ಕಾಸರವಳ್ಳಿಗೆ ಅರವತ್ತಾಯ್ತು, ಪದ್ಮವೂ ಬಂತು...

7

ಕಾಸರವಳ್ಳಿಗೆ ಅರವತ್ತಾಯ್ತು, ಪದ್ಮವೂ ಬಂತು...

Published:
Updated:
ಕಾಸರವಳ್ಳಿಗೆ ಅರವತ್ತಾಯ್ತು, ಪದ್ಮವೂ ಬಂತು...

ನಮ್ಮ ಗಿರೀಶ್ ಕಾಸರವಳ್ಳಿಯವರಿಗೆ ಅರವತ್ತಾಯಿತು...

ತುಸು ಬಿಪಿ, ಕೊಂಚ ಶುಗರ್ ಕೂಡ ಬಂತು...

ಕೂದಲು ಸಂಪೂರ್ಣ ಬೆಳ್ಳಗಾಯಿತು...

ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಹದಿಮೂರಾಯಿತು...

ಪ್ರಶಸ್ತಿ-ಗೌರವಗಳಿಗೆ ಬಿಡಿ, ಲೆಕ್ಕವೇ ಇಲ್ಲ...

ಈಗ ನೋಡಿ, ಕೊನೆಗೂ ಪದ್ಮಶ್ರೀ ಬಂತು...!

ಕಳೆದ ತಿಂಗಳು ಅವರಿಗೆ ಪದ್ಮಶ್ರೀ ಪ್ರಕಟವಾದಾಗ ನಾನು ತಮಾಷೆಯಾಗಿ ಹೇಳಿದ್ದೆ: 

‘ಇನ್ನೇನು ಬಿಡಿ ಸರ್, ನಿಮಗೆ ಈಗ ಪದ್ಮ ಅವಾರ್ಡ್ ಬಂತು. ಇನ್ನು ರಾತ್ರಿ ಹೊತ್ತು ಪೊಲೀಸಿನವರು ನಿಮ್ಮನ್ನು ತಡೆದು ನಿಲ್ಲಿಸುವಂತಿಲ್ಲ. ಸುಮ್ಮ ಸುಮ್ಮನೇ ಬಂಧಿಸುವಂತಿಲ್ಲ. ಅದಕ್ಕೆಲ್ಲಾ ರಾಷ್ಟ್ರಪತಿಯವರ ಒಪ್ಪಿಗೆ ಪಡೆದಿರಬೇಕು..?

ಇದಕ್ಕೆ ಗಿರೀಶರದ್ದು, ಎಂದಿನ, ಮಾಸದ, ಅದೇ ಮುಗುಳ್ನಗೆ...‘ಅದೇನೋ ಗೊತ್ತಿಲ್ಲರೀ, ನನಗೆ ಈ ಪದ್ಮಶ್ರೀ ಬಂದದ್ದು ಅಷ್ಟೊಂದು ಖುಷಿ ಕೊಡ್ತಾ ಇಲ್ಲ... ಸಿನಿಮಾಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಆಗುವ ಸಂಭ್ರಮ, ಅದೇಕೋ ಈಗ ನನಗಾಗ್ತಿಲ್ಲ’ ಎಂದು ಅಂದಿದ್ದರು.  ನಿಜ, ಗಿರೀಶರಷ್ಟು ಸಿನಿಮಾವನ್ನು ಪೋಷಿಸಿ, ಪ್ರೀತಿಸುವವರನ್ನು ನಾನು ನೋಡಿಲ್ಲ. ಅವರಿಗೆ ಅದೊಂದು ಧ್ಯಾನ, ತಪಸ್ಸು, ಉಸಿರು, ಕನಸು... ಎಲ್ಲವೂ.ಸಿನಿಮಾ ಜಗತ್ತಿಗೆ ಗಿರೀಶರ ಕೊಡುಗೆಯೇನೂ ಕಡಿಮೆಯಿಲ್ಲ; ಹಾಗೆಯೇ ಸಿನಿಮಾವೂ ಗಿರೀಶರಿಗೆ ಸಾಕಷ್ಟು ಕೊಟ್ಟಿದೆ. ವೈಶಾಲಿಯಂಥ ಪತ್ನಿ, ಅಪೂರ್ವ, ಅನನ್ಯರಂಥ ಮಕ್ಕಳು, ಬೆಳ್ಳಿ-ಬಂಗಾರದಂಥ ಪ್ರಶಸ್ತಿಗಳು, ಹೀಗೇ... ಶಿವಮೊಗ್ಗ ಜಿಲ್ಲೆಯ ಕಾಸರವಳ್ಳಿ ಎಂಬ ಪುಟ್ಟ ಹಳ್ಳಿಯ ಗಣೇಶ್‌ರಾವ್ - ಲಕ್ಷ್ಮೀದೇವಮ್ಮನವರ ಒಂಬತ್ತು ಮಕ್ಕಳಲ್ಲಿ ಮೂರನೆಯವರಾದ ಗಿರೀಶ್ ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಓದಿದ್ದು ಬಿ ಫಾರ್ಮ. ಮಾತಿನಲ್ಲಿ ಹಿಂದು, ಆಟದಲ್ಲಿ ಹಿಂದು, ಓದಿನಲ್ಲಿ ಮಾತ್ರ ಮುಂದು! ಡಿಸ್ಟಿಂಕ್ಷನ್ ಸ್ಟೂಡೆಂಟ್! ಆಸಕ್ತಿಯ ವಿಚಾರಗಳು ಜುವಾಲಜಿ ಮತ್ತು ಬಾಟನಿ. ಬದುಕಿನಲ್ಲಿ ಆಕಸ್ಮಿಕದ ಆಟದಿಂದ ಸಿನಿಮಾಗೆ ಬಂದರು. ಮುಂದಿನದು ಇತಿಹಾಸ..

ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ಒಮ್ಮೆ ಬೆಂಗಳೂರಿನಿಂದ ಶಿವಮೊಗ್ಗಕ್ಕೋ - ತೀರ್ಥಹಳ್ಳಿಗೋ ರಾತ್ರಿ ಬಸ್ಸಿನಲ್ಲಿ ಹೋಗುತ್ತಿದ್ದರಂತೆ. ಆಗ ತಾನೇ ಬಿ ಫಾರ್ಮ ಮುಗಿಸಿದ್ದರು.  ಮುಂದೇನು? ಎಂಬ ಬಗ್ಗೆ ಇನ್ನೂ ಗೊಂದಲವಿತ್ತು. ಆ ಚಿಂತೆಯಲ್ಲಿ ಇವರು ಪ್ರಯಾಣಿಸುತ್ತಿದ್ದಾರೆ. ಬಸ್ಸಿನಲ್ಲಿ ಇವರ ಬದಿಯಲ್ಲಿ ಕುಳಿತಿದ್ದ ಅಪರಿಚಿತ ಇವರ ಮುಖವನ್ನೇ ದಿಟ್ಟಿಸಿ ನೋಡಿದನಂತೆ.ಇವರನ್ನು ಸಮೀಪಿಸಿ, ಕೈ ಹಿಡಿದು ನೋಡಿ, ‘ನಿನಗೆ ಉತ್ತಮ ಭವಿಷ್ಯವಿದೆ... ಸಣ್ಣ-ಪುಟ್ಟ ಕೆಲಸ ಮಾಡುತ್ತಾ ಬರುವ ದೊಡ್ಡ ಅವಕಾಶಗಳನ್ನು ಕಳೆದುಕೊಳ್ಳಬೇಡ’ ಎಂದು ಅವಧೂತನಂತೆ ನುಡಿದನಂತೆ.  ಭವಿಷ್ಯವಾಣಿಯಲ್ಲಿ ನಂಬಿಕೆಯಿಲ್ಲದ ಇವರು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ.ಬಿ-ಫಾರ್ಮ ಮುಗಿಸಿ ಎಂ-ಫಾರ್ಮ ಸೇರಿಕೊಳ್ಳುವ ಮುಂಚೆ ಎರಡು ತಿಂಗಳ ಟ್ರೈನಿಂಗ್ ಮಾಡಲು ಹೈದರಾಬಾದಿಗೆ ಹೋದವರು, ಅಲ್ಲೇ ಇವರಿಗೆ ಹೊಸ ಅಲೆಯ ಚಿತ್ರಗಳನ್ನು ನೋಡಲು ಅವಕಾಶ ದೊರೆತದ್ದು.ಆಗ ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಪ್ರಕಟಣೆ ನೋಡಿ ಕುತೂಹಲಕ್ಕೆ ಅರ್ಜಿ ಗುಜರಾಯಿಸಿದರು. ಇಂಟರ್‌ವ್ಯೆ ಆಯಿತು. ಅಲ್ಲಿ ಕೇಳಿದ ಪ್ರಶ್ನೆ ಏನು ಗೊತ್ತೇ? `Write an essay on vitamins. ಮೊದಲೇ ಫಾರ್ಮಸಿ ಓದಿದ್ದವರು ಇವರು. ಮೂರು ಪುಟ ಬರೆದು ಬಿಸಾಕಿದರು. ಸೆಲೆಕ್ಟ್ ಆದರು.

 

ಮುಂದೆ ಪೂನಾ ಇನ್‌ಸ್ಟಿಟ್ಯೂಟ್‌ನಲ್ಲಿ ರಾವ್‌ಬಹದ್ದೂರ್ ಅಂಥವರ ಸಂಪರ್ಕ ಬಂತು.ನಾಲ್ಕೇ ವರ್ಷ. ಇವರ ಬದುಕು ಸಂಪೂರ್ಣ ಬದಲಾಯಿತು. ಎಲ್ಲವೂ ಪೂರ್ವ ನಿಶ್ಚಯವಾದಂತೆ ನಡೆದೇ ಹೋಯಿತು.ಇದೆಲ್ಲ ಆಗಿ ಹೆಚ್ಚು-ಕಮ್ಮಿ ನಾಲ್ಕು ದಶಕಗಳಾಗುತ್ತಾ ಬಂತು. ಇಂದು ಜಾಗತಿಕ ಮಟ್ಟದಲ್ಲಿ ಗಿರೀಶ್ ಕಾಸರವಳ್ಳಿ ಎಂದರೆ ‘ಓ! ಕನ್ನಡ ಫಿಲಂ ಮೇಕರ್’ ಎನ್ನುತ್ತಾರೆ.ಹಾಗೆಯೇ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ‘ಕನ್ನಡ ಸಿನಿಮಾ’ ಎಂದರೆ ಮೊದಲಿಗೆ ನಿಲ್ಲುವ ಹೆಸರು, ಗಿರೀಶ್ ಕಾಸರವಳ್ಳಿ! ಹೀಗೆ, ನಮ್ಮ ನಾಡಿಗೆ, ಭಾಷೆಗೆ, ಇಲ್ಲಿಯ ಸಂಸ್ಕೃತಿಗೆ ಒಂದು ಘನತೆ ತಂದುಕೊಟ್ಟ ವ್ಯಕ್ತಿ ಗಿರೀಶ್.  ಮೂವತ್ತೈದು ವರ್ಷಗಳಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದು ಹದಿಮೂರು ಚಿತ್ರಗಳನ್ನು ಮಾತ್ರ. ಇವರು ತಮ್ಮ ಚಲನಚಿತ್ರಗಳಿಗೆ ಸಾಮಾನ್ಯವಾಗಿ ಕನ್ನಡ ಸಾಹಿತ್ಯಲೋಕದಿಂದ ಕಥಾವಸ್ತುವನ್ನು ಆಯ್ದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಇವರ ಚಿತ್ರಪಟ್ಟಿಯನ್ನು ಒಮ್ಮೆ ಗಮನಿಸಬಹುದು.‘ಘಟಶ್ರಾದ್ಧ’ (ಯು.ಆರ್.ಅನಂತಮೂರ್ತಿ), ‘ಆಕ್ರಮಣ’ (ಬಿ.ವಿ.ವೈಕುಂಠರಾಜು), ‘ಮೂರುದಾರಿಗಳು’ (ಯಶವಂತ ಚಿತ್ತಾಲ), ‘ತಬರನ ಕತೆ’ (ಪೂರ್ಣಚಂದ್ರ ತೇಜಸ್ವಿ), ‘ಮನೆ’ (ಟಿ.ಜಿ.ರಾಘವ), ‘ಕ್ರೌರ್ಯ’ (ಟಿ.ಎನ್.ಸೀತಾರಾಂ), ‘ತಾಯಿಸಾಹೇಬ’ (ರಂಶಾ), ‘ದ್ವೀಪ’ (ನಾ.ಡಿಸೋಜ), ‘ಹಸೀನಾ’ (ಬಾನು ಮುಷ್ತಾಕ), ‘ನಾಯಿನೆರಳು’ (ಎಸ್.ಎಲ್.ಭೈರಪ್ಪ), ‘ಗುಲಾಬಿ ಟಾಕೀಸ್’ (ವೈದೇಹಿ), ‘ಕನಸೆಂಬೋ ಕುದುರೆಯನೇರಿ’ (ಅಮರೇಶ ನುಗಡೋಣಿ). ತೊಂಬತ್ತರ ಆರಂಭದ ದಶಕದಲ್ಲಿ ಬಂದ ‘ಬಣ್ಣದವೇಷ’ ಒಂದು ಮಾತ್ರ ಅವರೇ ಬರೆದ ಕಥೆ.ಹೀಗೆ ಸಾಹಿತ್ಯದಿಂದ ಕಥಾವಸ್ತುವನ್ನು ಆಯ್ದುಕೊಳ್ಳಲು ಇವರಿಗೆ ಪ್ರಭಾವ ಮೂಡಿದ್ದು ಬಹುಶಃ ಇವರು ಶಾಲಾ-ಕಾಲೇಜು ದಿನಗಳಲ್ಲಿ ಓದಿದ ಕನ್ನಡ ಸಾಹಿತ್ಯದಿಂದ.ಗಿರೀಶರಿಗೆ ತಂದೆ ಕನ್ನಡ ಪುಸ್ತಕದ ರುಚಿ ಹತ್ತಿಸಿದರೆ, ಅಜ್ಜ ನರಸಿಂಹ ಪಂಡಿತರು, ‘ಯಾವುದೇ ಪುಸ್ತಕವನ್ನು ಓದಿದರೂ, ಏಕೆ ಓದುತ್ತಿದ್ದೇನೆ ಎಂಬ ಅರಿವು ಇರಬೇಕು..’ ಎಂಬ ಪ್ರಜ್ಞೆ ಮೂಡಿಸಿದರು. ಅಂದಿನಿಂದ ಗಿರೀಶ್ ಯಾವುದೇ ಸಾಹಿತ್ಯ ಓದಲಿ, ಸಿನಿಮಾ ನೋಡಲಿ, ಅದನ್ನು ವೈಚಾರಿಕವಾಗಿ ನೋಡುತ್ತಾ ಹೋದರು. ಇದರ ಕಾಣಿಕೆಯನ್ನು ಇಂದು ಕಾಣಬಹುದು.ಗಿರೀಶ್ ಚಿತ್ರಕೃಷಿಯ ಬಗ್ಗೆ ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್ ಒಂದೆಡೆ ಬರೆಯುತ್ತಾರೆ: ‘ಕಾಸರವಳ್ಳಿಯವರು ಸಾಮಾನ್ಯವಾಗಿ ಗಟ್ಟಿಮುಟ್ಟಾದ ಕತೆಗಳ ಚಪ್ಪರದ ಮೇಲೆಯೇ ಸಿನಿಮಾದ ಬಳ್ಳಿಯನ್ನು ಹಬ್ಬಿಸುವುದು. ಕಾಸರವಳ್ಳಿ ನಮ್ಮ ಕಾಲದ ಅತ್ಯುತ್ತಮ ಸಾಮಾಜಿಕ ವ್ಯಾಖ್ಯಾನಕಾರರೂ, ಸಮಾಜವಿಮರ್ಶಕರೂ ಅಂತೆಯೇ ಜನಪರ ಕಲಾವಿದರೂ ಆಗಿ ಮೂಡಿಬಂದಿದ್ದಾರೆ.ಸಾಹಿತಿಗಳ ಸಾಧನೆಗೆ ಸಿಕ್ಕುವ ಮನ್ನಣೆ ಮತ್ತು ವ್ಯಾಖ್ಯಾನಗಳು ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ಸಿಗುವುದಿಲ್ಲ. ಸಾಹಿತಿಗಳು ತಾವೇ ಜಗತ್ತಿನ ಕೇಂದ್ರ ಮತ್ತು ಉಳಿದೆಲ್ಲ ಕಲಾವಿದರು ಉಪಗ್ರಹಗಳು ಎಂಬ ಭ್ರಮೆಯಿಂದ ಹೊರಬರುವ ತನಕ ಈ ಅನ್ಯಾಯ ಸರಿಹೋಗುವುದಿಲ್ಲ’ ಎಂದು ಅಭಿಪ್ರಾಯಿಸಿದ್ದಾರೆ.

 

ಇದಿಷ್ಟು ಸಾಕಲ್ಲವೇ? ಗಿರೀಶ್ ಮನಸ್ಸು ಮಾಡಿದ್ದರೆ, ಎಂದೋ ಬಲು ದೂರಕ್ಕೆ ಹಾರಿ ಇನ್ನೂ ದೊಡ್ಡ ಎತ್ತರಕ್ಕೆ ಏರಬಹುದಿತ್ತು. ಆದರೆ ಅವರು ತಾವು ಕಲಿತ ಭಾಷೆ, ಸಂಸ್ಕೃತಿಗೆ ನಿಷ್ಠರಾಗಿ ಬದ್ಧತೆಯನ್ನು ಕಾಪಾಡಿಕೊಂಡು ಬಂದವರು. ಪೂನಾ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಇವರು ವಿದ್ಯಾರ್ಥಿ ದಿನಗಳಲ್ಲಿ ಮಾಡಿದ ‘ಅವಶೇಷ್’ ನೋಡಿದ ಫ್ರೆಂಚ್ ವಿಮರ್ಶಕರೊಬ್ಬರು ಇವರನ್ನು ತಮ್ಮ ದೇಶಕ್ಕೆ ಬರಲು ಆಹ್ವಾನಿಸಿದರಂತೆ.‘ನಿನಗೆ ಅಲ್ಲಿ ಇನ್ನೂ ಉತ್ತಮ ಭವಿಷ್ಯವಿದೆ.. ಬಾ’ ಎಂದು ಆಸೆ ಹುಟ್ಟಿಸಿದರಂತೆ. ಅದಕ್ಕೆ ಗಿರೀಶ್, ‘ನಾನು ಮೊದಲು ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ’ ಎಂದು ಹೋಗಲು ಒಪ್ಪಲಿಲ್ಲ. ನಂತರ ಸದಾನಂದ ಸುವರ್ಣ ಹಿಂದಿ ಭಾಷೆಯ ಸಿನಿಮಾ ಮಾಡಲು ಆಹ್ವಾನಿಸಿದಾಗಲೂ ಇವರು ಒಲ್ಲೆ ಎಂದಿದ್ದಾರೆ.ನಂತರ ಇವರು ‘ಮನೆ’ ಸಿನಿಮಾ ಮಾಡುವ ಸಂದರ್ಭದಲ್ಲಿ ಕಮಲ್‌ಹಾಸನ್ ಅನ್ನು ಮುಖ್ಯಪಾತ್ರಕ್ಕೆ ಒಪ್ಪಿಸಲು ಅವರಿಗೆ ಚಿತ್ರದ ಕಥೆ ಹೇಳಲು ಹೋಗಿದ್ದರಂತೆ. ಕಥೆ ಕೇಳಿ ಇಷ್ಟ ಪಟ್ಟ ಕಮಲ್ ‘ಚಿತ್ರದ ಬಜೆಟ್ ಎಷ್ಟು?’ ಎಂದು ಕೇಳಿದರಂತೆ. ಗಿರೀಶ್ ‘ಎಂಟು ಲಕ್ಷ ರೂಪಾಯಿ’ ಎಂದರಂತೆ.  ಅದಕ್ಕೆ ಕಮಲ್‌ಹಾಸನ್, ‘ನಾನು ನಿನಗೆ ಅದೇ  ಎಂಟು ಲಕ್ಷ ರೂಪಾಯಿ ಸಂಭಾವನೆಯಾಗಿ ಕೊಡುತ್ತೇನೆ. ಬಾ, ತಮಿಳಿನಲ್ಲಿ ಸಿನಿಮಾ ಮಾಡು’ ಎಂದು ಕರೆದರಂತೆ. ಗಿರೀಶ್ ಒಪ್ಪಲಿಲ್ಲ.‘ಕನ್ನಡ ಚಿತ್ರರಂಗ ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದೆ, ನಾನು ಇಲ್ಲಿ ಸುಖವಾಗಿದ್ದೇನೆ, ನನಗೆ ಪರಭಾಷೆ ಚಿತ್ರರಂಗಕ್ಕೆ ಬಂದು ಪರದೇಶಿಯಾಗಿ ಬದಕಲು ಇಷ್ಟವಿಲ್ಲ’ ಎಂದರಂತೆ.ಮುಂದೆ ‘ದ್ವೀಪ’ ಚಿತ್ರ ಮಾಡುವ ದಿನಗಳಲ್ಲಿ ನಟಿ ಸೌಂದರ್ಯರ ಅಣ್ಣ ಅಮರನಾಥ್, ‘ಇದೇ ಕಥೆಯನ್ನು ಇಂಗ್ಲೀಷಿನಲ್ಲಿ ಮಾಡೋಣ.. ಒಳ್ಳೇ ಹೆಸರು ಬರುತ್ತದೆ’ ಎಂದು ಹುರಿದುಂಬಿಸಿದರಂತೆ. ಆಗಲೂ ಗಿರೀಶ್, ‘ನೀವು ಎಷ್ಟೇ ಬಜೆಟ್ ಕೊಟ್ಟರೂ ನಾನು ಇದನ್ನು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಮಾಡೋಲ್ಲ’ ಎಂದರಂತೆ.

 

ಕಳೆದ ವರ್ಷ ಇವರಿಗೆ ಇಂಟರ್‌ನ್ಯಾಷನಲ್ ಕೊಲಾಬ್ರೇಷನ್‌ನಲ್ಲಿ ಚಿತ್ರ ಮಾಡಲು ಆಹ್ವಾನ ಬಂದಾಗಲೂ ಹೀಗೇ ನಯವಾಗಿ ನಿರಾಕರಿಸಿದರು. ಅವರ ವಾದ ಇಷ್ಟೇ, ‘ಇದೆಲ್ಲದರಿಂದ ಚಿತ್ರದ ಬಜೆಟ್ ಹೆಚ್ಚಾಗಬಹುದು, ಆದರೆ ಚಿತ್ರದ ಆತ್ಮ ಬದಲಾಗುವುದಿಲ್ಲ.ನನ್ನ ಚಿತ್ರದ ವಸ್ತುಗಳಿಗೆ ನನ್ನ ಭಾಷೆಯ, ಮಣ್ಣಿನ ಸೊಗಡಿನ ವಾತಾವರಣವೇ ಬೇಕು... ನಾನು ಕನ್ನಡದಲ್ಲೇ ಚಿತ್ರ ಮಾಡುತ್ತೇನೆ. ಕನ್ನಡ ಇಲ್ಲದೆ ನನ್ನ ಚಿತ್ರಗಳಿಲ್ಲ... ಯಾವ ನಿರ್ದೇಶಕ ತನ್ನ ನೆಲದ ಸೊಗಡನ್ನ ಬಿಟ್ಟು ಚಿತ್ರ ಮಾಡೋದಿಕ್ಕೆ ಹೋಗ್ತಾನೋ ಅವನು ಇಲ್ಲೂ ಸಲ್ಲೋದಿಲ್ಲ, ಅಲ್ಲೂ ಸಲ್ಲೋದಿಲ್ಲ. ಯಾವ ನಿರ್ದೇಶಕ ಸ್ಥಳೀಯವಾಗಿ ಚಿತ್ರ ಮಾಡುತ್ತಾ ಹೋಗುತ್ತಾನೋ ಅವನು ಜಾಗತಿಕವಾಗಿಯೂ ಬೆಳೆಯುತ್ತಾ ಹೋಗುತ್ತಾನೆ’.ಗಿರೀಶ್ ಕಮರ್ಷಿಯಲ್ ಚಿತ್ರಗಳನ್ನು ಎಂದೂ ದ್ವೇಷಿಸಿದವರಲ್ಲ. ‘ನಾನು ಕಮರ್ಷಿಯಲ್ ಚಿತ್ರಗಳಲ್ಲಿ ಕಥೆ ಹೇಳುವ ಉತ್ಪ್ರೇಕ್ಷೆಯ ದಾರಿಯನ್ನು ಇಷ್ಟ ಪಡ್ತೀನಿ, ಆದರೆ ಅವರ ಚಿತ್ರದಲ್ಲಿನ ಪಾಲಿಟಿಕ್ಸ್ ಇಷ್ಟ ಆಗೋಲ್ಲ. ನನಗೆ ಸಿನಿಮಾ ಮಾಡುವ ರೆಸಿಪಿ ಗೊತ್ತು. ಆದರೆ ಆ ರೀತಿಯ ಅಡುಗೆ ಮಾಡೋಕೆ ಬರೋಲ್ಲ.

 

ನಾನು ಪುಳಿಯೊಗರೆ ಮಾಡಿಕೊಂಡಿರೋನು, ಬಿರಿಯಾನಿ ಮಾಡಿದರೆ ರುಚಿಸೋಲ್ಲ’.

ನಿಜ, ಗಿರೀಶ್ ಮಾಡುವ ಪುಳಿಯೋಗರೆಯಲ್ಲಿ ಸಾಕಷ್ಟು ರುಚಿ ಇರುತ್ತೆ. ನೀವೂ ಸವಿದಿರಬೇಕಲ್ಲವೆ? ಇನ್ನೂ ಸವಿಯಲಿಕ್ಕೆ ಮುಂದೆ ಸಾಕಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry