ಕಾಸರಗೋಡು ಉದ್ವಿಗ್ನ, ಧಾರವಾಡದಲ್ಲಿ ಲಾಠಿ ಪ್ರಹಾರ

7

ಕಾಸರಗೋಡು ಉದ್ವಿಗ್ನ, ಧಾರವಾಡದಲ್ಲಿ ಲಾಠಿ ಪ್ರಹಾರ

Published:
Updated:

ಕಾಸರಗೋಡು/ ಧಾರವಾಡ: ಪವಿತ್ರ ಕ್ಷೇತ್ರವೊಂದನ್ನು ಅಪವಿತ್ರಗೊಳಿಸಿದ ಘಟನೆ ಹಿನ್ನೆಲೆಯಲ್ಲಿ ಕಾಸರಗೋಡು ತಾಲ್ಲೂಕಿನಲ್ಲಿ ವ್ಯಾಪಕ ಹಿಂಸಾಚಾರ ಹಾಗೂ ಪತ್ರಿಕೆಯೊಂದರಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿದೆ ಎಂಬ ಕಾರಣಕ್ಕೆ ಧಾರವಾಡದಲ್ಲಿ ಹಲ್ಲೆ ಹಾಗೂ ಲಘು ಲಾಠಿ ಪ್ರಹಾರ ಘಟನೆಗಳು ಶನಿವಾರ ನಡೆದಿವೆ.ಕಾಸರಗೋಡು ವರದಿ: ಸಮೀಪದ ಮಧೂರು ಗ್ರಾಮ ಪಂಚಾಯಿತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಘಟನೆ ಹಿನ್ನೆಲೆಯಲ್ಲಿ, ಮೀಪುಗುರಿ ಮತ್ತು ಸೂರ್ಲು ಪ್ರದೇಶಗಳಲ್ಲಿ ಶನಿವಾರ ಬೆಳಿಗ್ಗೆ ವ್ಯಾಪಕ ಹಿಂಸಾಚಾರ ನಡೆಯಿತು. ಸುಮಾರು 25 ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಐವರ ವಿರುದ್ಧ ಕೊಲೆ ಯತ್ನ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಕಾಸರಗೋಡು ತಾಲ್ಲೂಕಿನಲ್ಲಿ ಒಂದು ವಾರದವರೆಗೆ ನಿಷೇಧಾಜ್ಞೆ ಘೋಷಿಸಿ ಜಿಲ್ಲಾಧಿಕಾರಿ ವಿ.ಎನ್.ಜಿತೇಂದ್ರನ್ ಆಜ್ಞೆ ಹೊರಡಿಸಿದ್ದಾರೆ. ತಾಲ್ಲೂಕಿನಲ್ಲಿ ಬೈಕ್‌ಗಳಿಗೆ ನಿಷೇಧ ಹೇರಲಾಗಿದ್ದು, ರಾತ್ರಿ 8ರಿಂದ ಮುಂಜಾನೆ 6ರವರೆಗೆ ಬೈಕ್ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಧೂರು ಪಂಚಾಯಿತಿ ವ್ಯಾಪ್ತಿಯಲ್ಲಿ  ಬಿಜೆಪಿ-ಸಂಘ ಪರಿವಾರ ಹರತಾಳಕ್ಕೆ ಕರೆ ನೀಡಿದ ಪರಿಣಾಮ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು.ಕಾಸರಗೋಡು ತಾಲ್ಲೂಕಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಉತ್ತರವಲಯ ಡಿಐಜಿ ಎಸ್.ಶ್ರೀಜಿತ್ ಹೇಳಿದ್ದಾರೆ.ಧಾರವಾಡ ವರದಿ: ಧಾರ್ಮಿಕ ಮುಖಂಡರ ಕುರಿತು ನೋವಿನ ಧ್ವನಿ ಎಂಬ ಪಾಕ್ಷಿಕ ಪತ್ರಿಕೆಯಲ್ಲಿ ಅವಹೇಳನ ರೀತಿಯಲ್ಲಿ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಪತ್ರಿಕೆಯ ಸಂಪಾದಕ ಸೇರಿದಂತೆ ಮೂವರ ಮೇಲೆ ಶನಿವಾರ ಹಲ್ಲೆ ಘಟನೆ ನಡೆದಿದೆ.ಅಂಜುಮನ್ ವೃತ್ತದಲ್ಲಿ ಸೇರಿದ್ದ ಸಾರ್ವಜನಿಕರು ರಸ್ತೆ ತಡೆ ನಡೆಸಿದರು. ನಂತರ ನಡೆದ ಕಲ್ಲು ತೂರಾಟದ ಸಂದರ್ಭದಲ್ಲಿ ಸಿಪಿಐ ಟಿ.ಎಸ್. ಸುಲ್ಫಿ  ಹಾಗೂ ಮತ್ತಿಬ್ಬರು ಮೀಸಲು ಪಡೆಯ ಪೇದೆಗಳಿಗೆ ಗಾಯಗಳಾಗಿವೆ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಲೇಖನ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಪಾಕ್ಷಿಕ ಪತ್ರಿಕೆ ಸಂಪಾದಕ ಫಿರ್ದೋಸ್ ಇನಾಮದಾರ, ಮಹಮ್ಮದಲಿ ಗೂಡುಭಾಯಿ ಹಾಗೂ ಎನ್.ಜೆ. ಅಹಮ್ಮದಅಲಿ ಎಂಬುವರ ಮೇಲೆ ಹಲ್ಲೆ ನಡೆದಿದೆ. ಅಂಜುಮನ್ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಈ ಮೂವರನ್ನು ಸುಮಾರು ಆರು ತಾಸು ಕೂಡಿ ಹಾಕಲಾಗಿತ್ತು ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು, ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಸಿಟಿ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂಜುಮನ್ ಸಂಸ್ಥೆ ಹಾಗೂ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry