ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ

7

ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ

Published:
Updated:
ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ

ಶ್ರೀನಗರ: ಸಂಸತ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ  ಗುರಿಯಾಗಿರುವ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕು ಎಂದು ಕೋರಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಗೊತ್ತುವಳಿಯು ಬುಧವಾರ ಆಡಳಿತ ಪಕ್ಷ ಮತ್ತು ಪ್ರತಿ ಪಕ್ಷಗಳ ನಡುವಿನ ಗದ್ದಲದ ನಡುವೆ ಚರ್ಚೆಗೆ ಬರಲಿಲ್ಲ.ಪ್ರತಿಪಕ್ಷ ಮತ್ತು ಆಡಳಿತ ಸದಸ್ಯರ ನಡುವಿನ ರಂಪಾಟದಿಂದಾಗಿ ಸ್ಪೀಕರ್ ಮೊಹಮ್ಮದ್ ಅಕ್ಬರ್ ಲೋನೆ ಅವರು ಸದನವನ್ನು ಮೂರು ಬಾರಿ ಮುಂದೂಡಬೇಕಾಯಿತು.

 

ಗಲ್ಲುಶಿಕ್ಷೆಗೆ ಗುರಿಯಾದ ಅಫ್ಜಲ್‌ಗೆ ಕ್ಷಮಾದಾನ ನೀಡಬೇಕೆಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ಮನವಿ ಮಾಡುವ ಗೊತ್ತುವಳಿಯನ್ನು  ಪಕ್ಷೇತರ ಶಾಸಕ ರಶೀದ್ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯ ಬಳಿಕ ಮಂಡಿಸಬೇಕಿತ್ತು.ಆದರೆ, ಪ್ರಶ್ನೋತ್ತರ ಕಲಾಪ ಆರಂಭಗೊಂಡ ತಕ್ಷಣ ಗೊತ್ತುವಳಿ ಮಂಡನೆ ರಾಷ್ಟ್ರ-ವಿರೋಧಿ ಕೃತ್ಯವಾಗಿರುವುದರಿಂದ ಅದನ್ನು ಕಲಾಪದ ಪಟ್ಟಿಯಿಂದ ಕೈ ಬಿಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಮಾತ್ರವಲ್ಲದೇ ಘೋಷಣೆಗಳನ್ನು ಕೂಗುತ್ತಾ ಸ್ಪೀಕರ್ ಪೀಠದ ಮುಂದೆ ತೆರಳಿ ಗದ್ದಲ ನಡೆಸಿದರು.ಇದಕ್ಕೆ ಪ್ರತಿಯಾಗಿ, ಈ ಹಿಂದಿನ ಅಧಿವೇಶನದಲ್ಲಿ ಕೆಲವು ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಬಿಜೆಪಿಯಿಂದ ಉಚ್ಚಾಟನೆಗೊಂಡ ಅಥವಾ ಅಮಾನತುಗೊಂಡ ಏಳು ಶಾಸಕರನ್ನು ಸದನದಿಂದ ಅಮಾನತುಗೊಳಿಸಬೇಕೆಂದು ಸಚಿವರೂ ಸೇರಿ ಕಾಂಗ್ರೆಸ್ ಶಾಸಕರು ಆಗ್ರಹಿಸಿದರು.ಬಿಜೆಪಿ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಶಾಸಕರು ಕೂಡ ಸ್ಪೀಕರ್ ಪೀಠದ ಮುಂಭಾಗಕ್ಕೆ ತೆರಳಿ ಮತ್ತಷ್ಟು ಗದ್ದಲ ಎಬ್ಬಿಸಿದರು.ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಹೋದಾಗ ಸ್ಪೀಕರ್ ಸದನವನ್ನು 30 ನಿಮಿಷಗಳ ಕಾಲ ಮುಂದೂಡಿದರು.ಮತ್ತೆ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರೆಯಿತು. ನಂತರ ಅನಿವಾರ್ಯವಾಗಿ ಸ್ಪೀಕರ್ ಸದನವನ್ನು ಗುರುವಾರಕ್ಕೆ ಮುಂದೂಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry