ ಹೇಳಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಹಲವಾರು ವರ್ಷಗಳ ಸಾಹಿತ್ಯ ಕೃಷಿಯ ಅನುಭವವಿರುವ ಕವಯಿತ್ರಿಯಿಂದ ಇಂಥ ಮಾತು ಸರಿಯಲ್ಲ. ಯಾವುದೇ ನಿರ್ದಿಷ್ಟ ಅಜೆಂಡಾ ಇಟ್ಟುಕೊಂಡು ಯಾವುದೇ ಸಾರ್ವಕಾಲಿಕ ಶ್ರೇಷ್ಠ ಸಾಹಿತ್ಯ ಸೃಷ್ಟಿ ಸಾಧ್ಯವಿಲ್ಲ.ಇವತ್ತಿನ ಕಾಲವನ್ನು `ಮಹಿಳಾ ಕಾವ್ಯದ ಯುಗ' ಎಂದು ಪರಿಗಣಿಸದಿರುವ ಎಲ್ಲರನ್ನೂ ಅಸಮರ್ಥರು ಎಂದು ತಿರಸ್ಕರಿಸುವ ಲೇಖಕಿಯ ಮನೋಭಾವವನ್ನು ಏನೆನ್ನೋಣ? ಕನ್ನಡದ ವಿಮರ್ಶಕರು ಅಧ್ಯಯನಶೀಲರೂ ಸಮಗ್ರ ದೃಷ್ಟಿಕೋನವುಳ್ಳವರೂ ಆಗಿದ್ದಾರೆ. ಕನ್ನಡದ ವಿಮರ್ಶಾಲೋಕ ಕನ್ನಡದ ಮಹಿಳಾ ಸಾಹಿತಿಗಳ ಕೊಡುಗೆಯನ್ನು ಗುರುತಿಸಿದ್ದಾರೆ, ಪ್ರಶಂಸಿಸಿಯೂ ಇದ್ದಾರೆ. ಇಂದಿನ ಕನ್ನಡ ಸಾಹಿತ್ಯ ಘಟ್ಟವನ್ನು `ಮಹಿಳಾ ಕಾವ್ಯದ ಯುಗ' ಎಂದು ವಿಮರ್ಶಕರು ಉದ್ಘೋಷಿಸಿರದಿದ್ದರೆ ಅದಕ್ಕೆ ಕಾರಣ ಕನ್ನಡದ ಕವಯಿತ್ರಿಯರು ಇನ್ನೂ ಕನ್ನಡ ಕಾವ್ಯದ ಆಧಾರಗಳು ಎನ್ನುವಷ್ಟು ಬೃಹತ್ತಾಗಿ ಬೆಳೆಯದಿರುವುದು.ಲೇಖನದಲ್ಲಿ ಪ್ರಸ್ತಾಪಿಸಿರುವ ಕೆಲವು ವಿಚಾರಗಳು ಅಪ್ರಸ್ತುತವೂ ಅಸಂಬದ್ಧವೂ ಆಗಿವೆ. ಎಲ್ಲಿಯೋ ನೌಕಾಪಡೆಯಲ್ಲಿ ಹೆಂಡತಿಯರನ್ನು ಅದಲುಬದಲು ಮಾಡಿಕೊಳ್ಳುವ ಪದ್ಧತಿಯಿದ್ದರೆ, ಇನ್ನೆಲ್ಲೋ ಮಾಧುರಿ ದೀಕ್ಷಿತ್ ನೃತ್ಯಕ್ಕೆ ಟೀಕೆಗಳು ಬಂದರೆ ಕನ್ನಡದ ಜನ ಏನು ಮಾಡಬೇಕು? ಮಹಿಳಾ ಕಾವ್ಯವನ್ನು ಅರಿಯಲು ಹೊಸ ದೃಷ್ಟಿಕೋನ ಬೇಕೆನ್ನುತ್ತಾರೆ, ಕಾರಣ ಇಂದಿನ ಸಾಮಾಜಿಕ-ಸಾಂಸ್ಕೃತಿಕ ಚಿತ್ರಗಳು ಬದಲಾಗುತ್ತಿವೆ ಎಂಬುದು. ಆ ಮಾತು ಇಂದಿನ ಇಡೀ ಸಾಹಿತ್ಯಕ್ಕೇ ಅನ್ವಯಿಸುತ್ತದೆ, ಕೇವಲ ಸ್ತ್ರೀಸಾಹಿತ್ಯಕ್ಕಲ್ಲ.  ಮಹಿಳಾ ಕಾವ್ಯ, ಸ್ತ್ರೀವಾದ ಇಂದು ಪ್ರತಿಭಾರವರು ಅಂದುಕೊಂಡಿರುವಂತೆ ಉಡಾಫೆಯ ಮಾತಾಗಿ ಉಳಿದಿಲ್ಲ. ಶೈಕ್ಷಣಿಕವಾಗಿ ಸ್ತ್ರೀವಾದ ಮತ್ತು ಸ್ತ್ರೀಸಾಹಿತ್ಯ ಗಂಭೀರವಾದ ಸ್ಥಾನವನ್ನು ಪಡೆದುಕೊಂಡಿದೆ. ಪದವಿ ಮತ್ತು ಸ್ನಾತಕೋತ್ತರ ಪಠ್ಯಕ್ರಮದಲ್ಲಿ ಮಹಿಳಾ ಸಾಹಿತ್ಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆ. ಅನೇಕ ಮಹಿಳಾ ಸಾಹಿತಿಗಳ ಮೇಲೆ ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಹೀಗಾಗಿ ಮಹಿಳಾ ಸಾಹಿತ್ಯ ಅವಗಣನೆಗೊಳಗಾಗಿದೆ ಎಂದು ಹಲುಬುವುದು ವಿಚಿತ್ರವಾಗಿ ತೋರುತ್ತದೆ.ಕೊನೆಯದಾಗಿ, ಅವರು ಹೇಳುವಂತೆ, ಮಹಿಳೆಯರು ತಮ್ಮನ್ನು ಅಭಿವ್ಯಕ್ತಿಗೊಳಿಸಿಕೊಳ್ಳಲು ಬರೆಯುತ್ತಿದ್ದಾರೆ. ಹೆಣ್ತನ, ತಾಯ್ತನ ಪರಿಕಲ್ಪನೆಗಳೆಲ್ಲ ಮರು ವ್ಯಾಖ್ಯಾನಗೊಳ್ಳುತ್ತಿವೆ. ಇಂದಿನ ಪುರುಷ ಸಾಹಿತಿಗಳ ಸಾಹಿತ್ಯ ಸೃಷ್ಟಿಯ ಉದ್ದೇಶವೂ ಅಭಿವ್ಯಕ್ತಿ ಅಷ್ಟೆ; ನೀತಿ ಬೋಧನೆಯಾಗಲಿ, ಸಮಾಜ ಪರಿವರ್ತನೆಯಾಗಲಿ, ಮನೋರಂಜನೆಯಾಗಲೀ ಅಲ್ಲ. ಬದಲಾಗುತ್ತಿರುವ ಈ ಕಾಲದಲ್ಲಿ ಎಲ್ಲ ಪರಿಕಲ್ಪನೆಗಳೂ ಹೊಸ ವ್ಯಾಖ್ಯೆಗಳನ್ನು ಹೊಂದುತ್ತಿವೆ; ಗಂಡ-ಹೆಂಡತಿ, ಒಡೆಯ-ಸೇವಕ, ದೇಶ-ಕಾಲ, ಸಂಸಾರ-ಸನ್ಯಾಸ, ಭಕ್ತಿ-ಅಧ್ಯಾತ್ಮ... ಎಲ್ಲವೂ.ಸಾಹಿತ್ಯ ಒಂದು ಸಾಗರ- ಅಲ್ಲಿಗೆ ಎಲ್ಲ ನದಿಗಳೂ ಉಪನದಿಗಳೂ ತೊರೆಗಳೂ ಬಂದು ಸೇರುತ್ತವೆ. ಕೆಲವು ಹಳ್ಳಗಳು ಸಾಗರ ಸೇರುವ ಮೊದಲೇ ಇಂಗುತ್ತವೆ. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಕಾವ್ಯ ಮತ್ತು ಸಾಹಿತ್ಯದ ಅಲೆಯಂತೂ ಇದೆ. ಅದು ಇನ್ನಷ್ಟು ಭೋರ್ಗರೆಯಲಿ.

