ಭಾನುವಾರ, ಡಿಸೆಂಬರ್ 8, 2019
21 °C

ಕಾಸರವಳ್ಳಿ ಸಿನಿಮಾ ಮುಖಗಳು

Published:
Updated:
ಕಾಸರವಳ್ಳಿ ಸಿನಿಮಾ ಮುಖಗಳು

`ಒಂದು ಸಾಹಿತ್ಯ ಕೃತಿಯನ್ನು ಓದುವಾಗ ಅದು ನಮ್ಮಳಗೆ ಸಂವಾದ ಹುಟ್ಟುಹಾಕುತ್ತದೆ. ನಮ್ಮ ಸುತ್ತ ನಡೆಯುವ ಜಗತ್ತಿನ ವ್ಯವಹಾರಗಳಿಗೆ ಹೊಸ ಭಾಷ್ಯ ಬರೆಯುತ್ತದೆ.ಜಗತ್ತನ್ನು ಹೊಸ ಬೆಳಕಿನಲ್ಲಿ ನೋಡುವ ಸಾಧ್ಯತೆ ಹುಟ್ಟುಹಾಕಬಹುದು. ನಾನು ಹೆಚ್ಚಾಗಿ ಕೃತಿಗಳಿಗೆ ನಿಷ್ಠನಾಗಿ ಚಿತ್ರಗಳನ್ನು ಮಾಡಿಲ್ಲ. ಕೃತಿಯಿಂದ ಪ್ರೇರಣೆ ಪಡೆದು ಚಿತ್ರ ಮಾಡುತ್ತಾ ಹೋಗುತ್ತೇನೆ. ನಾನು ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗಳನ್ನು ಮಾಡುತ್ತೇನೆ. ಒಂದು ಕೃತಿ ಅಥವಾ ವಸ್ತು ಸಿನಿಮಾ ಪರಿಭಾಷೆಗೆ ಎಷ್ಟರಮಟ್ಟಿಗೆ ತನ್ನನ್ನು ತಾನು ಕೊಟ್ಟುಕೊಳ್ಳುತ್ತೆ ಹಾಗೂ ಅದು ಹೇಗೆ ಪ್ರಸ್ತುತ ಸಂದರ್ಭಕ್ಕೆ, ನಮ್ಮ ಬದುಕಿನ ಅರ್ಥದ ಹುಡುಕಾಟದಲ್ಲಿ ಒಂದು ವಾಗ್ವಾದವಾಗುತ್ತೆ ಅನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರ ನಿರ್ದೇಶಿಸುತ್ತೇನೆ~ ಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಒಂದು ಕಡೆ ಹೇಳಿಕೊಂಡಿದ್ದಾರೆ.ಗಿರೀಶ್ ಕಾಸರವಳ್ಳಿ ಅವರು ಪ್ರತಿಭಾವಂತ ನಿರ್ದೇಶಕ. ಕಲಾತ್ಮಕ ಚಿತ್ರಗಳಿಗೆ ಹೊಸತೊಂದು ಸ್ಪರ್ಶ ನೀಡಿದವರು. ತಮ್ಮ ವಿಭಿನ್ನ ದೃಷ್ಟಿಕೋನದಿಂದ ಚಿತ್ರ ರೂಪಿಸುವ ಇವರ ಪ್ರತಿಭೆಗೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. `ಬೆಂಗಳೂರು ಹಬ್ಬ~ದ ಸಂದರ್ಭದಲ್ಲಿ ಇವರ ಅನೇಕ ಚಿತ್ರಗಳು ಪ್ರದರ್ಶನಗೊಂಡವು. ಆನಂತರ ಅವರ ಚಿತ್ರಗಳ ಕುರಿತ ಸಂವಾದ ಕೂಡ ನಡೆಯಿತು. ಪ್ರೊ. ಮನು ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಹಾಗೂ ವಿದ್ಯಾಶಂಕರ್ ಅವರು ಗಿರೀಶ್ ಕಾಸರವಳ್ಳಿ ಅವರ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ, ವಿಶ್ಲೇಷಣೆ ಮಾಡಿದ್ದು ಹೀಗೆ:ತನ್ನ 27ನೇ ವಯಸ್ಸಿನಲ್ಲಿಯೇ ಘಟಶ್ರಾದ್ಧದಂತಹ ಸಿನಿಮಾ ನಿರ್ದೇಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿವರು ಕಾಸರವಳ್ಳಿ. ಘಟಶ್ರಾದ್ಧದಿಂದ ಕನಸೆಂಬೋ ಕುದುರೆಯನೇರಿ ಸಿನಿಮಾವರೆಗಿನ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶಿಸಿದ ಕನ್ನಡ ಚಿತ್ರಗಳು ಸಾಮಾಜಿಕ ಜೀವನದ ಸಂಘರ್ಷಗಳನ್ನು ಪ್ರತಿಬಿಂಬಿಸುತ್ತವೆ.ಭಾರತೀಯ ಸಿದ್ಧ ಮಾದರಿಯ ಜಾಡನ್ನು ತೊರೆದು ಹೆಣ್ಣಿನ ಅಂತರಾಳವನ್ನು ಚಿತ್ರಿಸುವ ಪ್ರಯತ್ನ ಮಾಡಿರುವುದನ್ನು ಅವರ ಬಹುತೇಕ ಚಿತ್ರಗಳಲ್ಲಿ ಕಾಣಬಹುದು. ಹೆಣ್ಣಿನ ಗಟ್ಟಿತನವನ್ನು ಸ್ಥಾವರವಾಗಿಸುವ ಹಾಗೂ ಬೇರೆ ಬೇರೆ ಧರ್ಮ- ಜಾತಿ- ಸಮುದಾಯದ ವಿವಿಧ ಸನ್ನಿವೇಶಗಳಲ್ಲಿ ಮಹಿಳೆ ವರ್ತಿಸುವ, ಸಂಘರ್ಷ ಎದುರಿಸುವ ಸನ್ನಿವೇಶವನ್ನು ಪರಿಚಯಿಸಿದ್ದಾರೆ. ವಿಶ್ವದ ನೂರು ಅತಿ ಮುಖ್ಯ ಕಲಾತ್ಮಕ ಚಿತ್ರಗಳಲ್ಲಿ ಗಿರೀಶ್ ಕಾಸರವಳ್ಳಿ ಅವರ `ಘಟಶ್ರಾದ್ಧ~ ಕೂಡ ಸೇರಿದೆ ಎಂಬುದು ಹೆಮ್ಮೆಯ ವಿಷಯ.`ಸಂಸ್ಕಾರ~ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಚಿತ್ರದ ಅಲೆ ಎಬ್ಬಿಸಿತು. ಅನಂತರದಲ್ಲಿ ಗಿರೀಶ್ ಕಾಸರವಳ್ಳಿ ಅನೇಕ ಚಿತ್ರಗಳನ್ನು ನಿರ್ದೇಶಿಸಿ ಹೊಸ ಅಲೆ ಸಿನಿಮಾಗಳಿಗೆ ಭದ್ರ ಬುನಾದಿ ಹಾಕಿದರು. ಗಿರೀಶ್ ಸಂಸ್ಕೃತಿಯ ಶೋಧಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಮಾಧ್ಯಮದ ಬಗ್ಗೆ ಅವರಿಗೆ ಬದ್ಧತೆ ಇತ್ತು. ರಾಜಿಗೆ ಎಂದಿಗೂ ಅವಕಾಶ ಕಲ್ಪಿಸಿಕೊಟ್ಟಿಲ್ಲ.ಕಲಾತ್ಮಕ ದೃಷ್ಟಿಕೋನದ ಮೂಲಕ ಅನ್ವೇಷಣೆ ಮಾಡಲು ಸಿನಿಮಾ ಮಾಧ್ಯಮವನ್ನು ಅವರು ಅಳವಡಿಸಿಕೊಂಡಿದ್ದಾರೆ. ಅವರಿಗೆ ಇದ್ದ ಮಾಧ್ಯಮದ ಬದ್ಧತೆ ದೊಡ್ಡ ವೈಚಾರಿಕ ನೆಲೆಗಟ್ಟನ್ನು ಒದಗಿಸಿದೆ.ಯು.ಆರ್.ಅನಂತ ಮೂರ್ತಿಯವರ ಘಟಶ್ರಾದ್ಧ ಕೃತಿ ಬ್ರಾಹ್ಮಣ ಸಮಾಜದ ಸುತ್ತ ಹೆಣೆದುಕೊಂಡಿದೆ. ಈ ಸಮುದಾಯದಲ್ಲಿದ್ದ ಸಾಂಪ್ರದಾಯಿಕತೆ ಹೆಣ್ಣಿನ ಮೇಲೆ ಹೇಗೆ ವಿನಾಶಕಾರಿ ಪರಿಣಾಮ ಬೀರುತ್ತದೆಂಬುದನ್ನು ಕಟ್ಟಿಕೊಡುತ್ತದೆ. ಕಾಸರವಳ್ಳಿ ಈ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ದೃಷ್ಟಿಕೋನದಲ್ಲಿ ಸಿನಿಮಾ ಸ್ಪರ್ಶ ನೀಡಿದರು. ಅವರು ಹೊಸ ಆಯಾಮದಲ್ಲಿ ನಿರ್ದೇಶಿಸಿದ `ಘಟಶ್ರಾದ್ಧ~ ಸಿನಿಮಾ ನೋಡಿ ಕಾರ್ನಾಡ್ ಮೆಚ್ಚಿ ಬೆನ್ನು ತಟ್ಟಿದ್ದರು.ನಂತರ ಬಂದ `ತಬರನ ಕಥೆ~ ಆಡಳಿತಶಾಹಿ ವ್ಯವಸ್ಥೆ ಕುರಿತ ಚಿತ್ರ. ತಬರ ಈ ವ್ಯವಸ್ಥೆಯೊಳಗೆ ಸಿಲುಕಿಕೊಂಡು ಹೇಗೆ ಬಲಿ ಪಶುವಾಗುತ್ತಾನೆ, ಭ್ರಮನಿರಸನಗೊಳ್ಳುತ್ತಾನೆ ಎಂಬುದನ್ನು ಈ ಚಿತ್ರಕಟ್ಟಿಕೊಡುತ್ತದೆ. 1990ರಲ್ಲಿ ಬಂದ `ಮನೆ~ ಹಿಂದಿನ ಚಿತ್ರಗಳಿಗಿಂತ ಭಿನ್ನವಾದುದು. ಅವರ ಈ ಚಿತ್ರ ನಗರಕೇಂದ್ರಿತ ವ್ಯಕ್ತಿಯ ಸಮಸ್ಯೆ ಬಿಂಬಿಸುತ್ತದೆ. ನಂತರ `ತಾಯಿ ಸಾಹೇಬ~, `ದ್ವೀಪ~ ಚಿತ್ರಗಳಿಂದ ಅವರು ಗಮನ ಸೆಳೆದರು. `ದ್ವೀಪ~ ಅವರ ಸೃಜನಶೀಲತೆಗೆ ಸಾಕ್ಷಿಯಾದಂತಹ ಸಿನಿಮಾ. ಈ ಚಿತ್ರ ಎಲ್ಲ ರೀತಿಯ ಸಾಧ್ಯತೆಗಳನ್ನು ತೆರೆದಿಟ್ಟಿತು. ನಂತರದ `ಗುಲಾಬಿ ಟಾಕೀಸ್~ ಹಾಗೂ `ಕನಸೆಂಬೋ ಕುದುರೆಯನೇರಿ~ ಅವರ ಪ್ರಯೋಗಶೀಲತೆಯನ್ನು ಸಮರ್ಥಿಸಿದವು.   

ಪ್ರತಿಕ್ರಿಯಿಸಿ (+)