ಬುಧವಾರ, ಜನವರಿ 22, 2020
22 °C

ಕಾಶ್ಮೀರ ಕಣಿವೆಯಲ್ಲಿ ಭಾರಿ ಹಿಮಪಾತ; ವಿಮಾನ, ರೈಲು ಸಂಚಾರಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಜಮ್ಮು (ಪಿಟಿಐ/ಐಎಎನ್‌ಎಸ್): ಉತ್ತರ ಭಾರತದಲ್ಲಿ ಶೀತ ವಾತಾವರಣ ಮುಂದುವರಿದಿದೆ. ದಟ್ಟ ಮಂಜು ಮುಸುಕಿರುವ ಕಾರಣ ಬೆಳಿಗ್ಗೆ ದೆಹಲಿಯಿಂದ ಹಲವಾರು ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದವು.ಕಣಿವೆ ರಾಜ್ಯ ಜಮ್ಮು - ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಸಂಕಷ್ಟದಲ್ಲಿ ಸಿಲುಕಿದ್ದ 130ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಬೆಟ್ಟ ಪ್ರದೇಶದ ಜನವಸತಿ ಪ್ರದೇಶಗಳಿಗೆ ಭಾರತೀಯ ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಆಹಾರ ಧಾನ್ಯ ವಿತರಣೆ ಮಾಡುತ್ತಿದೆ. ಲೇಹ್‌ನಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 19.9 ಡಿಗ್ರಿಗೆ ಕುಸಿದಿದೆ.

ರಾಜಧಾನಿ ದೆಹಲಿಯಲ್ಲಿ ನಸುಕಿನಲ್ಲಿ ದಟ್ಟ ಮಂಜು ಮುಸುಕಿದ ಕಾರಣ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಕನಿಷ್ಠ 250 ವಿಮಾನಗಳು ಹಾರಾಟಕ್ಕೆ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾಯುವಂತಾಯಿತು.ಬೆಳಿಗ್ಗೆ 9.30ರ ವರೆಗೆ ಯಾವುದೇ ವಿಮಾನ ಮೇಲಕ್ಕೇರುವುದಕ್ಕೆ ಅನುಮತಿ ನೀಡಿರಲಿಲ್ಲ. 207 ದೇಶೀಯ ಹಾಗೂ 43 ಅಂತರರಾಷ್ಟ್ರೀಯ ವಿಮಾನ ಹಾರಾಟ ವಿಳಂಬವಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.ಬೆಳಗಿನ ಅವಧಿಯಲ್ಲಿ ನಾಲ್ಕು ವಿಮಾನಗಳ ಮಾರ್ಗ ಬದಲಾಯಿಸಲಾಯಿತು. ಜತೆಗೆ 17 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.ಬೆಳಿಗ್ಗೆ ನಾಲ್ಕುಗಂಟೆಯಿಂದ ಐದು ಗಂಟೆಯ ಮಧ್ಯದ ಅವಧಿಯಲ್ಲಿ ನಿಲ್ದಾಣಕ್ಕೆ ಬಂದ ಜೆಟ್ ಏರ್‌ವೇಸ್‌ನ ಎರಡು ಹಾಗೂ ಸ್ಪೈಸ್ ಜೆಟ್‌ನ ಎರಡು ವಿಮಾನಗಳನ್ನು ಬೇರೆ ನಿಲ್ದಾಣಕ್ಕೆ ಹೋಗುವಂತೆ ಸೂಚಿಸಲಾಯಿತು.

ರೈಲು ಸಂಚಾರ: ಉತ್ತರ ರೈಲ್ವೆ 35 ರೈಲುಗಳ ಸಂಚಾರವನ್ನು ರದ್ದುಪಡಿಸಿತು. 40 ರೈಲುಗಳು ವಿಳಂಬವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಯಿತು.ಆಗ್ರಾ ವರದಿ: ವಿಶ್ವಪ್ರಸಿದ್ಧ ತಾಜ್ ಮಹಲ್ ಇರುವ ಆಗ್ರಾದಲ್ಲಿಯೂ ಬುಧವಾರ ದಟ್ಟ ಮಂಜು ಕವಿದಿದ್ದು, ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಆಗ್ರಾದಲ್ಲಿ 7.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದೇ ರೀತಿಯ ಹವಾಮಾನ ಗುರುವಾರವೂ ಮುಂದುವರೆಯಲಿದ್ದು, ಉಷ್ಣಾಂಶ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಟ್ಟ ಮಂಜು ಮುಸುಕಿದ ಕಾರಣ ರೈಲು ಸಂಚಾರದಲ್ಲಿಯೂ ಅಡಚಣೆ ಉಂಟಾಗಿದೆ.

ಹಿಮಪಾತ  (ಶ್ರೀನಗರ ವರದಿ): ಜಮ್ಮು -ಕಾಶ್ಮೀರದ ವಿವಿಧೆಡೆ ಹಿಮಪಾತದಲ್ಲಿ ಸಿಲುಕಿದ್ದ 130ಕ್ಕೂ ಹೆಚ್ಚು ಜನರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ.

ರಾಮ್‌ಬನ್ ಜಿಲ್ಲೆಯಲ್ಲಿ ಹಿಮಪಾತದಲ್ಲಿ ಸಿಲುಕಿದ್ದ 28ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)