-ಚಂದನ್, ಬೆಂಗಳೂರುಬರಹಗಾರರು ಸಮಾನದುಃಖಿಗಳು!

ಪ್ರತಿಭಾ ನಂದಕುಮಾರ್ ಬರಹದಲ್ಲಿ ಅಸ್ಪಷ್ಟತೆಯಿದೆ. ಜೇನುಗೂಡಿಗೆ ಕಲ್ಲು ಎಸೆಯುವ ಪ್ರಯತ್ನವಿದೆ.

ಪುರುಷ ಕಾವ್ಯ, ಸ್ತ್ರೀ ಕಾವ್ಯ, ಮಂಗಳಮುಖಿಯರ ಕಾವ್ಯ, ನಪುಂಸಕರ ಕಾವ್ಯವೆಂದು ವಿಂಗಡಿಸುತ್ತಾ ಕೂಡ್ರಲು ವ್ಯವಧಾನವಾದರೂ ಎಲ್ಲಿದೆ? ಸಂಕೀರ್ಣತೆಯ ಶಿಶುಗಳಾಗಿರುವ ಕವಿ/ಕವಯಿತ್ರಿಯರಲ್ಲಿ ಮೂಡುವ ಅಸುರಕ್ಷತೆಯ ಭಾವ, ಅಭದ್ರ ಬದುಕು ಕ್ಷಣಮಾತ್ರದಲ್ಲಿ ಪಲ್ಲಟಗೊಳ್ಳುವ ವ್ಯವಸ್ಥೆ ಮೂಡಿಸುವ ತಲ್ಲಣಗಳು ಕಾವ್ಯ ಹುಟ್ಟುವುದಕ್ಕೆ ಬೇಕಾಗುವ ಒತ್ತಡಗಳಲ್ಲವೇ? ಅದನ್ನು ಕಾವ್ಯವಾಗಿಸುವ ಕಲೆಯಲ್ಲಿ ಪಳಗಿ, ಒಳದೋಟಿಯನ್ನು ಹೊರಹಾಕಿ, ನೆಮ್ಮದಿಯ ನಿಟ್ಟುಸಿರೊಂದು ಯಾರು ಬಿಟ್ಟರೂ, ಅದು ನೆಮ್ಮದಿಗೋ ಅಲ್ಪತೃಪ್ತಿಗೋ ತಲ್ಲಣಕ್ಕೋ ಹೊಸವಿಚಾರಕ್ಕೋ ಆತ್ಮಸ್ಥೈರ್ಯಕ್ಕೋ ಕಾರಣೀಭೂತ ಆಗುತ್ತದೆಯಾದರೆ ಅಂಥ ಕಾವ್ಯ ಯಾರಿಂದ ಬಂದರೇನು? ಪುರುಷ ಕಾವ್ಯ, ಮಹಿಳಾ ಕಾವ್ಯವೆಂಬ ಹಣೆಪಟ್ಟಿ ಇನ್ನೂ ಬೇಕೇ?ವಿಮರ್ಶೆಯ ಮಾತಿಗೆ ಬರುವುದಾದರೆ ಎಲ್ಲ ಬರಹಗಾರರೂ ಸಮಾನದುಃಖಿಗಳು. ವಿಮರ್ಶಕರು ಪೂರ್ವಗ್ರಹ ಇಲ್ಲದೇ ಹಂಸಕ್ಷೀರ ನ್ಯಾಯ ಪಾಲಿಸುವುದೇ ಸರಿಯಾದ ಕ್ರಮ.

-ಡಾ. ಅಮೀರುದ್ದೀನ್ ಖಾಜಿ, ಬಿಜಾಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry