ಶುಕ್ರವಾರ, ಮೇ 14, 2021
35 °C
ಪನೂನ್ ಕಾಶ್ಮೀರ ಸಂಸ್ಥೆ ಆರೋಪ

ಕಾಶ್ಮೀರದ ಮಾಜಿ ಉಗ್ರರಿಗೆ ಪುನರ್ವಸತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಯೋತ್ಪಾದನೆಯ ತರಬೇತಿ ಪಡೆಯಲು 25 ವರ್ಷಗಳ ಹಿಂದೆ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಮಾಜಿ ಉಗ್ರರನ್ನು, ಅಕ್ರಮ ಮಾರ್ಗದಲ್ಲಿ ಕರೆತಂದು ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪನೂನ್ ಕಾಶ್ಮೀರ ಸಂಸ್ಥೆ ಆರೋಪಿಸಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಆಶ್ವಾನಿ ಚೃಂಜೂ, ಮಾಜಿ ಉಗ್ರರನ್ನು ಪಾಕಿಸ್ತಾನದಿಂದ ಕರೆತಂದು ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಆದರೆ ಆ ನಿಯಮಗಳನ್ನು ಗಾಳಿಗೆ ತೂರಿರುವ ರಾಜ್ಯ ಸರ್ಕಾರ ಈಗಾಗಲೇ 2014 ಮಂದಿ ಮಾಜಿ ಉಗ್ರರನ್ನು ನೇಪಾಳದ ಮೂಲಕ ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಅಕ್ರಮ ಮಾರ್ಗದಲ್ಲಿ ಕರೆತರಲಾಗಿದೆ ಎಂದರು.ಇನ್ನು ಮೂರು ವರ್ಷಗಳಲ್ಲಿ 50 ಸಾವಿರ ಮಾಜಿ ಉಗ್ರರನ್ನು ಕಾಶ್ಮೀರಕ್ಕೆ ಕರೆತಂದು ಪುನರ್ವಸತಿ ಕಲ್ಪಿಸಲು ಹಾಗೂ ನೇಪಾಳದಿಂದ ಕಾಶ್ಮೀರಕ್ಕೆ ಬರುವ ಅಕ್ರಮ ಮಾರ್ಗವನ್ನು ನಿಗದಿತ ಮಾರ್ಗವನ್ನಾಗಿ ಬದಲಾಯಿಸಲು ಕಾಶ್ಮೀರದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಉಗ್ರರು ಬಹಳ ಸುಲಭವಾಗಿ ಭಾರತವನ್ನು ಪ್ರವೇಶಿಸುತ್ತಾರೆ. ಇದರಿಂದ ನಮ್ಮ ದೇಶದಲ್ಲಿ ಉಗ್ರರ ಅಟ್ಟಹಾಸ ಇನ್ನಷ್ಟು ಹೆಚ್ಚುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ದೇಶದ ನಾಗರಿಕರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ ಪನೂನ್ ಕಾಶ್ಮೀರ ಸಂಸ್ಥೆ ವಿವಿಧ ರಾಜ್ಯಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರ ಅಂಗವಾಗಿ ಇದೇ 15ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ ಮಧ್ಯಾಹ್ನ 3ಗಂಟೆಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು. ಸಂಸ್ಥೆಯ ರಾಜ್ಯ ಸಂಯೋಜಕ ಒಪೆಂದರ್ ಬಾಲಿ ಮಾತನಾಡಿ, `ಭಾರತದ ಪ್ರಜೆಗಳಾಗಿರುವ ನಾವು (ಕಾಶ್ಮೀರಿ ಪಂಡಿತರು) ಕಳೆದ 23 ವರ್ಷಗಳಿಂದ ನಮ್ಮ ದೇಶದಲ್ಲೇ ನಿರಾಶ್ರಿತರಾಗಿ ಜೀವಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯ್ಲ್ಲಲೂ ಜಮ್ಮು ಕಾಶ್ಮೀರದ ಸರ್ಕಾರ ನಮ್ಮನ್ನು ವಿರೋಧಿಗಳಂತೆ ಕಾಣುತ್ತಿದೆ. ರಾಜ್ಯ ಸರ್ಕಾರದ ಈ ಧೋರಣೆ ಬದಲಾಗಿ ಕಾಶ್ಮೀರದಲ್ಲಿನ ನಮ್ಮ ಮೂಲ ಸ್ಥಳಗಳಲ್ಲಿ ನಮಗೆ ಮತ್ತೆ ವಾಸಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಶಾಂತಿಯುತವಾಗಿ ಮಾಡಬಹುದಾದ ಎಲ್ಲಾ ರೀತಿಯ ಪ್ರತಿಭಟನೆ ಹಾಗೂ ಪ್ರಯತ್ನಗಳನ್ನು ನಾವು ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.