ಕಾಶ್ಮೀರ ಗಡಿಯಲ್ಲಿ ನಾಯಕರ ಬಂಧನ

7

ಕಾಶ್ಮೀರ ಗಡಿಯಲ್ಲಿ ನಾಯಕರ ಬಂಧನ

Published:
Updated:

ಲಖನ್‌ಪುರ (ಜಮ್ಮು ಕಾಶ್ಮೀರ) (ಪಿಟಿಐ, ಐಎಎನ್‌ಎಸ್): ಜಮ್ಮು ಕಾಶ್ಮೀರ ಸರ್ಕಾರದ ನಿರಾಕರಣೆ ನಡುವೆಯೂ ಗಣರಾಜ್ಯೋತ್ಸವ ದಿನ ತ್ರಿವರ್ಣ ಧ್ವಜ ಹಾರಿಸಲೆಂದು ಶ್ರೀನಗರದ ಲಾಲ್‌ಚೌಕಕ್ಕೆ ತೆರಳುತ್ತಿದ್ದ ಬಿಜೆಪಿಯ ಪ್ರಮುಖರೂ ಸೇರಿದಂತೆ 300ಕ್ಕೂ ಹೆಚ್ಚು ಕಾರ್ಯಕರ್ತರನ್ನು ಮಂಗಳವಾರ ರಾಜ್ಯದ ಗಡಿ ಭಾಗದಲ್ಲೇ ಬಂಧಿಸಲಾಯಿತು. ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತಕುಮಾರ್ ಬಂಧಿತರಲ್ಲಿ ಸೇರಿದ್ದಾರೆ.

ಪಂಜಾಬ್ ಗಡಿಗೆ ಹೊಂದಿಕೊಂಡಿರುವ ಜಮ್ಮು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿತ್ತು.ಇದನ್ನು ಉಲ್ಲಂಘಿಸಿದ ಆರೋಪದಡಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಯಿತು.

ಇದಕ್ಕೆ ಮುನ್ನ, ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗುತ್ತಾ ಮುನ್ನುಗ್ಗಿದ ಬಿಜೆಪಿಯ 500ಕ್ಕೂ ಹೆಚ್ಚು ಕಾರ್ಯಕರ್ತರು ಪಂಜಾಬ್ ಕಡೆಯಿಂದ ಜಮ್ಮು ಕಾಶ್ಮೀರ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಅವರನ್ನು ತಡೆಯಲೆಂದು ಪೊಲೀಸರು ಹಾಕಿದ್ದ ‘ಬೇಲಿ’ಗಳನ್ನು ಕಿತ್ತೆಸೆದರು. ‘ಭಾರತ್ ಮಾತಾ ಕಿ ಜೈ’, ‘ಲಾಲ್ ಚೌಕ್ ಜಾಯೇಂಗೆ (ಲಾಲ್ ಚೌಕ್‌ಗೆ  ಹೋಗುತ್ತೇವೆ) ಎಂಬ ಘೋಷಣೆಗಳನ್ನು ಕೂಗಿದರು. ಬಿಜೆಪಿ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಅಧ್ಯಕ್ಷ ಅನುರಾಗ್ ಥಾಕೂರ್ ಇದರ ನೇತೃತ್ವ ವಹಿಸಿದ್ದರು.

ಪಂಜಾಬ್‌ನ ಗಡಿಯಲ್ಲಿ ರಾವಿ ನದಿಗೆ ಅಡ್ಡವಿರುವ ಲಖನ್‌ಪುರ ಸೇತುವೆ ದಾಟಿ ಜಮ್ಮು ಕಾಶ್ಮೀರ ಗಡಿಯೊಳಕ್ಕೆ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯದ ಸಂಕೇತ ತೋರಿ ಹರ್ಷಿಸಿದರು. ‘ನಾವು ಜಮ್ಮು ಕಾಶ್ಮೀರ ಪ್ರವೇಶಿಸಿರುವುದರಿಂದ ನಮ್ಮನ್ನು ತಡೆಯಲು ಶತಪ್ರಯತ್ನ ಮಾಡಿದ ಹಾಗೂ ನಿರಂಕುಶ ಧೋರಣೆ ತಳೆದ ಸರ್ಕಾರಕ್ಕೆ ಮುಖಭಂಗವಾಗಿದೆ’ ಎಂದು ಸುಷ್ಮಾ  ಸ್ವರಾಜ್ ಹೇಳಿದರು.

ಸೇತುವೆಯ ಮತ್ತೊಂದು ತುದಿಯಾದ ಪಂಜಾಬ್‌ನ ಮಾಧೋಪುರದಲ್ಲಿ 2000ದಷ್ಟು ಬಿಜೆಪಿ ಕಾರ್ಯಕರ್ತರು ಜಮ್ಮು ಕಾಶ್ಮೀರ ಪ್ರವೇಶಿಸುವ ಸಲುವಾಗಿ ಜಮಾಯಿಸಿದ್ದಾರೆ. ಕೆಲವು ಬಿಜೆಪಿ ಕಾರ್ಯಕರ್ತರನ್ನು ಬಸ್ಸಿಗೆ ತುಂಬಿಕೊಂಡು ರಹಸ್ಯ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಅಮೃತಸರದ ಸಂಸದರಾದ ಮಾಜಿ ಕ್ರಿಕೆಟ್ ಪಟು ನವಜೋತ್ ಸಿಂಗ್ ಸಿಧು ಕೂಡ ಇಲ್ಲಿಗೆ ಬಂದಿದ್ದಾರೆಂದು ಹೇಳಲಾಗಿದೆ.ಈ ಬೆಳವಣಿಗೆಗಳ ಮಧ್ಯೆ ಅತ್ತ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ ರಾಜ್ಯಪಾಲ ಎನ್.ಎನ್.ವ್ಹೋರಾ ಅವರನ್ನು ಭೇಟಿಯಾಗಿ ಒಂದೂವರೆ ಗಂಟೆ ಕಾಲ ಚರ್ಚಿಸಿದರು. ರಾಜಭವನದಲ್ಲಿ ನಡೆದ ಈ ಭೇಟಿ ವೇಳೆ ಭದ್ರತೆ, ಆಡಳಿತ ಸ್ಥಿತಿ ಹಾಗೂ ಕಾನೂನು- ಸುವ್ಯವಸ್ಥೆ ಕುರಿತು ಚರ್ಚೆ ನಡೆಯಿತು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಶ್ರೀನಗರದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಲಾಲ್‌ಚೌಕಕ್ಕೆ ಹೊರಟಿದ್ದ ನಾಲ್ವರು ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಒಳಬರುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಿವಾದಾತ್ಮಕ ಸ್ಥಳ ಲಾಲ್‌ಚೌಕದಲ್ಲಿ ಸಹ ಮಂಗಳವಾರ ಬೆಳಿಗ್ಗೆಯಿಂದ ಬಂದೋಬಸ್ತ್ ಮಾಡಲಾಗಿದೆ.ಈ ಮಧ್ಯೆ ಪ್ರತ್ಯೇಕತಾವಾದಿ ಜೆಕೆಎಲ್‌ಎಫ್ ಮುಖ್ಯಸ್ಥ ಮೊಹಮ್ಮದ್ ಯಾಸಿನ್ ಮಲಿಕ್ ಪೊಲೀಸರಿಂದ ಬಂಧನಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಭೂಗತರಾಗಿದ್ದಾರೆಂದು ಹೇಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry