ಕಾಶ್ಮೀರ ಸಮಸ್ಯೆ: ಯುದ್ಧ ಸಾಧ್ಯತೆ ತಳ್ಳಿಹಾಕಿದ ಗಿಲಾನಿ

7

ಕಾಶ್ಮೀರ ಸಮಸ್ಯೆ: ಯುದ್ಧ ಸಾಧ್ಯತೆ ತಳ್ಳಿಹಾಕಿದ ಗಿಲಾನಿ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್):  ಕಾಶ್ಮೀರ ಸಮಸ್ಯೆಗೆ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕೇ ಹೊರತು ಯುದ್ಧದಿಂದ ಅಲ್ಲ ಎಂದು ಪಾಕಿಸ್ತಾನ ಪ್ರಧಾನಿ ಯುಸೂಫ್ ರಜಾ ಗಿಲಾನಿ ಅವರು ಸ್ಪಷ್ಟಪಡಿಸಿದ್ದಾರೆ.ಕಾಶ್ಮೀರ ವಿಷಯವಾಗಿ ಉಭಯ ರಾಷ್ಟ್ರಗಳು ಇದುವರೆಗೂ ನಾಲ್ಕು ಯುದ್ಧ ಮಾಡಿವೆ. 21ನೇ ಶತಮಾನದಲ್ಲಿಯೂ ಇದೇ ವಿಷಯವಾಗಿ ಮತ್ತೊಂದು ಯುದ್ಧವನ್ನು ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.ಭಾನುವಾರ ಇಲ್ಲಿ ನಡೆದ ಕಾಶ್ಮೀರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಶ್ಮೀರಿಗಳಿಗೆ ಅಗತ್ಯವಿರುವ ಎಲ್ಲ ನೈತಿಕ, ರಾಜಕೀಯ ಮತ್ತು ರಾಜತಾಂತ್ರಿಕ ನೆರವನ್ನು ಮುಂದುವರಿಸುವ ಬದ್ಧತೆ ಹೊಂದಿರುವುದಾಗಿ ಅಭಯ ನೀಡಿದರು. ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಇಡೀ ರಾಷ್ಟ್ರ ಮತ್ತು ಎಲ್ಲ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಟ್ಟಾಗಿ ನಿಲ್ಲುತ್ತವೆ. ಕಾಶ್ಮೀರ ಸಮಸ್ಯೆ ಪಾಕಿಸ್ತಾನದ ವಿದೇಶಾಂಗ ನೀತಿಯಲ್ಲಿ ಆದ್ಯತೆಯ ವಿಷಯವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಹಿತಾಸಕ್ತಿ, ಪ್ರಜ್ಞೆಯನ್ನು ಗಮನದಲ್ಲಿರಿಸಿಕೊಂಡು ಪಾಕ್ ವಿದೇಶಾಂಗ ನೀತಿಯನ್ನು ರೂಪಿಸಲಾಗುತ್ತಿದೆಯೇ ಹೊರತು ಈ ಹಿಂದಿನಂತೆ ಯಾವುದೇ ಒಬ್ಬ ವ್ಯಕ್ತಿ ವಿದೇಶಾಂಗ ನೀತಿಯನ್ನು ರೂಪಿಸಿಲ್ಲ ಎಂದು ಗಿಲಾನಿ ಹೇಳಿದರು.ಭಾರತಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಪ್ರಸ್ತಾಪಿಸಿದ ಅವರು, ಇದು ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದೆ. ನೂರು ರಾಷ್ಟ್ರಗಳಿಗೆ ಈ ಸ್ಥಾನಮಾನ ನೀಡಲಾಗಿದೆ. ಅದರಲ್ಲಿ ಭಾರತವೂ ಒಂದು. ಹಾಗಂತ ನಾವು ಕಾಶ್ಮೀರ ಸಮಸ್ಯೆಯಿಂದ ಹಿಂದೆ ಸರಿದಂತೆ ಎಂದು ಭಾವಿಸುವ ಅಗತ್ಯವಿಲ್ಲ ಎಂದು ಗಿಲಾನಿ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry