ಕಾಶ್ಮೀರ ಹೊಸ ಬಿಕ್ಕಟ್ಟು

7

ಕಾಶ್ಮೀರ ಹೊಸ ಬಿಕ್ಕಟ್ಟು

Published:
Updated:

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ರಾಜಕೀಯ ಸಮಸ್ಯೆಯೊಂದು ತಲೆದೋರಿದೆ. ಹಳ್ಳಿಯ ಮಟ್ಟದ್ಲ್ಲಲೂ ಆಡಳಿತದ ಚುಕ್ಕಾಣಿ ಹಿಡಿದ ಸರಪಂಚರು (ವಿಲೇಜ್ ಅಕೌಂಟೆಂಟ್‌ಗಳು) ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ.   ಭಯೋತ್ಪಾದನೆ ಹಾಗೂ ರಾಜಕೀಯ ಅಸ್ಥಿರತೆಯಿಂದಾಗಿ ಈಗಾಗಲೇ ಕುಗ್ಗಿಹೋಗಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಇಂತಹ ಒಂದು ಸಮಸ್ಯೆಯೊಂದನ್ನು ಎದುರಿಸಬೇಕಾಗುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಈಗಾಗಲೇ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಪಿ.ಡಿ.ಪಿ. ಭಯೋತ್ಪಾದಕರ ಜೊತೆ ಪ್ರತ್ಯೇಕತಾವಾದಿಗಳ ಬೆಂಬಲಕ್ಕೆ ನಿಂತಿದೆ.  ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ ಸಮಸ್ಯೆಯ ಸುರಿಮಳೆಯನ್ನೇ ಎದುರಿಸುತ್ತಾ  ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಒಮರ್ ಅಬ್ದುಲ್ಲಾಗೆ ಮುಂದಿನ ದಿನಗಳಲ್ಲಿ ಬೆಂಬಲ ನೀಡಬೇಕೋ ಬೇಡವೋ ಎನ್ನುವ ಸಂದಿಗ್ಧ ಸ್ಥಿತಿ ಎದುರಿಸುತ್ತಿದೆ.ಈಗ ಸರಪಂಚರ ರಾಜೀನಾಮೆಯ ಸಮಸ್ಯೆಗೆ, ಜಮ್ಮು ಹಾಗೂ ಕಾಶ್ಮೀರದಲ್ಲಿ  ಹೆಚ್ಚುತ್ತಿರುವ ಪ್ರತ್ಯೇಕತೆಯ ಕೂಗು ಹಾಗೂ ಭಯೋತ್ಪಾದನೆಯ ಸಮಸ್ಯೆಯೂ ತಳುಕು ಹಾಕಿಕೊಂಡಿರುವುದು ಸಮಸ್ಯೆಯನ್ನು ಕಗ್ಗಂಟಾಗಿಸಿದೆ.ಸಾಮೂಹಿಕ ರಾಜೀನಾಮೆಯ ಪ್ರಕ್ರಿಯೆ ಪ್ರಾರಂಭವಾದ ಕೆಲವೇ ದಿನಗಳ ಹಿಂದೆ ಕಾಶ್ಮೀರ ಪ್ರಾಂತ್ಯದ ಬಾರಾಮುಲ್ಲಾ ಜಿಲ್ಲೆಯ ವಗೋರಾದಲ್ಲಿ ಇನ್ನೂ ಪತ್ತೆ ಹಚ್ಚಲಾಗದ ಬಂದೂಕುಧಾರಿಗಳು ತನ್ನ ವೃತ್ತಿಯಲ್ಲಿ ಯಾವುದೇ ವಿವಾದವನ್ನು ಎದುರಿಸದಿದ್ದ ಮುಗ್ಧ ಸರಪಂಚನನ್ನು ಹತ್ಯೆ ಮಾಡಿದರು.  ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ  ಪಲ್ಹಾಲ್ಲನ್ ಪಟ್ಟಾನ್ ಜಿಲ್ಲೆಯಲ್ಲಿ ಮತ್ತೊಬ್ಬ ಸರಪಂಚ ಬಂದೂಕುಧಾರಿಗಳಿಗೆ ಬಲಿಯಾದ. ಇಡೀ ರಾಜ್ಯದಲ್ಲಿ ಸರಪಂಚರಾಗಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ವಿಚಲಿತಗೊಳಿಸಲೆಂದೇ ಈ ಹತ್ಯೆಗಳು ನಡೆದವು. ಭಯೋತ್ಪಾದಕರ ಈ ಹೊಸ ತಂತ್ರ ಫಲಕೊಟ್ಟಿತು. ಸರ್ಕಾರ ಸರಪಂಚರ ರಕ್ಷಣೆಗೆ ಲಕ್ಷ್ಯ ಕೊಡಲಿಲ್ಲ. ಅವರಿಗೆ ಭದ್ರತೆ ಕೊಡುವ ಬಗ್ಗೆಯೂ ಗಮನ ಕೊಡಲಿಲ್ಲ.  ಈ ಹತ್ಯೆಯನ್ನು ಸಾಮಾನ್ಯ ಘಟನೆ ಎನ್ನುವಂತೆ ನಿರ್ಲಕ್ಷಿಸಿದ್ದು ಸರಪಂಚರಿಗೆ ಅಭದ್ರತೆ ಕಾಡಲು ಕಾರಣವಾಗಿ ಅವರು ಸಾಮೂಹಿಕ ರಾಜೀನಾಮೆಗೆ ಮುಂದಾದರು. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಬದಲು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬಿಹಾರ ಹಾಗೂ ಇತರ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಅಪಹರಣ ಹಾಗೂ ಹತ್ಯೆಯ ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ ನಮ್ಮ ರಾಜ್ಯದಲ್ಲಿ ಕೇವಲ ಮೂವರು ಸರಪಂಚರು ಮಾತ್ರ ಸತ್ತಿದ್ದಾರೆ. ಇದೇನೂ ದೊಡ್ಡದಲ್ಲ  ಎಂದು ಹೇಳಿಕೆ ನೀಡಿದ್ದು ಕೂಡ ಸರಪಂಚರು ಕಂಗಾಲಾಗುವಂತೆ ಮಾಡಿತಲ್ಲದೆ, ಅವರು ರಾಜೀನಾಮೆ ಮೂಲಕ ಬಿಕ್ಕಟ್ಟು ಸೃಷ್ಟಿಸಲು ಕಾರಣವಾಯಿತು.ನಂತರ ಒಮರ್ ಅಬ್ದುಲ್ಲಾ, ಒಂದು ಹೊಸ ವರಸೆ ತೆಗೆದು ತಮ್ಮ ರಾಜ್ಯದಲ್ಲಿನ ಕೆಲವು ಪ್ರದೇಶಗಳಲ್ಲಿ  ಸೈನಿಕರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಸರಪಂಚರಿಗೆ ರಕ್ಷಣೆ ಒದಗಿಸಲು ಹೊಸ ರಕ್ಷಣಾ ತಂಡವನ್ನೇ ಕಳುಹಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವ ಮೂಲಕ ಈ ಸಮಸ್ಯೆಯ ಪರಿಹಾರದ ಜವಾಬ್ದಾರಿಯನ್ನು ಕೇಂದ್ರದತ್ತ ವರ್ಗಾಯಿಸಿಬಿಟ್ಟರು. ಇಷ್ಟು ಮಾತ್ರವಲ್ಲ,  ಭಾರತೀಯ ಸೇನಾ ಪಡೆ ಈಗ ಸೈನಿಕರನ್ನು ಕಾಶ್ಮೀರದ ಕೆಲವು ಭಾಗಗಳಿಂದ ವಾಪಸ್ಸು ಪಡೆದಿದ್ದರಿಂದ ಪಾಕಿಸ್ತಾನದಿಂದ ದೇಶಕ್ಕೆ ನುಸುಳುತ್ತಿರುವವರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿದೆ ಎನ್ನುವ ಒಂದು ಎಚ್ಚರಿಕೆಯ ಮಾಹಿತಿಯನ್ನು ಬಿಡುಗಡೆ ಮಾಡಿತು. ಆದರೆ ಈ ಅಂಕಿಸಂಖ್ಯೆ ಉತ್ಪ್ರೇಕ್ಷೆಯಿಂದ ಕೂಡಿದೆ ಎನ್ನುವುದು ಒಮರ್ ಅಬ್ದುಲ್ಲಾ ಅವರ ವಾದ.ಭಯೋತ್ಪಾದಕ ಚಟುವಟಿಕೆಗಳು ಹಾಗೂ ಹಿಂಸಾಚಾರ ತಮ್ಮ ರಾಜ್ಯದಲ್ಲಿ ಈಚೆಗೆ ಕಡಿಮೆ ಆಗುತ್ತಿದೆ ಎಂದು ಒಮರ್ ಪ್ರತಿಪಾದಿಸುತ್ತಾರೆ.  ಅದರಲ್ಲೂ ಉರಿ ವಿಭಾಗದಿಂದ ಸೇನಾ ಪಡೆ ಬಿಡುಗಡೆ ಮಾಡಿರುವ ನುಸುಳುಗೋರರ ಸಂಖ್ಯೆ ಅತಿಯಾಗಿದೆ ಎಂದು ರಾಜ್ಯದ ಪೊಲೀಸರು ವಾದಿಸುತ್ತಿದ್ದಾರೆ. ಆದರೆ ಇದೆಲ್ಲಾ ಪ್ರಯತ್ನಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಒಮರ್ ಹಾಗೂ ರಾಜ್ಯ ಪೊಲೀಸರು ನಡೆಸುತ್ತಿರುವ ನಿರರ್ಥಕ ಪ್ರಯತ್ನಗಳು ಎನ್ನುವುದು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳಿಂದ ವ್ಯಕ್ತವಾಗಿವೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ಗೂ ಒಮರ್ ಮಾತಿನಲ್ಲಿ ನಂಬಿಕೆ ಬರುತ್ತಿಲ್ಲ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಈಗ ದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕ  ಗುಲಾಮ್ ನಬಿ ಆಜಾದ್ ಅವರು ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಹಾಗೂ ರಕ್ಷಣಾ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ನಾಯಕರು ಈ ಅಸ್ಥಿರ ಸ್ಥಿತಿಯಲ್ಲಿ ತಮಗೇನಾದರೂ ಲಾಭವಾಗಿ, ಅಧಿಕಾರದ ಅವಕಾಶ ಸಿಗಬಹುದೇ ಎಂದು ಶ್ರೀನಗರದಲ್ಲೇ ನೆಲೆಯೂರಿ ಕಾಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಜಮ್ಮು ಹಾಗೂ ಲಡಾಖ್‌ನಿಂದ ಆರಿಸಿ ಬಂದವರು.  ಇದುವರೆಗೂ ಒಮರ್ ಅಬ್ದುಲ್ಲಾ ಅವರ ಬೆಂಬಲಿಗರಾಗಿದ್ದ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ಗಾಂಧಿಯವರು ಈಗ ಪಂಚಾಯಿತಿಗಳಿಗೆ ಹೆಚ್ಚು ಅಧಿಕಾರ ನೀಡುವ ವಿಧೇಯಕದ 73ನೆಯ ತಿದ್ದುಪಡಿಯನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತಿದ್ದಾರೆ. ಆದರೇ  ಇದಕ್ಕೆ ವಿರೋಧಿಯಾಗಿರುವ ಒಮರ್ ಅವರಿಗೆ ರಾಹುಲ್ ಗಾಂಧಿಯವರು ರಾಜ್ಯದ ಸರಪಂಚರಿಗೆ ರಕ್ಷಣೆ ಒದಗಿಸುವ ಭರವಸೆ ನೀಡಿರುವುದು  ಇರಿಸುಮುರಿಸು ಉಂಟು ಮಾಡಿದೆ. ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸರಪಂಚರು ತಮ್ಮನ್ನು ಭೇಟಿ ಮಾಡಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು  ಹೇಳಿಕೊಳ್ಳದೇ ರಾಹುಲ್ ಗಾಂಧಿಯವರನ್ನು  ಭೇಟಿಮಾಡಿ ಅವರಿಂದ ಸುರಕ್ಷತೆಯ ಬಗ್ಗೆ ಆಶ್ವಾಸನೆ ಪಡೆದಿರುವುದು ಒಮರ್ ಅವರ ರಾಜಕೀಯ ಭವಿಷ್ಯಕ್ಕೂ ಸವಾಲೆಸೆದಂತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry