ಕಾವ್ಯ ಕಾರಣ/ಗಾರ್ಮೆಂಟ್ ಹುಡುಗಿ

7

ಕಾವ್ಯ ಕಾರಣ/ಗಾರ್ಮೆಂಟ್ ಹುಡುಗಿ

Published:
Updated:

ಕಾವ್ಯ ಕಾರಣ

ಕವನಗಳೇ ಹೀಗೇನೋ. ನಮಗೆ ಅವು ಯಾಕೆ ಪ್ರಿಯವಾಗುತ್ತವೆ ಎಂಬುದಕ್ಕೆ ಕವನದೊಳಗಿನ ಕಾರಣಗಳಿರುವಂತೆ, ಕವನದ ಹೊರಗೆ ನಿಂತಿರುವ ನಮ್ಮ ಕಾರಣಗಳೂ ಇರುತ್ತವೆ. ಕೆಲವೊಮ್ಮೆ ಶೀರ್ಷಿಕೆಯೇ ಗಪ್ಪನೆ ನಮ್ಮ ಗಮನಸೆಳೆಯಬಹುದು;

ಇನ್ನು ಹಲವೊಮ್ಮೆ ಕವನದ ಸಂವೇದನೆ, ಭಾಷೆಯನ್ನು ದುಡಿಸಿಕೊಂಡ ಬಗೆ, ಸಾಮಾನ್ಯ ಸಂಗತಿಗಳ ಕುರಿತು ಮಾತನಾಡುತ್ತಲೇ ಹೊಸ ಹೊಳಹಿನತ್ತ ನಮ್ಮನ್ನು ಸೆಳೆಯುವಿಕೆ - ಹೀಗೆ ಹತ್ತು ಹಲವು ಕಾರಣಗಳನ್ನು ಹೇಳಬಹುದು.`ಕಾವ್ಯಕಾರಣ~ಕ್ಕೆ ನಾನು ಆಯ್ದುಕೊಂಡ ಕವನ `ಗಾರ್ಮೆಂಟ್ ಹುಡುಗಿ ಹೊಲಿದ ಚೆಂದದ ಪೋಷಾಕು~. ಕವಯಿತ್ರಿ ಸಬಿತಾ ಬನ್ನಾಡಿ ವಿಮರ್ಶಾ ಕ್ಷೇತ್ರದಲ್ಲೂ ಗುರುತಿಸಿಕೊಂಡವರು. ಇದುವರೆಗೆ ಅನೇಕ ಕವನಗಳನ್ನು ಬರೆದಿದ್ದರೂ, ಹಲವು ಕವಿಗೋಷ್ಠಿಗಳಲ್ಲಿ ಕವನಗಳನ್ನು ವಾಚಿಸಿದ್ದರೂ, ಅವರು ಕವನಸಂಕಲನವನ್ನು ತರುವ ಮನಸ್ಸಿನ್ನೂ ಮಾಡಿಲ್ಲ.

ಇಂತಹ ಸಬಿತಾ ಅವರ ಈ ಕವನವನ್ನು ಮಾಧವಿ ಭಂಡಾರಿ ಕೆರೆಕೋಣ ಅವರು ಸಂಪಾದಿಸಿರುವ, `ಚಿಂತನ ಪುಸ್ತಕ~ದ 2011ರ ಪ್ರಕಟಣೆಯಾಗಿರುವ `ನೀನುಂಟು ನಿನ್ನ ರೆಕ್ಕೆಗಳುಂಟು~ ಸಂಕಲನದಿಂದ ಆಯ್ದುಕೊಂಡಿದೆ.ಇದರಲ್ಲಿ ಮೊದಲಿಗೆ ನನ್ನ ಗಮನ ಸೆಳೆದ ವಿಚಾರವೆಂದರೆ, ಕವನದ ಶೀರ್ಷಿಕೆ; ಅನಂತರ ಆ ವಿಷಯವನ್ನು ಕವನವಾಗಿಸಿದ ಬಗೆ. `ಗಾರ್ಮೆಂಟ್ ಹುಡುಗಿ~ ಎಂದ ತಕ್ಷಣ ಇಂದು ನಗರ, ಮಹಾನಗರಗಳ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಕತ್ತೆತ್ತದೆ ಯಂತ್ರದೊಳಗೆ ಯಂತ್ರವಾಗಿ ದುಡಿಯುವ ಅಸಂಖ್ಯ ಮಹಿಳೆಯರ ಚಿತ್ರ ಕಣ್ಮುಂದೆ ಕಟ್ಟುತ್ತದೆ.ಕನಸುಗಳನ್ನು ಕಳೆದುಕೊಂಡ, ಕನಸುಗಳೇ ಹುಟ್ಟದಂಥ ಪರಿಸರದಲ್ಲಿ ಉಸಿರಾಡುವ ಗಾರ್ಮೆಂಟ್ ಹುಡುಗಿ ಹೊಲಿದುದು  `ಚೆಂದದ ಪೋಷಾಕು~! ಅವಳ ಶ್ರಮದಿಂದ ಅರಳಿದ ಸುಂದರ ಪೋಷಾಕುಗಳು ಯಾರದೋ ಮೈಮೇಲೆ ಥಳಥಳಿಸುತ್ತವೆ.

ತೊಡುವವರಿಗೆ ಕಾಣದ ಈ ಹೊಲಿದ ಕೈಗಳು-ಕೈಗಳ ಹಿಂದಿನ ವ್ಯಕ್ತಿಗಳು ಮತ್ತು ವ್ಯಕ್ತಿಗಳೊಳಗಿನ ದುಗುಡ-ದುಮ್ಮೋನಗಳು ಕವಯಿತ್ರಿಯನ್ನು ಕಾಡಿವೆ. ಈ ವೈರುದ್ಧ್ಯದತ್ತ ಲಕ್ಷ್ಯ ಹರಿದೊಡನೆ, ಗಾರ್ಮೆಂಟ್ ಹುಡುಗಿಯ ಸಂವೇದನೆಯೊಳಗೆ ಪ್ರವೇಶಿಸುವ ವೇದಿಕೆ ಸಿದ್ಧವಾಗುತ್ತದೆ.ಬಟ್ಟೆಯ ಕತ್ತರಿಸುವ ಕತ್ತರಿ

ಇವಳ ಕನಸುಗಳ ಕತ್ತರಿಸುತ್ತದೆ
ಎಂಬ ಆರಂಭದ ಸಾಲುಗಳು ಒಂದು ಸಹಜ ಧರ್ಮ ಮತ್ತು ಕ್ರೂರ ಧರ್ಮದ ಬಗ್ಗೆ ಗಮನ ನೀಡಲು ಒತ್ತಾಯಿಸುತ್ತವೆ. ಕತ್ತರಿಸುವುದು ಕತ್ತರಿಯ ಸಹಜ ಧರ್ಮ. ಆದರೆ ಅದು ಬಟ್ಟೆಯನ್ನು ಕತ್ತರಿಸುವಷ್ಟೇ ಸಹಜವಾಗಿ, ಯಾಂತ್ರಿಕವಾಗಿ ಅವಳ ಕನಸುಗಳನ್ನೂ ಕತ್ತರಿಸುತ್ತದೆ ಎಂದೊಡನೆ ಮಾನವನಿರ್ಮಿತ ಕ್ರೂರ, ಕೃತಕ ವ್ಯವಸ್ಥೆಗಳು ಮುನ್ನೆಲೆಗೆ ಬರುತ್ತವೆ.

ಇನ್ನೊಂದೆಡೆ, ಬಟ್ಟೆಯ ತುಂಡುಗಳನ್ನು ಜೋಡಿಸಿ ಹೊಲಿಯುವುದನ್ನು ರೂಢಿಸಿಕೊಂಡ ಅವಳ ಕೈಗಳು, ಅವಳ ಚಿಂದಿಯಾದ ಕನಸುಗಳನ್ನೂ ಜೋಡಿಸಿಕೊಂಡು ಹೊಲಿಯುವ ಶಕ್ತಿ ಹೊಂದಿರುವುದು ಗಮನಾರ್ಹ.ಕವನವು ಗಾರ್ಮೆಂಟ್ ಹುಡುಗಿಯರ ಭೌತಿಕ ನೆಲೆಯ ಶೋಷಣೆಯನ್ನು ಹಂತಹಂತವಾಗಿ ಕ್ಷಿಪ್ರತೆ ಮತ್ತು ತೀವ್ರತೆಯ ನೆಲೆಯಲ್ಲಿ ಚಿತ್ರಿಸಿ ಅಲ್ಲಿಗೆ ವಿರಮಿಸದೆ, ಅಂಥ ಅವರ ದಮನಿತ ಸ್ತರಗಳಲ್ಲೂ ಸ್ಥಾಯಿಯಾಗಿರುವ ಕುಸುರಿತನ, ಸೃಜನಶೀಲತೆ ಮತ್ತು ಪ್ರತಿರೋಧದ ಎಳೆಗಳ ಕಡೆಗೂ ಗಮನಹರಿಸಿದೆ.

ಹುಡುಗಿಯ ಬದುಕಿನ ನೆಲೆಯಲ್ಲಿ ಹೊಲಿಗೆಯ ಪರಿಕರಗಳು ದುಡಿಯುವ ಬಗೆಯಲ್ಲಿ ಹೊಸತನವಿದೆ. ಜಿಪ್ ಅವಳಂಥವರ ನೀರಡಿಕೆಗೇ ಜಿಪ್ ಎಳೆಯುವುದು, ಇಕ್ಕಟ್ಟುಗಳು ನಿರಿಗೆಗಳಾಗಿ ಮೂಡುವುದು, ಕಂದಮ್ಮಗಳಿಗೆ ಒದಗದ ಎದೆಹಾಲು ಬೆಳ್ಳನೆಯ ಲೇಸ್‌ಗಳಾಗಿ ಮೈದಳೆಯುವ,

ಮೇಲ್ವಿಚಾರಕನ ಕುರಿತು ಮೂಡಿದ ಪ್ರತಿರೋಧವು ತನ್ನ ಮೊನಚು ಕಳೆದುಕೊಂಡು ದುಂಡನೆಯ ಬಟನ್‌ಗಳಾಗುವ ಬಗೆಯು ದಮನ ಮತ್ತು ಕಲಾತ್ಮಕತೆಯ ನೆಲೆಗಳನ್ನು ಸಮಾನಾಂತರವಾಗಿ ಗ್ರಹಿಸಿದೆ.ಗಾರ್ಮೆಂಟ್ ಹುಡುಗಿಯರ ಬದುಕನ್ನೇ ಹೀರಿ ಸಿದ್ಧಗೊಂಡ ಚಿತ್ತಾರದ ಅಂಗಿ ರಫ್ತಿನ ಪೆಟ್ಟಿಗೆ ಸೇರಿ ಮಹಾನಗರಗಳ ಮಾರುಕಟ್ಟೆಯತ್ತ ನಡೆದರೆ, ಹುಡುಗಿ ಇಳಿಸಂಜೆ ತನ್ನ ಗುಡಿಸಲತ್ತ ನಡೆದಿದ್ದಾಳೆ. ಕತ್ತಲಲ್ಲಿ ಮೂಡಿದ ಚುಕ್ಕೆಗಳು ಅವಳಿಗೆ ಆಕಾಶದ ಹರಿದ ಬಟ್ಟೆಯಂತೆ ಕಾಣುತ್ತವೆ. ತುಣುಕು ತುಣುಕು ಬಟ್ಟೆಗಳನ್ನು ವಿಧವಿಧವಾಗಿ ಜೋಡಿಸಿ ಹೊಲಿದ ಅವಳ ಕೈಗಳು, ಆಕಾಶದ ಹರಿದ ಬಟ್ಟೆಯನ್ನೂ ಹೊಲಿಯಲು ಅನುವಾಗುತ್ತವೆ; ಅದಕ್ಕೆ ಅವಳ ಮನವೂ ಸಜ್ಜಾಗುತ್ತದೆ.ಪ್ರಸ್ತುತ ಕವನವು ಗಾರ್ಮೆಂಟ್ ಹುಡುಗಿಯ ವರ್ತಮಾನದ ದುರ್ಭರ ಸ್ಥಿತಿಯ ಅನಾವರಣವನ್ನು ಶ್ರದ್ಧೆಯಿಂದ ಮಾಡಿದರೂ, ಭವಿಷ್ಯದ ಆಶಾಭಾವದತ್ತ ಬೆನ್ನುಹಾಕಿಲ್ಲ. ಕವಿತೆ ಕೊನೆಯಾಗುವುದು ಮತ್ತೆ ಮೊದಲ ಸಾಲುಗಳ ಮೂಲಕ.

ಹೊಸ ಕನಸು ಹೊಲಿಯಲು ತವಕಿಸುವ ಹುಡುಗಿಯ ಕೈಗಳ ಚಿತ್ರ ದಮನಿತ ವರ್ಗದ ಕುರಿತ ಕವಯಿತ್ರಿಯ ಕಾಳಜಿ ಮತ್ತು ನಿಲುವನ್ನು ಸಶಕ್ತವಾಗಿ ಮುಂದಿಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry