ಕಾಶ್ಮೀರದಲ್ಲಿ ಹಿಮಪಾತ: 16 ಯೋಧರ ಸಾವು

7

ಕಾಶ್ಮೀರದಲ್ಲಿ ಹಿಮಪಾತ: 16 ಯೋಧರ ಸಾವು

Published:
Updated:

ಶ್ರೀನಗರ (ಪಿಟಿಐ): ಕಾಶ್ಮೀರ ಕಣಿವೆಯ ಬಂಡಿಪೊರ ಮತ್ತು ಗಂದರ್‌ಬಾಲ್ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಹಿಮಕುಸಿತ ಪ್ರಕರಣಗಳಲ್ಲಿ ಐವರು ಸೇನಾಧಿಕಾರಿಗಳು ಸೇರಿದಂತೆ ಒಟ್ಟು 16 ಯೋಧರು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.ಎರಡೂ ದುರ್ಘಟನೆಗಳು ಬುಧವಾರ ಸಂಭವಿಸಿವೆ. ಒಂದು ಬಂಡಿಪೊರ ಜಿಲ್ಲೆಯ ಗುರೆಜ್ ಕಣಿವೆಯಲ್ಲಿ ಸಂಭವಿಸಿದರೆ, ಮತ್ತೊಂದು ದುರ್ಘಟನೆ ಗಂದೆರ್‌ಬಾಲ್ ಜಿಲ್ಲೆಯ ಸೋನ ಮಾರ್ಗ್‌ನಲ್ಲಿ ನಡೆದಿದೆ.ಗುರೆಜ್ ಕಣಿವೆಯಲ್ಲಿ ನಡೆದ ದುರ್ಘಟನೆಯಲ್ಲಿ 13 ಯೋಧರು ಮೃತಪಟ್ಟಿದ್ದಾರೆ. ಇತರ ಮೂವರು  ಕಣ್ಮರೆಯಾಗಿದ್ದು, ಅವರು ಕೂಡ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಹಿಮದಲ್ಲಿ ಸಿಲುಕಿದ್ದ 13 ಯೋಧರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಲೆ.ಕರ್ನಲ್ ಜೆ.ಎಸ್ ಬ್ರಾರ್ ತಿಳಿಸಿದ್ದಾರೆ.ಬಂಡಿಪೊರ ಜಿಲ್ಲೆಯ ಗಡಿನಿಯಂತ್ರಣ ರೇಖೆ ಸಮೀಪದ ಗುರೆಜ್ ಕಣಿವೆಯ ದಾವರ್ ಪ್ರದೇಶದಲ್ಲಿದ್ದ ಸೇನೆಯ 109 ಇನ್‌ಫೆಂಟ್ರಿ ಬ್ರಿಗೇಡ್ ಶಿಬಿರದ ಮೇಲೆ ಏಕಾಏಕಿ ಹಿಮಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ದುರಂತ ಸಂಭವಿಸಿತ್ತಾದರೂ, ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ಗುರೆಜ್ ಕಣಿವೆಯು ಇತರ ಪ್ರದೇಶಗಳೊಂದಿಗೆ ಸಂಪರ್ಕ ಕಡಿದುಕೊಂಡಿತ್ತು. ಹಾಗಾಗಿ ದುರಂತದ ಬಗ್ಗೆ ಮಾಹಿತಿ ಗುರುವಾರ ಬೆಳಿಗ್ಗೆಯಷ್ಟೆ ತಿಳಿಯಿತು.`ಹಿಮಕುಸಿತದಿಂದಾಗಿ ಒಟ್ಟು 29 ಯೋಧರು ಹಿಮದಲ್ಲಿ ಸಿಕ್ಕಿಹಾಕಿಕೊಂಡಿದ್ದರು. 13 ಶವಗಳನ್ನು ಹೊರತೆಗೆಯಲಾಗಿದೆ. 13 ಯೋಧರನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ಯೋಧರು ನಾಪತ್ತೆಯಾಗಿದ್ದಾರೆ~ ಎಂದು ಸೇನಾ ವಕ್ತಾರ ಕರ್ನಲ್ ಗೇರೆವಾಲ್ ಹೇಳಿದ್ದಾರೆ. ಹಿಮಕುಸಿತದಿಂದಾಗಿ  25 ಸೇನಾ ವಾಹನಗಳಿಗೆ ಮತ್ತು  17 ಸೇನಾ ಶಿಬಿರಗಳಿಗೆ ಹಾನಿಯಾಗಿವೆ ಎಂದು ರಾಜ್ಯ ಆಪತ್ತು ನಿರ್ವಹಣಾ ಘಟಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.ಮತ್ತೊಂದು ಪ್ರಕರಣ: ಗಂದೆರ್‌ಬಾಲ್ ಜಿಲ್ಲೆಯ ಸೋನಮಾರ್ಗ್  ಪ್ರದೇಶದಲ್ಲಿ ಬುಧವಾರ ಸಂಜೆ ಸಂಭವಿಸಿದ ಮತ್ತೊಂದು ಹಿಮಕುಸಿತದಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ ಎಂದು ಸೇನಾ ವಕ್ತಾರ ಗೇರೆವಾಲ್ ಹೇಳಿದ್ದಾರೆ. 162 ಪ್ರಾದೇಶಿಕ ಸೈನ್ಯದ ಶಿಬಿರದ ಮೇಲೆ ಹಿಮಕುಸಿದ ಪರಿಣಾಮ ಈ ದುರಂತ ಸಂಭವಿಸಿದೆ.`ಮೂವರು ಯೋಧರ ಶವಗಳನ್ನು ಹೊರತೆಗೆಯಲಾಗಿದ್ದು, ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ಈ ಘಟನೆಯಲ್ಲಿ ಯಾರೂ ಕಣ್ಮರೆಯಾಗಿಲ್ಲ~ ಎಂದು ಅವರು ಹೇಳಿದ್ದಾರೆ.ಒಮರ್ ಸಂತಾಪ:  ದುರ್ಘಟನೆಯಲ್ಲಿ 16 ಯೋಧರು ಮೃತಪಟ್ಟಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry