ಮಂಗಳವಾರ, ಮೇ 24, 2022
27 °C

ಕಾಶ್ಮೀರ ಸದನದಲ್ಲಿ ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ(ಪಿಟಿಐ): ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕರ್ತನೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಸತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕಲ್ಪಿಸದ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯ ಸ್ಪೀಕರ್ ಕ್ರಮವನ್ನು ಖಂಡಿಸಿ, ಪ್ರಮುಖ ವಿರೋಧ ಪಕ್ಷ ಪಿಡಿಪಿ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಘಟನೆ ಸೋಮವಾರ ನಡೆಯಿತು.ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕರ್ತ ಪೊಲೀಸ್ ವಶದಲ್ಲಿದ್ದ ಸಂದರ್ಭದಲ್ಲಿ ಸತ್ತ ಘಟನೆಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಅವಧಿಯನ್ನು ರದ್ದು ಪಡಿಸಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಪಿಡಿಪಿ ಒತ್ತಾಯ ಮಾಡಿತು. ಆದರೆ ಪಿಡಿಪಿ ಶಾಸಕರ ಬೇಡಿಕೆಯನ್ನು ಸ್ಪೀಕರ್ ಮೊಹ್ಮದ್ ಅಕ್ಬರ್ ಲೊನ್ ಅವರು ತಿರಸ್ಕರಿಸಿದರು.

 

ಸೆ.30ರಂದೇ ಪಿಡಿಪಿ ನಿಲುವಳಿ ಸೂಚನೆ ನೋಟಿಸ್ ನೀಡಿದ್ದು, ಸೆ.30ರಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕರ್ತ ಸೈಯದ್ ಮೊಹ್ಮದ್ ಯೂಸುಫ್ ಸಂಶಯಾಸ್ಪದ ಸಾವಿನ ಕುರಿತು ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿತ್ತು.

 

ಪ್ರಶ್ನೋತ್ತರ ಅವಧಿಯನ್ನು ರದ್ದು ಪಡಿಸಿ ನಿಲುವಳಿ ಸೂಚನೆ ಚರ್ಚೆಗೆ ಸ್ಪೀಕರ್ ಸಮ್ಮತಿಸದ ಕಾರಣ ಪಿಡಿಪಿ ಸದಸ್ಯರು ಸಭೆಯಲ್ಲಿ ಕೋಲಾಹಲ ಸೃಷ್ಟಿಸಿದರು.  ಫ್ಯಾನ್ ಕಿತ್ತು ಸ್ಪೀಕರ್ ಅವರತ್ತ ಎಸೆದದ್ದೇ ಅಲ್ಲದೆ, ಮೇಜಿನ ಮೇಲೆ ಕೈ ಸಿಕ್ಕ ವಸ್ತುಗಳನ್ನೆಲ್ಲಾ ಅತ್ತಿತ್ತ ಎಸೆಯಲಾಯಿತು. ಹಾಗಾಗಿ ಮೂರುಂಟೆಗಳ ಅವಧಿಯಲ್ಲಿ ಸಭೆಯನ್ನು ಮೂರು ಬಾರಿ ಮುಂದೂಡಲಾಯಿತು.ಯೂಸುಫ್ ಸಾವಿನ ಕುರಿತು ರಾಜ್ಯ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದು, ನಿಲುವಳಿ ಸೂಚನೆಗೆ ಅವಕಾಶ ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ ಎಂದು ಸ್ಪೀಕರ್ ಹೇಳಿ ಪಿಡಿಪಿ ಸದಸ್ಯರ ಬೇಡಿಕೆಯನ್ನು ತಿರಸ್ಕರಿಸಿ ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.